ದುಬೈ : ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಸೆಪ್ಟೆಂಬರ್ ೪ರಂದು ನಡೆಯಲಿರುವ ‘ಸಂಡೆ ಫೈಟ್’ಗೆ ವೇದಿಕೆ ಸಜ್ಜುಗೊಂಡಿದ್ದು, ಭಾರತ ತಂಡದ ಮ್ಯಾನೇಜ್ಮೆಂಟ್ ಅಗತ್ಯ ಸುಧಾರಣೆಗಳ ಕಡೆಗೆ ಚಿತ್ತ ನೆಟ್ಟಿದೆ. ಪ್ರಮುಖವಾಗಿ ಆರಂಭಿಕ ಬ್ಯಾಟಿಂಗ್ ವೈಫಲ್ಯ ಹಾಗೂ ಡೆತ್ ಓವರ್ ಬೌಲಿಂಗ್ ಬಿಗುಗೊಳಿಸುವ ಕಡೆಗೆ ಗಮನ ಹರಿಸುತ್ತಿದೆ. ಗುಂಪು ಹಂತದ ಮೊದಲ ಪಂದ್ಯದಲ್ಲಿ ಭಾರತ ತಂಡ ಪಾಕ್ ಎದುರು ಗೆಲುವು ಸಾಧಿಸಿರುವ ಹೊರತಾಗಿಯೂ ಕೆಲವೊಂದು ವೈಫಲ್ಯಗಳು ರಾರಾಜಿಸಿದ್ದವು. ಅವುಗಳನ್ನು ಸರಿಪಡಿಸಿಕೊಂಡು ಕಣಕ್ಕಿಳಿಯುವ ನಿಟ್ಟಿನಲ್ಲಿ ಕೋಚ್ ರಾಹುಲ್ ದ್ರಾವಿಡ್ ರೂಪುರೇಷೆಗಳನ್ನು ರೂಪಿಸಲಿದ್ದಾರೆ.
ಪವರ್ ಪ್ಲೇ ಅವಧಿಯಲ್ಲಿ ಭಾರತ ಬ್ಯಾಟಿಂಗ್ ವಿಭಾಗವು ಹೆಚ್ಚು ರನ್ ಗಳಿಸದಿರುವುದು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್‌ನ ಮಂಡೆಬಿಸಿಯ ಸಂಗತಿಯಾಗಿದೆ. ನಾಯಕ ರೋಹಿತ್ ಶರ್ಮ ಹಾಗೂ ಉಪ ನಾಯಕ ಕೆ. ಎಲ್ ರಾಹುಲ್ ವೈಫಲ್ಯ ಕಾಣುತ್ತಿರುವ ಕಾರಣ ಭಾರತಕ್ಕೆ ಹಿನ್ನಡೆಯಾಗುತ್ತಿದೆ. ವಿರಾಟ್ ಕೊಹ್ಲಿಗೆ ಫಾರ್ಮ್‌ಗೆ ಮರಳಿದ್ದರೂ, ಟಿ೨೦ ಮಾದರಿಗೆ ಬೇಕಾಗಿರುವ ಅಬ್ಬರದ ಬ್ಯಾಟಿಂಗ್ ಮಾಡುತ್ತಿಲ್ಲ.
ರವೀಂದ್ರ ಜಡೇಜಾ ಅವರ ಅಲಭ್ಯತೆಯ ಹಿನ್ನೆಲೆಯಲ್ಲಿ ಅಕ್ಷರ್ ಪಟೇಲ್, ಒಮ್ಮತದ ಆಯ್ಕೆಯಾಗಿದೆ. ಆದರೆ, ಎಡಗೈ ಬೌಲರ್ ಅಲಭ್ಯತೆಯ ಬಳಿಕ ಸಮತೋಲಿತ ತಂಡವನ್ನು ರಚಿಸುವ ಆಯ್ಕೆ ಕೋಚ್ ರಾಹುಲ್ ದ್ರಾವಿಡ್ ಅವರ ಮುಂದಿದೆ. ಕಳೆದ ವಾರ ನಡೆದ ಪಂದ್ಯದಲ್ಲಿ ರವೀಂದ್ರ ಜಡೇಜಾ ಅವರಿಗೆ ರಾಹುಲ್ ದ್ರಾವಿಡ್ ಮುಂಬಡ್ತಿ ಕೊಟ್ಟಿದ್ದರು. ಎಡಗೈ ಹಾಗೂ ಬಲಗೈ ಬ್ಯಾಟರ್‌ಗಳ ಸಮತೋಲನ ಮಾಡಲು ಅವರು ಆ ರೀತಿ ಮಾಡಿದ್ದರು. ಆದರೆ ಆ ಪಂದ್ಯದಲ್ಲಿ ರಿಷಭ್ ಪಂತ್‌ಗೆ ವಿಶ್ರಾಂತಿ ಕೊಟ್ಟಿದ್ದ ಕಾರಣ ಆ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಹೀಗಾಗಿ ಈ ಬಾರಿ ರಿಷಭ್‌ಗೆ ಅವಕಾಶ ನೀಡಬಹುದು ಎನ್ನಲಾಗುತ್ತಿದೆ. ಹಾಂಕಾಂಗ್ ವಿರುದ್ಧ ಸಿಡಿದೆದ್ದ ಸೂರ್ಯಕುಮಾರ್ ಪಾಕ್ ವಿರುದ್ಧವೂ ಸ್ಫೋಟಕ ಬ್ಯಾಟಿಂಗ್ ನಡೆಸುವ ಖಾತರಿಯಿದೆ.
ಒಂದೆಡೆ ಸಾಂಪ್ರದಾಯಕ ಪ್ರತಿಸ್ಪರ್ಧಿ ಪಾಕಿಸ್ತಾನ ಮತ್ತೊಂದೆಡೆ ಮುಂಬರುವ ಟಿ೨೦ ವಿಶ್ವ ಕಪ್‌ಗೆ ತಂಡ ಸಿದ್ಧಪಡಿಸುವ ಗುರಿ ಹೊಂದಿರುವ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್‌ಗೆ ಹಿರಿಯ ಆಟಗಾರರಾದ ರಾಹುಲ್, ರೋಹಿತ್ ಹಾಗೂ ಕೊಹ್ಲಿ ಫಾರ್ಮ್ ಬಗ್ಗೆ ಚಿಂತೆ ಶುರುವಾಗಿದೆ. ಹೀಗಾಗಿ ಭಾನುವಾರದ ಪಂದ್ಯದಲ್ಲಿ ಅವರೆಲ್ಲರ ಪ್ರದರ್ಶನವೂ ವಿಮರ್ಶೆಗೆ ಒಳಪಡಲಿದೆ.
ಮಿಂಚಲಿದ್ದಾರೆ ಭುವಿ
ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್ ಕುಮಾರ್ ಬಗ್ಗೆ ಮ್ಯಾನೇಜ್ಮೆಂಟ್ ವಿಶ್ವಾಸ ಇಡಬಹುದು. ಅಂತೆಯೇ ಪಾಕ್ ವಿರುದ್ಧದ ಹಿಂದಿನ ಪಂದ್ಯದ ಪಂದ್ಯಶ್ರೇಷ್ಠ ಪ್ರಶಸ್ತಿ ವಿಜೇತ ಹಾರ್ದಿಕ್ ಪಾಂಡ್ಯ ಕೂಡ ತಂಡಕ್ಕೆ ಮತ್ತೊಮ್ಮೆ ಆಧಾರವಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಆದರೆ, ಅನನುಭವಿ ಬೌಲರ್‌ಗಳಾದ ಆವೇಶ್ ಖಾನ್ ಹಾಗೂ ಅರ್ಶ್‌ದೀಪ್ ಸಿಂಗ್ ಡೆತ್ ಓವರ್‌ಗಳಲ್ಲಿ ರನ್ ಬಿಟ್ಟುಕೊಡುತ್ತಿದ್ದಾರೆ. ಅದರಲ್ಲೂ ಹಾಂಕಾಂಗ್ ವಿರುದ್ಧ ೧೫೫ ರನ್‌ಗಳ ಬೃಹತ್ ಜಯ ದಾಖಲಿಸಿರುವ ಪಾಕ್ ವಿರುದ್ಧ ಆಡುವಾಗ ಬೌಲಿಂಗ್‌ನಲ್ಲಿ ಹೆಚ್ಚು ಸುಧಾರಣೆ ಅಗತ್ಯವಿದೆ.
ಪಾಕ್‌ಗೆ ಅಗ್ರ ಕ್ರಮಾಂಕದ ಆಧಾರ
ಪಾಕಿಸ್ತಾನ ತಂಡಕ್ಕೆ ಆಗ್ರ ಕ್ರಮಾಂಕದ ಬ್ಯಾಟರ್‌ಗಳೇ ಆಧಾರವಾಗಿದ್ದಾರೆ. ಬಾಬರ್ ಅಜಮ್ ಹಾಗೂ ಮೊಹಮ್ಮದ್ ರಿಜ್ವಾನ್ ಜೋಡಿ ಯಾವುದೇ ಕ್ಷಣದಲ್ಲಿ ಸಿಡಿದೇಳುವ ಗುಣ ಹೊಂದಿದ್ದಾರೆ. ಬಾಬರ್ ಕಳೆದೆರಡು ಪಂದ್ಯಗಳಲ್ಲಿ ಉತ್ತಮವಾಗಿ ಅಡಿಲ್ಲವಾದರೂ ರಿಜ್ವಾನ್, ಆ ಕೊರತೆಯನ್ನು ನೀಗಿಸಿದ್ದಾರೆ. ಇನ್ನು ಫಖರ್ ಜಮಾನ್ ಹಾಗೂ ಖುಷ್ದಿಲ್ ಶಾ ಪಾಕ್ ತಂಡದ ಎಡಗೈ ಬ್ಯಾಟ್ಸ್‌ಮನ್‌ಗಳಾಗಿದ್ದು ಭಾರತದ ಬೌಲರ್‌ಗಳನ್ನು ಎದುರಿಸಲು ಸಜ್ಜಾಗಿದ್ದಾರೆ.
ತಂಡಗಳು :
ಭಾರತ : ರೋಹಿತ್ ಶರ್ಮ (ನಾಯಕ), ಕೆ.ಎಲ್ ರಾಹುಲ್ , ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದೀಪಕ್ ಹೂಡ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಆರ್. ಅಶ್ವಿನ್, ಯಜ್ವೇಂದ್ರ ಚಹಲ್, ರವಿ ಬಿಷ್ಣೋಯಿ, ಭುವನೇಶ್ವರ್ ಕುಮಾರ್, ಅರ್ಶ್‌ದೀಪ್ ಸಿಂಗ್, ಆವೇಶ್ ಖಾನ್.
ಪಾಕಿಸ್ತಾನ : ಬಾಬರ್ ಅಜಮ್ (ನಾಯಕ), ಶದಬ್ ಖಾನ್, ಆಸಿಫ್ ಅಲಿ, ಫಖರ್ ಜಮಾನ್, ಹೈದರ್ ಅಲಿ, ಹ್ಯಾರಿಸ್ ರವೂಫ್, ಇಫ್ತಿಕಾರ್ ಅಹಮದ್, ಖಷ್ದಿಲ್ ಶಾ, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ನವಾಜ್, ನಾಸಿನ್ ಶಾ, ಶಹನವಾಜ್ ದಹಾನಿ, ಉಸ್ಮಾನ್ ಖಾದಿರ್, ಮೊಹಮ್ಮದ್ ಹಸ್ನೈನ್, ಹಸನ್ ಅಲಿ.
ಇದನ್ನೂ ಓದಿ | IND vs PAK | ಕಳೆದ ವರ್ಷ ಸೋತ ಸ್ಟೇಡಿಯಮ್‌ನಲ್ಲೇ ಪಾಕಿಸ್ತಾನಕ್ಕೆ ಪ್ರತ್ಯುತ್ತರ ಕೊಟ್ಟ ಟೀಮ್ ಇಂಡಿಯಾ