ಕೇಪ್ಟೌನ್ : ಐರ್ಲೆಂಡ್ ತಂಡವನ್ನು ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಐದು ರನ್ಗಳಿಂದ ಮಣಿಸಿದ ಭಾರತದ ವನಿತೆಯರ ಬಳಗ ಟಿ20 ವಿಶ್ವ ಕಪ್ನ (T20 World Cup) ಸೆಮಿಫೈನಲ್ಸ್ ಹಂತಕ್ಕೇರಿದೆ. ಗುಂಪು 2ರಲ್ಲಿದ್ದ ಭಾರತ ತಂಡಕ್ಕೆ ಇದು ಗೆಲ್ಲಲೇಬೇಕಾದ ಪಂದ್ಯವಾಗಿತ್ತು. ಅದಕ್ಕೆ ವರುಣರಾಯನ ನೆರವೂ ಸಿಕ್ಕಿತು.
ಇಲ್ಲಿನ ಸೇಂಟ್ ಜಾರ್ಜಿಯಾ ಪಾರ್ಕ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಹರ್ಮನ್ಪ್ರೀತ್ ಬಳಗ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 155 ರನ್ ಬಾರಿಸಿತು. ಗುರಿ ಬೆನ್ನಟ್ಟಲು ಆರಂಭಿಸಿದ ಆರಂಭಿಸಿದ ಐರ್ಲೆಂಡ್ ತಂಡ 8.2 ಓವರ್ಗಳಲ್ಲಿ 54 ರನ್ ಪೇರಿಸಿದಾಗ ಮಳೆ ಬಂತು. ನಿಗದಿತ ಅವಧಿಯೊಳಗೆ ಪಂದ್ಯ ಮುಗಿಸಲು ಸಾಧ್ಯವಾಗದ ಕಾರಣ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಫಲಿತಾಂಶ ಪ್ರಕಟಿಸಲಾಯಿತು. ಅಂತೆಯೇ ಭಾರತ ತಂಡ ಗೆಲುವು ಸಾಧಿಸಿ ಉಪಾಂತ್ಯಕ್ಕೆ ಪ್ರವೇಶ ಗಿಟ್ಟಿಸಿತು.
ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಉತ್ತಮ ಆರಂಭವನ್ನೇ ಪಡೆಯಿತು. ಸ್ಮೃತಿ ಮಂಧಾನಾ (87 ರನ್ 56 ಎಸೆತ) ಅರ್ಧ ಶತಕ ಬಾರಿಸಿ ತಂಡದ ಮೊತ್ತ ಪೇರಿಸಲು ನೆರವಾದರು. ಶಫಾಲಿ ವರ್ಮಾ 24 ರನ್ ಬಾರಿಸಿದರು. ಇವರಿಬ್ಬರು ಮೊದಲ ವಿಕೆಟ್ಗೆ 62 ಬಾರಿಸಿದರು. ಆದರೆ, ಉಳಿದ ಆಟಗಾರ್ತಿಯರು ತಂಡಕ್ಕೆ ಹೆಚ್ಚಿನ ನೆರವು ಕೊಡದ ಕಾರಣ ಬೃಹತ್ ಮೊತ್ತ ಪೇರಿಸಲು ಸಾಧ್ಯವಾಗಲಿಲ್ಲ.
ಇದನ್ನೂ ಓದಿ : ICC Women’s T20 World Cup : ರೋಹಿತ್ ದಾಖಲೆ ಮುರಿದ ಹರ್ಮನ್ಪ್ರೀತ್ ಕೌರ್ ವಿಶ್ವದಾಖಲೆಯೂ ಬರೆದರು; ಏನದು ಸಾಧನೆ?
ಗುರಿ ಬೆನ್ನಟ್ಟಿದ ಐರ್ಲೆಂಡ್ ಬಳಗ 1 ರನ್ಗೆ ವಿಕೆಟ್ ಕಳೆದುಕೊಳ್ಳುವ ಮೂಲಕ ಸಂಕಷ್ಟಕ್ಕೆ ಬಿತ್ತು. ಆದರೆ, ಗ್ಯಾಬಿ ಲವಿಸ್ (32) ಹಾಗೂ ಲಾರಾ ಡೆಲಾನಿ (17) ಸ್ಫೋಟಕ ಬ್ಯಾಟಿಂಗ್ ಮಾಡುವ ಮೂಲಕ ಭಾರತ ತಂಡಕ್ಕೆ ಆತಂಕ ತಂದೊಡ್ಡಿದರು. ಅಷ್ಟರಲ್ಲಿ ಮಳೆ ಬಂದು ಪಂದ್ಯ ಸ್ಥಗಿತಗೊಂಡಿತು.