ಮೆಲ್ಬೋರ್ನ್: ಟಿ20 ವಿಶ್ವ ಕಪ್ ಇತಿಹಾಸದಲ್ಲಿ ಪಾಕಿಸ್ತಾನ(IND-PAK ) ವಿರುದ್ಧ ಭಾರತ ಅಜೇಯ ದಾಖಲೆ ಹೊಂದಿತ್ತು. ಆದರೆ ಕಳೆದ ವರ್ಷ ದುಬೈಯಲ್ಲಿ ನಡೆದ ವಿಶ್ವ ಕಪ್ನಲ್ಲಿ ಭಾರತ ತಂಡ ಪಾಕ್ ವಿರುದ್ಧ 10 ವಿಕೆಟ್ ಸೋಲು ಕಂಡು ಈ ದಾಖಲೆಯನ್ನು ಬ್ರೇಕ್ ಮಾಡಿತು. ಇದೀಗ ಆ ಪಂದ್ಯದ ಪ್ಲ್ಯಾಶ್ ಬ್ಯಾಕ್ ಮತ್ತೆ ಇಲ್ಲಿ ನೆನಪಿಸಲಾಗಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ 7 ವಿಕೆಟ್ಗೆ 151 ಗಳಿಸಿತು. ಗುರಿ ಬೆನ್ನಟ್ಟಿದ ಪಾಕಿಸ್ತಾನ 17.5 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 152 ರನ್ ಬಾರಿಸಿ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಪಾಕ್ ಕೊನೆಗೂ ವಿಶ್ವ ಕಪ್ ಇತಿಹಾಸದಲ್ಲಿ ಭಾರತದೆದುರಿನ ಸೋಲಿನ ಸರಪಳಿಯನ್ನು ಕಡಿದುಕೊಂಡಿತು.
ಏಕಪಕ್ಷೀಯವಾಗಿ ಸಾಗಿದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತಕ್ಕೆ ಪಾಕ್‌ನ ಯಾರ್ಕರ್ ಸ್ಪೆಷಲಿಷ್ಟ್ ಶಾಹೀನ್ ಅಫ್ರಿದಿ ಸಿಂಹಸ್ವಪ್ನರಾಗಿ ಕಾಡಿದರು. ಪಂದ್ಯದ 4ನೇ ಎಸೆತದಲ್ಲೇ ತಮ್ಮ ಯಾರ್ಕರ್ ಅಸ್ತ್ರದ ಮೂಲಕ ರೋಹಿತ್ ಶರ್ಮಾ ಅವರನ್ನು ಎಲ್ಬಿಡಬ್ಲ್ಯು ಮಾಡಿದರು. ರೋಹಿತ್ ಎದುರಿಸಿದ ಮೊದಲ ಎಸೆತ ಇದಾಗಿತ್ತು. ಗೋಲ್ಡನ್ ಡಕ್ ಅವಮಾನದೊಂದಿಗೆ ಅವರು ಮೈದಾನ ತೊರೆಯಬೇಕಾಯಿತು.
ಇದರ ಬೆನ್ನಲ್ಲೇ ಮತ್ತೊಬ್ಬ ಆರಂಭಿಕ ಆಟಗಾರ ಕೆ.ಎಲ್. ರಾಹುಲ್ ಕೂಡ ಅಫ್ರಿದಿ ಮೋಡಿಗೆ ಸಿಲುಕಿದರು. ಇನ್ಸ್ವಿಂಗ್ ಯಾರ್ಕರ್ ಬೇಲ್ಸ್ ಹಾರಿಸಿತು. 8 ಎಸೆತ ಎದುರಿಸಿದ ರಾಹುಲ್ ಕೇವಲ 3 ರನ್ ಗಳಿಸಿ ಆಟ ಮುಗಿಸಿದರು. ಆರೇ ರನ್ನಿಗೆ ಭಾರತದ ಆರಂಭಿಕರಿಬ್ಬರ ಆಟ ಮುಗಿಯಿತು. ಆದರೆ ಅದೇ ಓವರ್ನಲ್ಲಿ ಸೂರ್ಯಕುಮಾರ್ ಯಾದವ್ ಅಫ್ರಿದಿಗೆ ಸಿಕ್ಸರ್ ರುಚಿ ತೋರಿಸಿ ಚಳಿ ಬಿಡಿಸುವ ಸೂಚನೆ ನೀಡಿದರು. ಅಫ್ರಿದಿಯ ಮುಂದಿನ ಓವರ್ನಲ್ಲಿ ನಾಯಕ ಕೊಹ್ಲಿ ಕೂಡ ಸಿಕ್ಸರ್ ಬಾರಿಸಿದರು. ಸಿಡಿಯುವ ಸೂಚನೆ ನೀಡಿದ ಸೂರ್ಯಕುಮಾರ್ 11 ರನ್ ಮಾಡಿ ಹಸನ್ ಅಲಿಗೆ ವಿಕೆಟ್ ಒಪ್ಪಿಸಿದರು. ಹೀಗೆ ಪವರ್ ಪ್ಲೇ ಒಳಗಾಗಿ ಭಾರತದ 36 ರನ್ಗೆ 3 ವಿಕೆಟ್ ಉರುಳಿತು.
ಕೊಹ್ಲಿ ಆಸರೆ
ಒಂದೆಡೆ ವಿಕೆಟ್ ಮೇಲೆ ವಿಕೆಟ್ ಉರುಳುತ್ತಿದ್ದರೂ ನಾಯಕ ವಿರಾಟ್ ಕೊಹ್ಲಿ ಎಚ್ಚರಿಕೆಯ ಆಟವಾಡತೊಡಗಿದ್ದರಿಂದ ಭಾರತಕ್ಕೆ ಚೇತರಿಕೆಯ ಭರವಸೆ ಇತ್ತು. ಇವರಿಗೆ ರಿಷಭ್ ಪಂತ್ ಬೆಂಬಲವಿತ್ತರು. 10 ಓವರ್ ಮುಕ್ತಾಯಕ್ಕೆ ಹೆಚ್ಚಿನ ಆಘಾತಕ್ಕೆ ಸಿಲುಕದ ಹೊರತಾಗಿಯೂ ಭಾರತ ತನ್ನ ಮೊತ್ತವನ್ನು 60 ರನ್ನಿಗೆ ಏರಿಸಿತು. ಕೊನೆಯ 10 ಓವರ್ಗಳಲ್ಲಿ 90 ರನ್ ಹರಿದು ಬಂದದ್ದು ಭಾರತದ ಬ್ಯಾಟಿಂಗ್ ಚೇತರಿಕೆಗೆ ಉತ್ತಮ ನಿದರ್ಶನವೆನಿಸಿತು.
ಹಸನ್ ಅಲಿ ಅವರ ಓವರ್ನಲ್ಲಿ ಎರಡು ಸಿಕ್ಸರ್ ಬಾರಿಸಿದ ಪಂತ್ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಆದರೆ ಶದಬ್ ಖಾನ್ ಅವರ ಮುಂದಿನ ಓವರ್ನಲ್ಲಿ ಸಿಕ್ಸರ್ ಬಾರಿಸುವ ಪ್ರಯತ್ನದಲ್ಲಿ ವಿಕೆಟ್ ಕೈಚೆಲ್ಲಿದರು. ಪಂತ್ ಗಳಿಕೆ 30 ಎಸೆತಗಳಿಂದ 39 ರನ್. ಕೊಹ್ಲಿ-ಪಂತ್ 4ನೇ ವಿಕೆಟ್ಗೆ 53 ರನ್ ಪೇರಿಸಿ ಭಾರತದ ಸರದಿಗೆ ಚೈತನ್ಯ ತುಂಬಿದರು. ಕೊನೆಯ 5 ಓವರ್ಗಳಲ್ಲಿ 51 ರನ್ ಹರಿದು ಬಂತು. ಕೊಹ್ಲಿ ತೀವ್ರ ಎಚ್ಚರಿಕೆಯಿಂದ ಬ್ಯಾಟ್ ಬೀಸಿ ರನ್ ಗಳಿಸುವ ಜತೆಗೆ ವಿಕೆಟ್ ಕಾಯಬೇಕಾದ ಮಹತ್ತರ ಜವಾಬ್ದಾರಿಯೂ ಅವರ ಮೇಲಿತ್ತ. 45 ಎಸೆತಗಳಿಂದ ನಾಯಕನ ಅರ್ಧ ಶತಕ ಪೂರ್ತಿಗೊಂಡಿತು. 19ನೇ ಓವರ್ ಎಸೆಯಲು ಬಂದು ಅಫ್ರಿದಿ ಈ ವಿಕೆಟ್ ಉಡಾಯಿಸಿದರು. ಕೊಹ್ಲಿ ಗಳಿಕೆ 49 ಎಸೆತಗಳಿಂದ 57 ರನ್ (5 ಬೌಂಡರಿ, 1 ಸಿಕ್ಸರ್). ಅಂತಿಮವಾಗಿ ಭಾರತ 7 ವಿಕೆಟ್ಗೆ 151 ಗಳಿಸಿತು.
ಬೌಲಿಂಗ್ನಲ್ಲಿ ಎಡವಿದ ಭಾರತ
ನಾಯಕ ವಿರಾಟ್ ಕೊಹ್ಲಿಯ ಹೋರಾಟದಿಂದ ಭಾರತ ತಂಡ ಸ್ಪರ್ಧಾತ್ಮಕ ಮೊತ್ತವನ್ನೇ ಪೇರಿಸಿತು. ಆದರೆ ಬೌಲಿಂಗ್ ವಿಭಾಗವಂತ್ತೂ ಸಂಪೂರ್ಣ ವಿಫಲ ಕಂಡು ಸೋಲಿಗೆ ಕಾರಣವಾಯಿತು. ಪಾಕಿಸ್ತಾನ ಆರಂಭಿಕರಾದ ಮೊಹಮ್ಮದ್ ರಿಜ್ವಾನ್(79) ಮತ್ತು ನಾಯಕ ಬಾಬರ್ ಅಜಂ(68) ಇಬ್ಬರೇ ಭಾರತದ ಬೌಲರ್ಗಳನ್ನು ಬೆಂಡೆತ್ತಿ ಈ ಮೊತ್ತವನ್ನು ಬೆನ್ನಟ್ಟಿದರು. ಒಂದೂ ವಿಕೆಟ್ ಕೀಳಲಾಗದಿದ್ದದು ಭಾರತೀಯ ಬೌಲಿಂಗ್ನ ಮಹಾ ದುರಂತವೆನಿಸಿತು.
ಇದನ್ನೂ ಓದಿ | T20 World Cup| ಸಂದರ್ಭಕ್ಕೆ ತಕ್ಕಂತೆ ಆಟಗಾರರ ಬದಲಾವಣೆ ನಿಶ್ಚಿತ; ನಾಯಕ ರೋಹಿತ್ ಶರ್ಮಾ