Site icon Vistara News

Team India : ಕ್ರಿಕೆಟ್​ ಕಾಮೆಂಟರಿ ಕ್ಷೇತ್ರಕ್ಕೆ ಎಂಟ್ರಿ ಪಡೆಯಲಿದ್ದಾರೆ ಭಾರತದ ವೇಗದ ಬೌಲರ್​

Ishanth Sharma

ನವ ದೆಹಲಿ: ಭಾರತದ ಜನಪ್ರಿಯ ವೇಗದ ಬೌಲರ್ ಇಶಾಂತ್ ಶರ್ಮಾ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಸರಣಿಯ ವೇಳೆ ತಮ್ಮ ವೃತ್ತಿ ಜೀವನದಲ್ಲಿ ಗಮನಾರ್ಹ ಬದಲಾವಣೆ ಮಾಡಲು ಇಚ್ಛಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ಟೆಸ್ಟ್ ತಂಡದಿಂದ ತಾತ್ಕಾಲಿಕ ವಿರಾಮ ಪಡೆದಿದ್ದ ಅವರು ಅವರು ಈಗ ಮತ್ತೊಂದು ಹೊಸ ಜವಾಬ್ದಾರಿ ಪಡೆದುಕೊಳ್ಳಲು ಮುಂದಾಗಿದ್ದಾರೆ. ಈ ಬಾರಿ ಅವರು ಮೈದಾನದಲ್ಲಿ ಇರುವುದಿಲ್ಲ. ಬದಲಾಗಿ ಕಾಮೆಂಟರಿ ಬಾಕ್ಸ್​ನಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರು ವೆಸ್ಟ್​ ಇಂಡೀಸ್ ವಿರುದ್ಧದ ಸರಣಿಯಲ್ಲಿ ಕಾಮೆಂಟರಿ ಮಾಡುವ ಮೂಲಕ ಈ ಕ್ಷೇತ್ರಕ್ಕೂ ತಾವು ಫಿಟ್ ಎಂಬುದನ್ನು ತೋರಿಸಿಕೊಡಲಿದ್ದಾರೆ.

ಮಾರಕ ಎಸೆತಗಳ ಮೂಲಕ ಎದುರಾಳಿ ತಂಡದ ಬ್ಯಾಟರ್​ಗಳಿಗೆ ಬೆದರಿಕೆ ಹುಟ್ಟಿಸುತ್ತಿದ್ದ ಅವರು ಇದೀಗ ಕಾಮೆಂಟರಿ ಬಾಕ್ಸ್​ನಲ್ಲಿ ಕುಳಿತು ತಮ್ಮ ಮನಮೋಹಕ ಮಾತುಗಳಿಂದ ಕ್ರಿಕೆಟ್​ ಅಭಿಮಾನಿಗಳನ್ನು ಖುಷಿ ಪಡಿಸಲಿದ್ದಾರೆ. 34 ವರ್ಷದ ವೇಗದ ಬೌಲರ್ ತನ್ನ ಆಳವಾದ ಒಳನೋಟಗಳು ಮತ್ತು ನಿಖರವಾದ ವಿಶ್ಲೇಷಣೆಯೊಂದಿಗೆ ಜನರ ಮನ ಗೆಲ್ಲಲು ಸಿದ್ದರಾಗಿದ್ದಾರೆ. ಜಿಯೋ ಸಿನೆಮಾ ಒಟಿಟಿ ಫ್ಲ್ಯಾಟ್​ಫಾರ್ಮ್ ಮೂಲಕ ಅವರ ವೀಕ್ಷಕ ವಿವರಣೆ ಪ್ರಸಾರವಾಗಲಿದ್ದು, ಆ ಕುರಿತು ಟ್ವೀಟ್​ನಲ್ಲಿ ಮಾಹಿತಿ ನೀಡಲಾಗಿದೆ.

ಭಾನುವಾರ ಈ ಕುರಿತು ಜಿಯೊ ಸಿನಿಮಾ ಪ್ರಕಟಣೆ ಹೊರಡಿಸಿದೆ. ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್​​ನಲ್ಲಿ ಅವರು 10 ವಿಕೆಟ್ ಸಾಧನೆ ಮಾಡಿದವರಾಗಿದ್ದು, ಇದೀಗ ಅವರು ಹಿಂದಿಯಲ್ಲಿ ಕಾಮೆಂಟ್ ಮಾಡಲಿದ್ದಾರೆ ಎಂಬುದನ್ನು ತಿಳಿಸಿದ್ದಾರೆ. ಇಶಾಂತ್ 10 ವಿಕೆಟ್​ ಸಾಧನೆ ಮಾಡಿರುವ ವಿಡಿಯೊವನ್ನು ಅವರು ಶೇರ್ ಮಾಡಿದ್ದಾರೆ.

ಇದನ್ನೂ ಓದಿ : MS Dhoni : ಬರ್ತ್​ಡೇ ಬಾಯ್​ ಧೋನಿ ನಾಯಕರಾಗಿದ್ದಾಗ ಬಳಸಿದ 5 ಗೆಲುವಿನ ತಂತ್ರಗಳು ಇಲ್ಲಿವೆ

ಕಾಮೆಂಟರಿ ಬಾಕ್ಸ್​ಗೆ ಇಶಾಂತ್​ ಶರ್ಮಾ ಅವರ ಪ್ರವೇಶದಿಂದ ಜಿಯೊ ಸಿನಿಮಾದಲ್ಲಿ ಮತ್ತೊಂದು ಸುತ್ತಿನ ಹೊಸತನ ಕಾಣಲಿದೆ. ಉಚಿತ ವೀಕ್ಷಣೆ ಸೇರಿದಂತೆ ಹಲವಾರು ಪ್ರಯೋಗಗಳನ್ನು ಮಾಡುತ್ತಿರುವ ಜಿಯೊ ಸಿನಿಮಾ ಖ್ಯಾತ ಕ್ರಿಕೆಟಿಗರಿಂದ ಕಾಮೆಂಟರಿ ಹೇಳಿಸುವ ಮೂಲಕವೂ ಜನಪ್ರಿಯತೆ ಪಡೆಯಲು ಮುಂದಾಗಿದೆ. ಇತ್ತೀಚೆಗೆ ಡಬ್ಲ್ಯುಟಿಸಿ 2023ರಲ್ಲಿ ರನ್ನರ್ಸ್ ಅಪ್ ಸ್ಥಾನವನ್ನು ಪಡೆದ ಟೀಮ್ ಇಂಡಿಯಾ ಈಗ ಮುಂದಿನ ಋತುವಿಗೆ ಸಜ್ಜಾಗುತ್ತಿದೆ. ವೆಸ್ಟ್ ಇಂಡೀಸ್ ವಿರುದ್ಧ ಗೆಲುವಿನ ಮೂಲಕ ಸರಣಿ ಆರಂಭಿಸಲಿದೆ.

19ನೇ ವರ್ಷಕ್ಕೆ ಭಾರತ ತಂಡಕ್ಕೆ ಎಂಟ್ರಿ

ಇಶಾಂತ್ ಶರ್ಮಾ ಅವರ ಕ್ರಿಕೆಟ್ ಪಯಣ ಗಮನಾರ್ಹವಾಗಿದೆ. ತಮ್ಮ 19 ನೇ ವಯಸ್ಸಿನಲ್ಲಿ ಭಾರತೀಯ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. ತಮ್ಮ ವೃತ್ತಿಜೀವನದುದ್ದಕ್ಕೂ ಮುಖ್ಯವಾಗಿ ಟೆಸ್ಟ್ ಕ್ರಿಕೆಟ್ ಮೇಲೆ ಗಮನ ಹರಿಸಿದ್ದರು. ಈಗ, ಮೈದಾನದಲ್ಲಿ ಬೆವರು ಹರಿಸುವ ಬದಲು, ಶರ್ಮಾ ಈಗ ಹವಾನಿಯಂತ್ರಿತ ಕೊಠಡಿಯಲ್ಲಿ ವೀಕ್ಷಕ ವಿವರಣೆ ಕೊಡಲಿದ್ದಾರೆ. ಇಶಾಂತ್ ಶರ್ಮಾ 105 ಟೆಸ್ಟ್, 80 ಏಕದಿನ ಮತ್ತು 14 ಟಿ 20 ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ, ಶರ್ಮಾ ಟೆಸ್ಟ್​​ನಲ್ಲಿ 311 ವಿಕೆಟ್​ ಪಡೆದಿದ್ದಾರೆ. ಸೀಮಿತ ಓವರ್​​ಗಳಾದ ಏಕ ದಿನ ಮತ್ತು ಟಿ20 ಕ್ರಿಕೆಟ್​​ನಲ್ಲಿ 115 ಮತ್ತು 8 ವಿಕೆಟ್​ಗಳನ್ನು ಉರುಳಿಸಿದ್ದಾರೆ.

ಡೊಮಿನಿಕಾದಲ್ಲಿ ನಡೆಯಲಿರುವ ಮೊದಲ ಟೆಸ್ಟ್​ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಭಾರತ ತಂಡ ಹೊಸ ಪಯಣ ಆರಂಭಿಸಲಿದೆ.

Exit mobile version