ಬೆಂಗಳೂರು: ಇಂಡಿಯನ್ ಸೂಪರ್ ಲೀಗ್(Indian Super League) ಫುಟ್ಬಾಲ್ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ರೆಫ್ರಿ ತೀರ್ಪು ವಿರೋಧಿಸಿ ತಂಡವೊಂದು ಮೈದಾನ ತೊರೆದ ಘಟನೆ ಶುಕ್ರವಾರ(ಮಾರ್ಚ್ 3) ಕಂಠೀರವ ಕ್ರೀಡಾಂಗಣದಲ್ಲಿ ನಡೆದಿದೆ. ಬೆಂಗಳೂರು ಎಫ್‌ಸಿ(Bengaluru FC) ಮತ್ತು ಕೇರಳ ಬ್ಲಾಸ್ಟರ್ಸ್(Kerala Blasters) ನಡುವಿನ ಎಲಿಮಿನೇಟರ್ ಪಂದ್ಯದಲ್ಲಿ ಈ ಘಟನೆ ನಡೆದಿದೆ.
ಜಿದ್ದಾಜಿದ್ದಿನಿಂದ ಕೂಡಿದ ಈ ಕಾಲ್ಜೆಂಡಿನ ಕಾದಾಟದಲ್ಲಿ ಉಭಯ ತಂಡಗಳಿಗೂ ಹಲವು ಗೋಲ್ ಬಾರಿಸುವ ಅವಕಾಶಗಳಿದ್ದರೂ ಗೋಲ್ ಕೀಪರ್ಗಳ ಪರಾಕ್ರಮದ ಮುಂದೆ ಇದು ಫಲ ನೀಡಲಿಲ್ಲ. ನಿಗದಿತ 90 ನಿಮಿಷಗಳ ಆಟದಲ್ಲಿ ಯಾವುದೇ ಗೋಲು ದಾಖಲಾಗದ ಹಿನ್ನೆಲೆಯಲ್ಲಿ ಹೆಚ್ಚುವರಿ ಸಮಯ ನೀಡಲಾಯಿತು.
ಹೆಚ್ಚುವರಿ ಸಮಯದಲ್ಲಿ ಬೆಂಗಳೂರು ತಂಡದ ಸುನೀಲ್ ಚೆಟ್ರಿ(sunil chhetri) ಫ್ರಿ ಕಿಕ್ ಮೂಲಕ ಗೋಲು ಗಳಿಸಿದರು. ಆದರೆ ರೆಫ್ರಿ ವಿಸಿಲ್ ಹೊಡೆಯುವ ಮೊದಲೇ ಸುನೀಲ್ ಚೆಟ್ರಿ ಫ್ರಿ ಕಿಕ್ ತೆಗೆದುಕೊಂಡು ಗೋಲು ಗಳಿಸಿದರು ಎಂದು ಬ್ಲಾಸ್ಟರ್ಸ್ ತಂಡದ ಆಟಗಾರರು ವಿರೋಧ ವ್ಯಕ್ತಪಡಿಸಿದರು. ಇದೇ ವೇಳೆ ಬ್ಲಾಸ್ಟರ್ಸ್ ತಂಡದ ನಾಯಕ ಏಡ್ರಿಯನ್ ಲುನಾ ರೆಫ್ರಿ ಕ್ರಿಸ್ಟಲ್ ಜಾನ್ ಜತೆ ಮೈದಾನದಲ್ಲೇ ಜಗಳಕ್ಕೇ ಇಳಿದರು. ಆದರೆ ರೆಫ್ರಿ ಬೆಂಗಳೂರು ತಂಡಕ್ಕೆ ಗೋಲು ನೀಡಿದರು.
ಇದನ್ನೂ ಓದಿ ISL: ಬೆಂಗಳೂರು ಎಫ್‌ಸಿ-ಕೇರಳ ಬ್ಲಾಸ್ಟರ್ಸ್ ಅಭಿಮಾನಿಗಳ ಮಧ್ಯೆ ಹೊಡೆದಾಟ; ವಿಡಿಯೊ ವೈರಲ್
ಇದರಿಂದ ಕೋಪಗೊಂಡ ಬ್ಲಾಸ್ಟರ್ಸ್ ತರಬೇತುದಾರ ಇವಾನ್ ವುಕೊಮಾನೋವಿಕ್ ತನ್ನ ತಂಡವನ್ನು ಮೈದಾನದಿಂದ ಹೊರಗೆ ಕರೆದರು. ಸುಮಾರು 20 ನಿಮಿಷಗಳ ಬಳಿಕವೂ ಕೇರಳ ತಂಡ ಮೈದಾನಕ್ಕೆ ಬಾರದ ಕಾರಣ ಬೆಂಗಳೂರು ತಂಡವು ಪಂದ್ಯ ಗೆದ್ದಿತು ಎಂದು ರೆಫ್ರಿ ಘೋಷಿಸಿದರು. 1-0 ಅಂತರದಿಂದ ಗೆದ್ದ ಬೆಂಗಳೂರು ಎಫ್‌ಸಿ ತಂಡ ಸೆಮಿಫೈನಲ್ ಪ್ರವೇಶ ಪಡೆಯಿತು. ಮುಂದಿನ ಸೆಮಿ ಪಂದ್ಯದಲ್ಲಿ ಬೆಂಗಳೂರು ತಂಡ ಮುಂಬೈ ಸವಾಲು ಎದುರಿಸಲಿದೆ.