ಮುಂಬಯಿ : ಸಂಘಟಿತ ಹೋರಾಟದ ಹೊರತಾಗಿಯೂ ಪ್ರಮುಖ ಘಟ್ಟದಲ್ಲಿ ಬ್ಯಾಟಿಂಗ್ ವೈಫಲ್ಯ ಎದುರಿಸಿದ ಭಾರತ ವನಿತೆಯರ ತಂಡ ಪ್ರವಾಸಿ ಆಸ್ಟ್ರೇಲಿಯಾ ತಂಡದ ವಿರುದ್ದ ಐದು ಪಂದ್ಯಗಳ ಸರಣಿಯ (INDvsAUS W) ನಾಲ್ಕನೇ ಪಂದ್ಯದಲ್ಲಿ 7 ರನ್ ಸೋಲು ಅನುಭವಿಸಿದೆ. ಇದರೊಂದಿಗೆ ಆತಿಥೇಯ ಭಾರತ ತಂಡ ಇನ್ನೂ ಒಂದು ಪಂದ್ಯ ಬಾಕಿ ಇರವಂತೆಯೇ 3-1 ಅಂತರದಿಂದ ಸರಣಿಯನ್ನು ಕಳೆದುಕೊಂಡಿತು.
ಇಲ್ಲಿನ ಬ್ರಬೋರ್ನ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಶನಿವಾರ ಸಂಜೆ ನಡೆಸ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 188 ರನ್ ಬಾರಿಸಿತು. ಪ್ರತಿಯಾಗಿ ಆಡಿದ ಹರ್ಮನ್ ಪ್ರೀತ್ ಕೌರ್ ಪಡೆ ತನ್ನ ಪಾಲಿನ ಓವರ್ಗಳು ಮುಕ್ತಾಯಗೊಂಡಾಗ 181 ರನ್ಗಳನ್ನು ಮಾತ್ರ ಬಾರಿಸಲು ಶಕ್ತಗೊಂಡು ಸೋಲೊಪ್ಪಿಕೊಂಡಿತು.
ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ ಅಲಿಸಾ ಹೀಲಿ ಅವರ 30 ರನ್ಗಳ ನೆರವಿನಿಂದ ಉತ್ತಮ ಆರಂಭ ಪಡೆಯಿತು. ಬೆತ್ ಮೂನಿ (2) ಹಾಗೂ ತಹಿಲಾ ಮೆಕ್ಗ್ರಾಥ್ (09) ಅವರನ್ನು ಬೇಗನೆ ಔಟ್ ಮಾಡುವ ಮೂಲಕ ಭಾರತ ಚೇತರಿಕೆ ಕಂಡಿತು. ಆದರೆ, ಆಶ್ಲ್ಲೇ ಗಾರ್ಡ್ನರ್ (42) ಹಾಗೂ ಎಲಿಸ್ ಪೆರಿ (72) ಸ್ಫೋಟಕ ಬ್ಯಾಟಿಂಗ್ ನಡೆಸಿ ಬೃಹತ್ ಮೊತ್ತ ಪೇರಿಸಿದರು. ಭಾರತ ಪರ ದೀಪ್ತಿ ಶರ್ಮ 35 ರನ್ಗಳಿಗೆ 2 ವಿಕೆಟ್ ಕಬಳಿಸಿದರು.
ಗುರಿ ಬೆನ್ನಟ್ಟಿದ ಭಾರತ ವನಿತೆಯರ ಪಡೆ ಆರಂಭದಲ್ಲೇ ಆಘಾತ ಎದುರಿಸಿತು. ಸ್ಮೃತಿ ಮಂಧಾನ 16 ರನ್ಗಳಿಗೆ ಸೀಮಿತಗೊಂಡರೆ ಶಫಾಲಿ ವರ್ಮ 20 ರನ್ ಬಾರಿಸಿದರು. ಜೆಮಿಮಾ ರೋಡ್ರಿಗಸ್ 8 ರನ್ ಬಾರಿಸಿ ಔಟಾದರು. ನಾಯಕಿ ಹರ್ಮನ್ಪ್ರೀತ್ ಕೌರ್ 46 ರನ್ ಬಾರಿಸಿ ಗೆಲುವಿನ ವಿಶ್ವಾಸ ಮೂಡಿಸಿದರೂ ಹೆಚ್ಚು ಹೊತ್ತು ಕ್ರೀಸ್ನಲ್ಲಿ ಇರಲು ಅವರಿಗೆ ಸಾಧ್ಯವಾಗಲಿಲ್ಲ. ದೇವಿಕಾ ವೈದ್ಯ 32 ರನ್ ಕೊಡುಗೆ ಕೊಟ್ಟರೆ, ರಿಚಾ ಘೋಷ್ 40 ರನ್ ಬಾರಿಸಿದರೂ ಭಾರತಕ್ಕೆ ಜಯ ಲಭಿಸಲಿಲ್ಲ.
ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಜಯ ಸಾಧಿಸಿತ್ತು. ನಂತರದ ಪಂದ್ಯ ಸೂಪರ್ ಓವರ್ ಮೂಲಕ ಭಾರತದ ಪಾಲಾಗಿತ್ತು. ಮುಂದಿನೆರಡು ಪಂದ್ಯಗಳು ಪ್ರವಾಸಿ ತಂಡದ ವಶವಾಗಿದೆ. ಕೊನೇ ಪಂದ್ಯ ಡಿಸೆಂಬರ್ 20ರಂದು ನಡೆಯಲಿದೆ.
ಇದನ್ನೂ ಓದಿ | IREW VS PAKW | ಪಾಕ್ ವನಿತೆಯರಿಗೆ ತವರಲ್ಲೇ ಮುಖಭಂಗ; ಸರಣಿ ಗೆದ್ದ ಐರ್ಲೆಂಡ್ ತಂಡ