ಹೊವೆ (ಇಂಗ್ಲೆಂಡ್) : ಇಂಗ್ಲೆಂಡ್ ಪ್ರವಾಸದಲ್ಲಿರುವ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳೆಯರ ಕ್ರಿಕೆಟ್ ತಂಡ ಭಾನುವಾರ ನಡೆದ ಏಕ ದಿನ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ತಂಡದ ವಿರುದ್ಧ ೭ ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ಭಾರತ ವನಿತೆಯರ ತಂಡ ಮೂರು ಪಂದ್ಯಗಳ ಸರಣಿಯಲ್ಲಿ ೧-೦ ಮುನ್ನಡೆ ಪಡೆದುಕೊಂಡಿದೆ.
ಹೊವೆಯ ಕೌಂಟಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡ, ಇಂಗ್ಲೆಂಡ್ ತಂಡದ ೭ ವಿಕೆಟ್ ಉರುಳಿಸುವ ಜತೆಗೆ ೨೨೭ ರನ್‌ಗಳಿಗೆ ನಿಯಂತ್ರಿಸಿತು. ಬಳಿಕ ಬ್ಯಾಟ್ ಮಾಡಿ ೪೪.೨ ಓವರ್‌ಗಳಲ್ಲಿ ೩ ವಿಕೆಟ್ ಕಳೆದುಕೊಂಡು ೨೩೨ ರನ್ ಬಾರಿಸಿ ಅಧಿಕಾರಯುತ ಜಯ ಸಾಧಿಸಿತು.
ಸ್ಮೃತಿ ಮಂಧಾನಾ ಮಿಂಚು
ಸಾಧಾರಣ ಮೊತ್ತದ ಗುರಿಯನ್ನು ಬೆನ್ನಟ್ಟಿದ ಭಾರತ ತಂಡದ ಪರ ಆರಂಭಿಕ ಬ್ಯಾಟರ್ ಸ್ಮೃತಿ ಮಂಧಾನಾ (೯೧) ಅಮೋಘ ಅರ್ಧ ಶತಕ ಬಾರಿಸಿದರು. ಯಸ್ತಿಕಾ ಬಾಟಿಯಾ (೫೦) ಅರ್ಧ ಶತಕ ಬಾರಿಸಿ ಮಿಂಚಿದರು. ಕೊನೆಯಲ್ಲಿ ನಾಯಕ ಹರ್ಮನ್‌ಪ್ರೀತ್ ಕೌರ್ ಅಜೇಯ ೭೪ ರನ್ ಬಾರಿಸುವ ಮೂಲಕ ತಂಡವನ್ನು ಗೆಲ್ಲಿಸಿದರು. ಎದುರಾಳಿ ತಂಡ ಕೇಟ್ ಕ್ರಾಸ್ ೪೩ಕ್ಕೆ ೨ ವಿಕೆಟ್ ಪಡೆದರೂ ಭಾರತದ ಬ್ಯಾಟರ್‌ಗಳನ್ನು ನಿಯಂತ್ರಿಸಲು ಅವರಿಗೆ ಸಾಧ್ಯವಾಗಲಿಲ್ಲ.
ಅದಕ್ಕಿಂತ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಆರಂಭದಿಂದಲೇ ನಿಯಮಿತವಾಗಿ ವಿಕೆಟ್ ಕಳೆದುಕೊಂಡಿತು. ಆದರೆ, ಕೊನೇ ಹಂತದಲ್ಲಿ ಡ್ಯಾನಿ ವೇಟ್ (೪೩) ಹಾಗೂ ಅಲೈಸ್ ಡೇವಿಡ್ಸನ್ (೫೦*) ಅವರ ಅಜೇಯ ಅರ್ಧ ಶತಕದ ನೆರವಿನಿಂದ ಸ್ಪರ್ಧಾತ್ಮಕ ಮೊತ್ತ ಪೇರಿಸಿತು.
ಸ್ಕೋರ್ ವಿವರ
ಇಂಗ್ಲೆಂಡ್ : ೫೦ ಓವರ್‌ಗಳಲ್ಲಿ ೭ ವಿಕೆಟ್‌ಗೆ ೨೭೭ (ಅಲೈಸ್ ಡೇವಿಡ್ಸನ್ ೫೦*, ಡ್ಯಾನಿ ವೇಟ್ ೪೩; ದೀಪ್ತಿ ಶರ್ಮ ೩೩ಕ್ಕೆ೨).
ಭಾರತ : ೪೪.೨ ಓವರ್‌ಗಳಲ್ಲಿ ೩ ವಿಕೆಟ್‌ಗೆ ೨೩೨ (ಸ್ಮೃತಿ ಮಂಧಾನಾ ೯೧, ಯಸ್ತಿಕ ಭಾಟಿಯಾ ೫೦, ಹರ್ಮನ್‌ಪ್ರೀತ್ ಕೌರ್ ೭೪; ಕೇಟ್ ಕ್ರಾಸ್ ೪೨ಕ್ಕೆ೨).