ಮುಂಬಯಿ: ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ 2023ರ ಫೈನಲ್ ಪಂದ್ಯ ಜೂನ್ 7ರಂದು ಆರಂಭವಾಗಲಿದೆ. ಆದರೆ, ಭಾರತ ತಂಡದ ಕ್ರಿಕೆಟಿಗರೆಲ್ಲರೂ ಈಗ ಐಪಿಎಲ್ನಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೆ, ಐಪಿಎಲ್ ಫೈನಲ್ ಪಂದ್ಯ ಮೇ28ರವರೆಗೂ ನಡೆಯಲಿದ್ದು, ಅಲ್ಲಿಂದ ಹತ್ತು ದಿನಗಳಲ್ಲಿ ಪ್ರತಿಷ್ಠಿತ ಪಂದ್ಯಕ್ಕೆ ಸಜ್ಜಾಗಿದೆ. ಹೀಗಾಗಿ ಚುಟುಕು ಕ್ರಿಕೆಟ್ನಿಂದ ದೀರ್ಘ ಅವಧಿಯ ಕ್ರಿಕೆಟ್ಗೆ ಮರಳಲು ಆಟಗರರಿಗೆ ಸಾಕಷ್ಟು ಅಭ್ಯಾಸ ಬೇಕಾಗುತ್ತದೆ. ಹೀಗಾಗಿ ಹಂತಹಂತವಾಗಿ ತಂಡವನ್ನು ಇಂಗ್ಲೆಂಡ್ಗೆ ಕಳುಹಿಸಿ ಅಲ್ಲಿ ಅಭ್ಯಾಸ ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ಸಿದ್ಥತೆ ನಡೆಸುತ್ತಿದೆ ಎಂಬುದಾಗಿ ಕ್ರಿಕ್ಬಜ್ ವರದಿ ಮಾಡಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ 2023 (ಐಪಿಎಲ್) ಪೂರ್ಣಗೊಳ್ಳುವ ಮೊದಲೇ ಒಂದು ತಂಡ ಇಂಗ್ಲೆಂಡ್ಗೆ ಪ್ರಯಾಣ ಬೆಳೆಸಲಿದೆ. ಪ್ಲೇಆಫ್ ಹಂತಕ್ಕೆ ಪ್ರವೇಶಿಸದ ಐಪಿಎಲ್ ತಂಡಗಳಲ್ಲಿ ಇರುವ ಆಟಗಾರರು ಈ ಬ್ಯಾಚ್ನಲ್ಲಿ ಇರುತ್ತಾರೆ. ಕ್ರಿಕ್ಬಜ್ ವರದಿಯಂತೆ ಮೊದಲ ಬ್ಯಾಚ್ ಮೇ 23ರಂದು ಇಂಗ್ಲೆಂಡ್ಗೆ ಹೋಗಲಿದೆ. ನಂತರದ ಬ್ಯಾಚ್ನಲ್ಲಿ ಕ್ವಾಲಿಫೈಯರ್ ಪಂದ್ಯಗಳಲ್ಲಿ ಸೋತಿರುವ ತಂಡಗಳಲ್ಲಿರುವ ಆಟಗಾರರು ಇಂಗ್ಲೆಂಡ್ಗೆ ಪ್ರಯಾಣ ಮಾಡಲಿದ್ದಾರೆ. ಮೇ 26ಕ್ಕೆ ಪ್ರಯಾಣ ಬೆಳೆಸಬಹುದು ಎನ್ನಲಾಗಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮೇ 28ರಂದು ಐಪಿಎಲ್ 2023ರ ಫೈನಲ್ ಮುಗಿದ ಕೂಡಲೇ ಕೊನೆಯ ಬ್ಯಾಚ್ ಮೇ 30 ರಂದು ಇಂಗ್ಲೆಂಡ್ ವಿಮಾನ ಹತ್ತಲಿದೆ.
ಇದನ್ನೂ ಓದಿ : WTC Final 2023 : ಭಾರತ-ಆಸೀಸ್ ವಿಶ್ವ ಟೆಸ್ಟ್ ಸಮರಕ್ಕೆ ಯಾವ ಚೆಂಡು ಬಳಕೆ?: ಇಲ್ಲಿದೆ ಮಾಹಿತಿ
ಆಯಾ ತಂಡಗಳ ಪ್ರದರ್ಶನವನ್ನು ಗಮನಿಸಿದರೆ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್ ಮತ್ತು ರವಿಚಂದ್ರನ್ ಅಶ್ವಿನ್ ಅವರಂತಹ ಆಟಗಾರರು ಮೇ 23 ರಂದು ಇಂಗ್ಲೆಂಡ್ಗೆ ಪ್ರಯಾಣ ಬೆಳೆಸಬಹುದು. ಈ ಆಟಗಾರರು ಮೊದಲ ಬ್ಯಾಚ್ನಲ್ಲಿ ತೆರಳುವ ಸಾಧ್ಯತೆಗಳಿವೆ.
ಅಕ್ಷರ್ ಐಪಿಎಲ್ 2023 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿದ್ದರು. ಆದರೆ, ಡೆಲ್ಲಿ ತಂಡ ಪ್ಲೇಆಫ್ ಹಂತಕ್ಕೆ ಪ್ರವೇಶ ಮಾಡದೇ ತನ್ನ ಅಭಿಯಾನ ಲೀಗ್ ಹಂತದಲ್ಲೇ ಮುಗಿಸಿದೆ. ಶಾರ್ದುಲ್ ಆಡುವ ಕೋಲ್ಕತಾ ನೈಟ್ ರೈಡರ್ಸ್ ಕೂಡ ಪ್ಲೇಆಫ್ ಪ್ರವೇಶಿಸುವ ಸಾಧ್ಯತೆ ಬಹಳ ಕಡಿಮೆಯಿದೆ. ಮತ್ತೊಂದೆಡೆ, ರಾಜಸ್ಥಾನ್ ರಾಯಲ್ಸ್ ತಂಡದ ಅವಕಾಶವೂ ಕನಿಷ್ಠ ಪ್ರಮಾಣದಲ್ಲಿದೆ. ಹೀಗಾಗಿ ಆ ತಂಡದ ಆರ್ ಅಶ್ವಿನ್ ಕೂಡ ಬೇಗ ಇಂಗ್ಲೆಂಡ್ಗೆ ತೆರಳಲಿದ್ದಾರೆ. ಇನ್ನು ಯಾವುದೇ ಐಪಿಎಲ್ ತಂಡಗಳ ಭಾಗವಾಗಿರದ ಚೇತೇಶ್ವರ ಪೂಜಾರ ಕೂಡ ಮೊದಲ ಮೊದಲ ಬ್ಯಾಚ್ನಲ್ಲಿಯೇ ಇಂಗ್ಲೆಂಡ್ಗೆ ಹೋಗಲಿದ್ದಾರೆ.