Site icon Vistara News

Asia Cup Cricket | ಏಷ್ಯಾ ಕಪ್‌ಗೆ ಆಯ್ಕೆಯಾದ ಆಟಗಾರರಿಗೆ ಶುರುವಾಗಿದೆ ಟೆನ್ಷನ್‌

Asia cup cricket

ಬೆಂಗಳೂರು : ಆಗಸ್ಟ್‌ ೨೭ರಂದು ಆರಂಭವಾಗಲಿರುವ ಏಷ್ಯಾ ಕಪ್‌ ಟಿ೨೦ ಕ್ರಿಕೆಟ್‌ (Asia Cup Cricket) ಆಡಲು ತೆರಳುವ ಭಾರತ ತಂಡದ ಆಟಗಾರರು ಅದಕ್ಕಿಂತ ಮೊದಲು ಫಿಟ್ನೆಸ್ ಟೆಸ್ಟ್‌ನಲ್ಲಿ ಪಾಲ್ಗೊಳ್ಳಲೇಬೇಕು. ಫಿಟ್‌ ಆಗಿರುವ ಆಟಗಾರರನ್ನು ಮಾತ್ರ ಟೂರ್ನಿಗೆ ಕಳುಹಿಸಲು ನಿರ್ಧರಿಸಿರುವ ಬಿಸಿಸಿಐ ಎಲ್ಲ ಆಟಗಾರರು ಆಗಸ್ಟ್‌ ೨೦ರಂದು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯಲ್ಲಿ ನಡೆಯುವ ಫಿಟ್ನೆಸ್‌ ಪರೀಕ್ಷೆಗೆ ಹಾಜರಾಗಬೇಕು ಎಂದು ಹೇಳಿದೆ. ಒಂದು ವೇಳೆ ಫೇಲ್‌ ಆದರೆ ಆಡಲು ಅವಕಾಶ ಸಿಗುವುದಿಲ್ಲ ಎಂಬುದೇ ಆಟಗಾರರ ತಲೆಬಿಸಿಯ ವಿಷಯ.

ಆಗಸ್ಟ್‌ ೧೮ರಂದು ಆಟಗಾರರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಗೆ (ಎನ್‌ಸಿಎ) ಬರಲಿದ್ದಾರೆ. ಅಲ್ಲಿ ಫಿಟ್ನೆಸ್ ಟೆಸ್ಟ್‌ ಮುಗಿಸಿದ ಬಳಿಕ ದುಬೈಗೆ ಹಾರಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ರೋಹಿತ್‌ ಶರ್ಮ ನೇತೃತ್ವದ ೧೪ ಸದಸ್ಯರ ಭಾರತ ತಂಡವನ್ನು ಬಿಸಿಸಿಐ ಈಗಾಗಲೇ ಘೋಷಿಸಿದೆ. ಅದರಲ್ಲಿ ಕನ್ನಡಿಗ ಕೆ. ಎಲ್‌. ರಾಹುಲ್‌ ಸೇರಿದಂತೆ ಪ್ರಮುಖ ಆಟಗಾರರು ಇದ್ದಾರೆ. ರಾಹುಲ್ ಅವರು ಕಳೆದ ಹಲವಾರು ಟೂರ್ನಿಗಳಲ್ಲಿ ಗಾಯದ ಸಮಸ್ಯೆ ಹಾಗೂ ಕೊರೊನಾ ಸೋಂಕಿನಿಂದಾಗಿ ಪಾಲ್ಗೊಂಡಿಲ್ಲ. ಅವರು ಸೇರಿದಂತೆ ಎಲ್ಲ ಆಟಗಾರರ ದೈಹಿಕ ಫಿಟ್ನೆಸ್‌ ತಿಳಿದುಕೊಳ್ಳುವುದು ಬಿಸಿಸಿಐ ಉದ್ದೇಶವಾಗಿದ್ದು, ಅದಕ್ಕಾಗಿ ಬೆಂಗಳೂರಿಗೆ ಬರುವಂತೆ ಸೂಚಿಸಿದೆ.

ಏಷ್ಯಾ ಕಪ್‌ಗಿಂತ ಮೊದಲು ಭಾರತ ತಂಡ ಏಕ ದಿನ ಪಂದ್ಯದಕ್ಕಾಗಿ ಜಿಂಬಾಬ್ವೆಗೆ ತೆರಳಲಿದೆ. ಆ ತಂಡದಲ್ಲಿ ಸ್ಥಾನ ಪಡೆದಿರುವ ದೀಪಕ್‌ ಹೂಡ ಹಾಗೂ ಆವೇಶ್‌ ಖಾನ್‌ ಏಷ್ಯಾ ಕಪ್‌ ಆಡುವ ತಂಡದಲ್ಲೂ ಸ್ಥಾನ ಪಡೆದಿದ್ದಾರೆ. ಅದೇ ರೀತಿ ವೇಗದ ಬೌಲರ್‌ ದೀಪಕ್ ಚಾಹರ್ ಕೂಡ ಏಷ್ಯಾ ಕಪ್‌ನ ಮೀಸಲು ಆಟಗಾರರ ಪಟ್ಟಿಯಲ್ಲಿದ್ದಾರೆ.

ಏಷ್ಯಾ ಕಪ್‌ ಆಗಸ್ಟ್‌ ೨೭ರಂದು ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಶ್ರೀಲಂಕಾ ಮತ್ತು ಅಫಘಾನಿಸ್ತಾನ ತಂಡವನ್ನು ಎದುರಿಸಲಿದೆ. ಎರಡನೇ ದಿನ ಭಾರತ ಹಾಗೂ ಪಾಕಿಸ್ತಾನ ಪರಸ್ಪರ ಮುಖಾಮುಖಿಯಾಗಲಿವೆ.

ತಂಡ ಹೀಗಿದೆ
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್‌ ಅಶ್ವಿನ್, ಯಜ್ವೇಂದ್ರ ಚಹಲ್, ರವಿ ಬಿಷ್ಣೋಯಿ, ಭುವನೇಶ್ವರ್ ಕುಮಾರ್, ಅರ್ಶ್‌ದೀಪ್‌ ದೀಪ್ ಸಿಂಗ್, ಅವೇಶ್ ಖಾನ್.
ಮೀಸಲು ಆಟಗಾರರು: ಅಕ್ಷರ್ ಪಟೇಲ್, ಶ್ರೇಯರ್ ಅಯ್ಯರ್ ಹಾಗೂ ದೀಪಕ್ ಚಾಹರ್.

ಇದನ್ನೂ ಓದಿ | ASIA CUP | ಏಷ್ಯಾ ಕಪ್‌ಗೆ ಭಾರತ ತಂಡ ಪ್ರಕಟ

Exit mobile version