ಕರಾಚಿ: 2011ರ ವಿಶ್ವಕಪ್ನಂತೆಯೇ ಈ ಬಾರಿಯೂ ಭಾರತ(IND vs PAK) ತಂಡ ವಿಶ್ವಕಪ್(icc world cup 2023) ಗೆಲ್ಲಲಿದೆ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಶೋಯೆಬ್ ಅಖ್ತರ್ ಭವಿಷ್ಯ ನುಡಿದ್ದಾರೆ. ಆದರೆ ಪಾಕಿಸ್ತಾನ ತಂಡ ಕಪ್ ಗೆಲ್ಲುವ ಯಾವುದೇ ಸಾಧ್ಯತೆ ಇಲ್ಲ ಎಂದಿದ್ದಾರೆ.
ಶನಿವಾರ ನಡೆದಿದ್ದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದ ಗೆಲುವು ಸಾಧಿಸಿತ್ತು. ಇದೇ ವಿಚಾರವಾಗಿ ಸಂದರ್ಶನದಲ್ಲಿ ಮಾತನಾಡಿದ ಅಖ್ತರ್, “ತವರಿನಲ್ಲಿ ನಡೆಯುತ್ತಿರುವ 2023ನೇ ಸಾಲಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಕಪ್ ಗೆಲ್ಲಲಿದೆ ಎಂಬ ಸಂಪೂರ್ಣ ನಂಬಿಕೆ ಮತ್ತು ಭರವಸೆ ನನಗಿದೆ” ಎಂದು ಹೇಳಿದ್ದಾರೆ.
“2011ರ ವಿಶ್ವಕಪ್ ಇತಿಹಾಸ ಮತ್ತೆ ಮರುಕಳಿಸಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ. ತವರಿನಲ್ಲಿ ಭಾರತವನ್ನು ಸೋಲಿಸುವುದು ಅಷ್ಟು ಸುಲಭದ ಮಾತಲ್ಲ. ಭಾರತ ಸೆಮಿಫೈನಲ್ ಹಂತ ದಾಟಿದ್ದೇ ಆದರೆ ಕಪ್ ತನ್ನದಾಗಿಸಿಕೊಳ್ಳುತ್ತದೆ. ಭಾರತ ತಂಡ ಅತ್ಯಂತ ಶ್ರೇಷ್ಠ ಪ್ರದರ್ಶನ ತೋರುತ್ತಿದೆ. 2019ರಲ್ಲಿಯೂ ಭಾರತವೇ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಆದರೆ ಅದೃಷ್ಟ ಕೈಕೊಟ್ಟ ಕಾರಣ ಭಾರತ ಸೆಮಿಯಲ್ಲಿ ಸೋಲು ಕಂಡಿತು. ಎಲ್ಲ ಸಾಮರ್ಥ್ಯವಿರುವ ಭಾರತಕ್ಕೆ ಈ ಬಾರಿ ಅದೃಷ್ಟವೊಂದು ಕೈಹಿಡಿದರೆ ಕಪ್ ಗ್ಯಾರಂಟಿ”
ಟ್ರೋಲ್ ಆಗಿದ್ದ ಅಖ್ತರ್
ಭಾರತ ಮತ್ತು ಪಾಕ್ ಪಂದ್ಯಕ್ಕೂ ಮುನ್ನ ಅಖ್ತರ್ ಟ್ರೋಲ್ ಆಗಿದ್ದರು. ಪಾಕಿಸ್ತಾನ ತಂಡಕ್ಕೆ ಬೆಂಬಲ ಸೂಚಿಸಿ ಇತಿಹಾಸ ಪತನಗೊಳ್ಳಲಿದೆ ಎಂದು ಬರೆಯಬೇಕಿತ್ತು. ಆದರೆ ಅವರು ಇತಿಹಾಸ ಮತ್ತೆ ಮರುಕಳಿಸಲಿದೆ ಎಂದು ಬರೆದಿದ್ದರು. ಇದು ಟ್ರೋಲ್ ಆಗಿತ್ತು. ಏಕೆಂದರೆ ಭಾರತ ಮತ್ತು ಪಾಕಿಸ್ತಾನ ಈ ಪಂದ್ಯಕ್ಕೂ ಮುನ್ನ ವಿಶ್ವಕಪ್ನಲ್ಲಿ 7 ಬಾರಿ ಮುಖಾಮುಖಿಯಾಗಿದ್ದವು. ಏಳೂ ಪಂದ್ಯಗಳಲ್ಲಿಯೂ ಭಾರತವೇ ಗೆದ್ದು ಸೋಲಿಲ್ಲದ ಸರದಾರನಾಗಿ ಕಾಣಿಸಿಕೊಂಡಿತ್ತು. ಇತಿಹಾಸ ಮರುಕಳಿಸಲಿದೆ ಎಂದರೆ ಭಾರತ 8ನೇ ಬಾರಿಯೂ ಗೆಲ್ಲಲಿದೆ ಎಂದತಾಗುತ್ತದೆ. ಇದೇ ಕಾರಣಕ್ಕೆ ನೆಟ್ಟಿಗರು ಅಖ್ತರ್ ಅವರನ್ನು ಟ್ರೋಲ್ ಮಾಡಿದ್ದರು.
ಇದನ್ನೂ ಓದಿ ICC World Cup 2023: ವಿಶ್ವಕಪ್ ಇತಿಹಾಸದಲ್ಲೇ ಆಸ್ಟ್ರೇಲಿಯಾಕ್ಕೆ ಭಾರಿ ಮುಖಭಂಗ
ತಿರುಗೇಟು ನೀಡಿದ್ದ ಸಚಿನ್-ಸೆಹವಾಗ್
ಸಚಿನ್ ತೆಂಡೂಲ್ಕರ್ ಕೂಡ ಶೋಯೆಬ್ ಅಖ್ತರ್ ಮಾಡಿರುವ ಟ್ವೀಟ್’ಗೆ ತಿರಿಗೇಟು ನೀಡಿ “ನನ್ನ ಸ್ನೇಹಿತನೇ, ನಿಮ್ಮ ಸಲಹೆಯನ್ನು ಅನುಸರಿಸಿದ್ದಾರೆ ಮತ್ತು ಎಲ್ಲವೂ ಸರಾಗವಾಗಿದೆ” ಎಂದು ಬರೆದಿದ್ದರು. ಪಂದ್ಯಕ್ಕೂ ಮುನ್ನ ಅಖ್ತರ್, ಸಚಿನ್ ವಿಕೆಟ್ ಪಡೆದ ಫೋಟೊವನ್ನು ಹಂಚಿಕೊಂಡು “ನೀವು ನಾಳೆ ಇಂತಹದ್ದನ್ನೇ ಮಾಡಲು ಬಯಸಿದರೆ, ಶಾಂತವಾಗಿರಿ’ ಎಂದು ಬರೆದ್ದರು.
ವೀರೇಂದ್ರ ಸೆಹವಾಗ್ ಕೂಟ ಅಖ್ತರ್ ಕಾಲೆಳೆದಿದ್ದರು, “ಬಹುಶಃ ಪಾಕಿಸ್ತಾನ ಬ್ಯಾಟ್ಸ್‌ಮನ್ಸ್ ಆದಷ್ಟು ಬೇಗ ಪೆವಿಲಿಯನ್’ಗೆ ಮರಳಲು ನಿರ್ಧರಿಸಿದ್ದಾರೆ. ಯಾರೂ ಇಲ್ಲ ಶೋಯೆಬ್ ಭಾಯ್. ಪ್ರೇಮವಿರಲಿ, ಇಲ್ಲದಿರಲಿ, ಮಜಾ ಇರೋದು 8-0 ಸೋಲಿನಲ್ಲಿ!” ಎಂದು ಟ್ವೀಟ್ ಮಾಡಿದ್ದರು.
ನರೇಂದ್ರ ಮೋದಿ ಕ್ರಿಕೆಟ್ ಸ್ಡೇಡಿಯಂನಲ್ಲಿ(Narendra Modi Stadium) ಶನಿವಾರ ನಡೆದಿದ್ದ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತ ಬಿಗಿ ಬೌಲಿಂಗ್ ದಾಳಿ ಸಂಘಟಿಸಿತು. ನಾಟಕೀಯ ಕುಸಿತ ಕಂಡ ಪಾಕಿಸ್ತಾನ 42.5 ಓವರ್ ಗಳಲ್ಲಿ 191 ರನ್ ಗಳಿಗೆ ಸರ್ವಪತನ ಕಂಡಿತು. ಗುರಿ ಬೆನ್ನಟ್ಟಿದ ಭಾರತ 30.3 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿತ್ತು.