ಪೊಚೆಫ್ಸ್ಟ್ರೂಮ್ (ದಕ್ಷಿಣ ಆಫ್ರಿಕಾ): ಯುವ ಪ್ರತಿಭೆ ಶ್ವೇತಾ ಸೆಹ್ರಾವತ್ (61) ಅಜೇಯ ಅರ್ಧ ಶತಕದ ನೆರವು ಪಡೆದ ಭಾರತ ತಂಡದ ಉದ್ಘಾಟನಾ ಆವೃತ್ತಿಯ 19ರ ವಯೋಮಿತಿಯ ವನಿತೆಯರ ಟಿ20 ವಿಶ್ವ ಕಪ್ನಲ್ಲಿ (U19 WOMEN’S T20 WORLD CUP) ನ್ಯೂಜಿಲ್ಯಾಂಡ್ ತಂಡವನ್ನು 8 ವಿಕೆಟ್ಗಳಿಂದ ಮಣಿಸಿ ಫೈನಲ್ಗೇರಿದೆ. ಬೌಲಿಂಗ್ ಹಾಗೂ ಬ್ಯಾಟಿಂಗ್ನಲ್ಲಿ ಸಂಘಟಿತ ಪ್ರದರ್ಶನ ನೀಡಿದ ಭಾರತದ ಆಟಗಾರ್ತಿಯರು ಪ್ರಶಸ್ತಿ ಸನಿಹ ಬಂದು ನಿಂತರು.
ಸೆನ್ವೆಸ್ ಪಾರ್ಕ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ನ್ಯೂಜಿಲ್ಯಾಂಡ್ ಬಳಗ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ಗೆ 107 ರನ್ ಬಾರಿಸಿತು. ಗುರಿ ಬೆನ್ನಟ್ಟಿದ್ದ ಭಾರತ ತಂಡ ಇನ್ನೂ 34 ಎಸೆತಗಳು ಬಾಕಿ ಇರುವಂತೆಯೇ 2 ವಿಕೆಟ್ ಕಳೆದುಕೊಂಡು 110 ರನ್ ಬಾರಿಸಿತು.
ಸಾಧಾರಣ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ಭಾರತ ತಂಡ 33 ರನ್ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು. ಶಫಾಲಿ ವರ್ಮಾ 10 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಆದರೆ, ಶ್ವೇತಾ ಸೆಹ್ರಾವತ್ ಸ್ಫೋಟಕ ಬ್ಯಾಟಿಂಗ್ ನಡೆಸಿ ಅರ್ಧ ಶತಕ ಬಾರಿಸಿದರು. ಬಳಿಕ ಸೌಮ್ಯ ತಿವಾರಿ 22 ರನ್ ಕೊಡುಗೆ ಕೊಟ್ಟರೆ, ಗೊಂಗಾಡಿ ತ್ರಿಶಾ ಕೊನೆಯಲ್ಲಿ ಐದು ರನ್ ಬಾರಿಸಿದರು.
ಇದನ್ನೂ ಓದಿ : IND vs NZ 1st T20: ಭಾರತ-ನ್ಯೂಜಿಲ್ಯಾಂಡ್ ಮೊದಲ ಟಿ20 ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
ಅದಕ್ಕಿಂತ ಮೊದಲು ಬ್ಯಾಟ್ ಮಾಡಿದ ನ್ಯೂಜಿಲ್ಯಾಂಡ್ ಬಳಗ ಪಾರ್ಶವಿ ಚೋಪ್ರಾ (20 ರನ್ಗಳಿಗೆ 3 ವಿಕೆಟ್) ಅವರ ಮಾರಕ ದಾಳಿಗೆ ತತ್ತರಿಸಿತು. ಜಾರ್ಜಿಯಾ ಪಿಲ್ಮಾರ್ (35) ನ್ಯೂಜಿಲ್ಯಾಂಡ್ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು.