ಮುಂಬಯಿ: ಐಪಿಎಲ್ 2023ರ ಐಪಿಎಲ್ ಅತ್ಯಂತ ಅದ್ಧೂರಿಯಾಗಿ ನಡೆದು ಮುಗಿದಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ಚಾಂಪಿಯನ್ಪಟ್ಟ ಅಲಂಕರಿಸಿದೆ. ಇದೀಗ ತಮ್ಮ ನೆಚ್ಚಿನ ಆಟಗಾರರು ಭಾರತೀಯ ಜೆರ್ಸಿಯಲ್ಲಿ ಕಾಣಿಸಿಕೊಳ್ಳುವುದನ್ನು ಕಾಯುತ್ತಿದ್ದಾರೆ. ಏತನ್ಮಧ್ಯೆ, ಜೂನ್ 7ರಿಂದ ಲಂಡನ್ನ ಓವಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಪಾಲ್ಗೊಳ್ಳು ಟೀಮ್ ಇಂಡಿಯಾ ಪ್ರಸ್ತುತ ಇಂಗ್ಲೆಂಡ್ಗೆ ತೆರಳಿದೆ.
ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಬಳಿಕ ರೋಹಿತ್ ಶರ್ಮಾ ನೇತೃತ್ವದ ತಂಡವು ಏಕದಿನ ವಿಶ್ವಕಪ್ 2023ರ ಪ್ರಾರಂಭದವರೆಗೆ ಸತತವಾಗಿ ಏಕದಿನ ಸರಣಿಯನ್ನು ಆಡಲಿದೆ. ಹೀಗಾಗಿ ಬಿಡುವಿಲ್ಲದ ಕ್ರಿಕೆಟ್ ನಡುವೆ ಆಟಗಾರರಿಗೆ ಜೂನ್ನಿಂದ ಜುಲೈ ಮಧ್ಯದವರೆಗೆ ಒಂದು ತಿಂಗಳ ವಿರಾಮವನ್ನು ನೀಡಲಿಲಿದೆ ಎಂಬುದಾಗಿ ವರದಿಯಾಗಿದೆ. ಕ್ರಿಕ್ಬಜ್ ವರದಿ ಪ್ರಕಾರ, ಜೂನ್ 20ರಿಂದ 30ರವರೆಗೆ ನಡೆಯಬೇಕಿದ್ದ ಅಫ್ಘಾನಿಸ್ತಾನ ವಿರುದ್ಧದ ಭಾರತದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಇದೀಗ ರದ್ದುಗೊಳಿಸಲು ನಿರ್ಧರಿಸಲಾಗಿದೆ. ಉಳಿದಂತೆ ಭಾರತ ತಂಡ ಆಡಲಿರುವ ಕ್ರಿಕೆಟ್ ಸರಣಿಯ ವಿವರಗಳು ಇಂತಿವೆ.
ಜುಲೈ-ಆಗಸ್ಟ್ನಲ್ಲಿ ವೆಸ್ಟ್ ಇಂಡೀಸ್ ಪ್ರವಾಸ
ಒಂದು ತಿಂಗಳ ವಿರಾಮದ ನಂತರ ಭಾರತ ತಂಡವು ಮುಂದಿನ ಜುಲೈ 12ರಿಂದ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದ್ದು, ಎರಡು ಟೆಸ್ಟ್, ಮೂರು ಏಕದಿನ ಮತ್ತು 5 ಟಿ 20 ಪಂದ್ಯಗಳನ್ನು ಆಡಲಿದೆ.
ಇದನ್ನೂ ಓದಿ : Team India : ಟೀಮ್ ಇಂಡಿಯಾ ಹೊಸ ಜೆರ್ಸಿ ಅನಾವರಣ, ಡ್ರೋನ್ ಮೂಲಕ ಪ್ರದರ್ಶನ!
ಸೆಪ್ಟೆಂಬರ್ನಲ್ಲಿ ಏಷ್ಯಾ ಕಪ್ 2023
ಏಷ್ಯಾ ಕಪ್ 2023ರ ವೇಳಾಪಟ್ಟಿ ಇನ್ನೂ ಹೊರಬಂದಿಲ್ಲ, ಕಾಂಟಿನೆಂಟಲ್ ಕಪ್ನ ಆತಿಥ್ಯ ಹಕ್ಕಿನ ವಿವಾದ ಇನ್ನೂ ಕೊನೆಗೊಂಡಿಲ್ಲ. ಭಾರತ ಮತ್ತು ಪಾಕಿಸ್ತಾನ ಎರಡೂ ನಡುವಿನ ಹಗ್ಗಜಗ್ಗಾಟ ಇನ್ನೂ ಮುಂದುವರಿದಿದೆ. ಏಷ್ಯಾಕಪ್ 2023ರಲ್ಲಿ ಒಟ್ಟು 12 ಏಕದಿನ ಪಂದ್ಯಗಳು ನಡೆಯಲಿದ್ದು, ಫೈನಲ್ ತಲುಪಿದರೆ ಭಾರತ ಮತ್ತು ಪಾಕಿಸ್ತಾನ ಪಂದ್ಯಾವಳಿಯಲ್ಲಿ ಮೂರು ಬಾರಿ ಮುಖಾಮುಖಿಯಾಗಲಿವೆ.
ಅಕ್ಟೋಬರ್-ನವೆಂಬರ್ನಲ್ಲಿ ವಿಶ್ವ ಕಪ್
ಅಕ್ಟೋಬರ್ 5ರಿಂದ ಆರಂಭವಾಗಲಿರುವ 2023ರ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯ ವಹಿಸಲಿದೆ. ಪಂದ್ಯಾವಳಿಯು ಒಟ್ಟು 48 ಪಂದ್ಯಗಳನ್ನು ಒಳಗೊಂಡಿದ್ದು, ಲೀಗ್ ಹಂತದಲ್ಲಿ ಪ್ರತಿ ತಂಡವು ಒಂಬತ್ತು ಪಂದ್ಯಗಳನ್ನು ಆಡಲಿದೆ.
ದಕ್ಷಿಣ ಆಫ್ರಿಕಾ ಪ್ರವಾಸ 2023-24
2023ರಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದ್ದು, 2 ಟೆಸ್ಟ್, 3 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನಾಡಲಿದೆ.