ನವ ದೆಹಲಿ: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ (commonwealth games) ಇದೇ ಮೊದಲ ಬಾರಿಗೆ ಮಹಿಳೆಯರ ಟಿ20 ಕ್ರಿಕೆಟ್ ಸೇರ್ಪಡೆಗೊಳಿಸಲಾಗಿದೆ. ಈ ಸ್ಪರ್ಧೆಗೆ ಸೋಮವಾರ ಭಾರತ ತಂಡ ಪ್ರಕಟಗೊಂಡಿದ್ದು, ಹರ್ಮನ್‌ಪ್ರೀತ್ ಕೌರ್‌ಗೆ ನಾಯಕತ್ವ ವಹಿಸಲಾಗಿದೆ.
ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ಕಾಮನ್ವೆಲ್ತ್ ಗೇಮ್ಸ್ ಆಯೋಜನೆಗೊಂಡಿದ್ದು, ಈ ಬಾರಿ ಮಹಿಳೆಯರ ಕ್ರಿಕೆಟ್ ಸ್ಪರ್ಧೆಗಳ ಪಟ್ಟಿಗೆ ಸೇರ್ಪಡೆಯಾಗಿದೆ. 1998ರಲ್ಲಿ ಪುರುಷರ ಕ್ರಿಕೆಟ್ ಟೂರ್ನಿ ಸೇರ್ಪಡೆಗೊಂಡಿತ್ತು. ಅದಾದ ಬಳಿಕ ಯಾವುದೇ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಕ್ರಿಕೆಟ್ ಇರಲಿಲ್ಲ. ಈ ಬಾರಿ ಟಿ20 ಮಾದರಿಯಲ್ಲಿ ಈ ಟೂರ್ನಿ ನಡೆಯಲಿದೆ.
ಭಾರತ ತಂಡದಲ್ಲಿ ಯಾರಿರುತ್ತಾರೆ?
ಭಾರತ ತಂಡದಲ್ಲಿ ಕೆಲವು ಅಚ್ಚರಿಯ ಆಯ್ಕೆಗಳು ಕಂಡುಬಂದಿವೆ. ವಿಕೆಟ್‌ಕೀಪರ್ ಆಗಿ ತಾನಿಯಾ ಭಾಟಿಯಾ ಅವರನ್ನು ಆಯ್ಕೆ ಮಾಡಲಾಗಿದೆ. ಟಿ20 ಮಾದರಿ ಕ್ರಿಕೆಟ್‌ನಲ್ಲಿ ತಾನಿಯಾ ಭಾಟಿಯಾ ಅವರು ಕಳೆದ 22 ಇನ್ನಿಂಗ್ಸ್‌ನಲ್ಲಿ 9.72 ಸರಾಸರಿಯಲ್ಲಿ 166 ರನ್ ಮಾತ್ರ ಗಳಿಸಿದ್ದಾರೆ. 94 ಸ್ಟ್ರೈಕ್ ರೇಟ್ ಹೊಂದಿರುವ ತಾನಿಯಾ ಅವರನ್ನು ಈ ತಂಡಕ್ಕೆ ಆಯ್ಕೆ ಮಾಡಿದ್ದು ಅಚ್ಚರಿ ಮೂಡಿಸಿದೆ.
ಉತ್ತಮ ಫಾರ್ಮ್‌ನಲ್ಲಿದ್ದ ಬಂಗಾಳದ ಬ್ಯಾಟರ್ ರಿಚಾ ಘೋಷ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ರಿಚಾ ಘೋಷ್ ಕಳೆದ 14 ಪಂದ್ಯಗಳಲ್ಲಿ 112ರ ಸ್ಟ್ರೈಕ್ ರೇಟ್‌ನಲ್ಲಿ 191 ರನ್ ಗಳಿಸಿದ್ದಾರೆ. ಆದಾಗ್ಯೂ ಅವರು ಕಾಮನ್ವೆಲ್ತ್ ಟೂರ್ನಿಗೆ ತಂಡದಲ್ಲಿ ಸ್ಥಾನಗಳಿಸುವಲ್ಲಿ ವಿಫಲರಾಗಿದ್ದಾರೆ. ಅವರನ್ನು ಮೀಸಲು ಆಟಗಾರರ ಪಟ್ಟಿಗೆ ಸೇರಿಸಲಾಗಿದೆ.
ಅನುಭವಿ ಲೆಗ್ ಸ್ಪಿನ್ನರ್ ಪೂನಂ ಯಾದವ್ ಹಾಗೂ ವೇಗದ ಬೌಲರ್ ಸಿಮ್ರಾನ್ ದಿಲ್ ಬಹಾದ್ದೂರ್ ಅವರೂ ಮೀಸಲು ಆಟಗಾರರ ಪಟ್ಟಿಯಲ್ಲಿಟ್ಟಿದ್ದಾರೆ. ಅವರ ಬದಲಿಗೆ ವೇಗದ ಬೌಲರ್‌ಗಳಾದ ಮೇಘನಾ ಸಿಂಗ್, ರೇಣುಕಾ ಠಾಕೂರ್ ಹಾಗೂ ಪೂಜಾ ವಸ್ತ್ರಾಕರ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಭಾರತಕ್ಕೆ ಯಾರೆಲ್ಲ ಎದುರಾಳಿಗಳು?
2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಜುಲೈ 29ರಂದು ಕ್ರಿಕೆಟ್ ಪಂದ್ಯಗಳು ಆರಂಭವಾಗಲಿವೆ. ಟೂರ್ನಿಯಲ್ಲಿ ಒಟ್ಟು 8 ತಂಡಗಳು ಭಾಗಿಯಾಗಲಿದ್ದು, ಅವುಗಳನ್ನು ಎರಡು ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಎ ಹಾಗೂ ಬಿ ಗುಂಪಿನಲ್ಲಿ ಪ್ರತಿ ಗುಂಪಿನಲ್ಲಿ ತಲಾ 4 ತಂಡಗಳಿರಲಿವೆ.
ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನ ಹಾಗೂ ಬಾರ್ಬಡೋಸ್ ತಂಡಗಳು ಎ ಗುಂಪಿನಲ್ಲಿದ್ದು, ಶ್ರೀಲಂಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಬಿ ಗುಂಪಿನಲ್ಲಿವೆ. ಗುಂಪು ಹಂತದ ಪಂದ್ಯಗಳ ಬಳಿಕ ಪ್ರತಿ ಗುಂಪಿನಲ್ಲಿ ಮೊದಲೆರಡು ಸ್ಥಾನಗಳನ್ನು ಪಡೆಯುವ ತಂಡಗಳು ಸೆಮಿಫೈನಲ್‌ಗೇರಲಿವೆ.
ಭಾರತದ ವೇಳಾಪಟ್ಟಿ
ಜುಲೈ 29: ಭಾರತ vs ಆಸ್ಟ್ರೇಲಿಯಾ
ಜುಲೈ 31: ಭಾರತ vs ಪಾಕಿಸ್ತಾನ
ಅಗಸ್ಟ್ 3: ಭಾರತ vs ಬಾರ್ಬಡೋಸ್
ಭಾರತ ತಂಡ: ಹರ್ಮನ್‌ಪ್ರೀತ್ ಕೌರ್(ನಾಯಕಿ), ಸ್ಮೃತಿ ಮಂಧಾನಾ (ಉಪ ನಾಯಕಿ), ಶಫಾಲಿ ವರ್ಮಾ, ಎಸ್. ಮೇಘನಾ, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಯಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ರಾಜೇಶ್ವರಿ ಗಾಯಕ್ವಾಡ್, ಪೂಜಾ ವಸ್ತ್ರಾಕರ್, ಮೇಘನಾ ಸಿಂಗ್, ರೇಣುಕಾ ಠಾಕೂರ್, ಜೆಮಿಮಾ ರೋಡ್ರಿಗಸ್, ರಾಧಾ ಯಾದವ್, ಹರ್ಲೀನ್ ಡಿಯೊಲ್, ಸ್ನೇಹ್ ರಾಣಾ.
ಮೀಸಲು ಆಟಗಾರರು: ಸಿಮ್ರಾನ್ ದಿಲ್ ಬಹಾದ್ದೂರ್, ರಿಚಾ ಘೋಷ್, ಪೂನಂ ಯಾದವ್.
ಇದನ್ನೂ ಓದಿ: ಪ್ರೀ-ಫೈನಲ್ ಪಂದ್ಯವೇ ಮೇರಿ ಕೋಮ್ ʼಫೈನಲ್ʼ ಪಂದ್ಯವಾಗಿಬಿಟ್ಟಿತು!