Site icon Vistara News

Commonwealth Games | ಹಿಂದಿನ ಆರು ಆವೃತ್ತಿಗಳಲ್ಲಿ ಭಾರತದ ಸಾಧನೆಗಳೇನು?

commonwealth games

ಬರ್ಮಿಂಗ್‌ಹ್ಯಾಮ್‌: ಗುರುವಾರ (ಜುಲೈ ೨೮) ಬರ್ಮಿಂಗ್‌ಹ್ಯಾಮ್‌ ಕಾಮನ್ವೆಲ್ತ್‌ ಗೇಮ್ಸ್‌ (Commonwealth Games) ಆರಂಭವಾಗಲಿದೆ. ಸುಮಾರು ೭೨ ದೇಶಗಳು ಪಾಲ್ಗೊಳ್ಳುವ ಈ ಕ್ರೀಡಾಕೂಟವು ಭಾರತದ ಪಾಲಿಗೆ ಅತ್ಯಂತ ಪ್ರಮುಖ. ಹೀಗಾಗಿ ಇದುವರೆಗಿಂತ ಅತ್ಯಂತ ಹೆಚ್ಚು ಪದಕಗಳನ್ನು ಗೆಲ್ಲುವ ಗುರಿಯೊಂದಿಗೆ ೩೦೦ಕ್ಕೂ ಅಧಿಕ ಸ್ಪರ್ಧಿಗಳನ್ನು ಭಾರತ ಬರ್ಮಿಂಗ್‌ಹ್ಯಾಮ್‌ಗೆ ಕಳುಹಿಸಿದೆ. ಕಳೆದ ವರ್ಷ ನಡೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಒಂದು ಚಿನ್ನದ ಪದಕ ಸೇರಿದಂತೆ ಒಟ್ಟಾರೆ ಏಳು ಪದಕ ಗೆಲ್ಲುವ ಮೂಲಕ ಇದುವರೆಗಿನ ಗರಿಷ್ಠ ಸಾಧನೆ ಮಾಡಿರುವ ಭಾರತ ಅಥ್ಲೀಟ್‌ಗಳ ನಿಯೋಗ, ಪ್ರದರ್ಶನ ಸುಧಾರಣೆಯೊಂದಿಗೆ ಮತ್ತಷ್ಟು ಪದಕಗಳನ್ನು ಗೆಲ್ಲುವ ಗುರಿ ಹೊಂದಿದೆ.

ಭಾರತ ತಂಡ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ವರ್ಷದಿಂದ ವರ್ಷಕ್ಕೆ ಪ್ರದರ್ಶನ ಸುಧಾರಣೆ ಮಾಡಿಕೊಂಡು ಬಂದಿದೆ. ಹೀಗೆ ೧೯೯೮ರಿಂದ ೨೦೧೮ರವರೆಗಿನ ೨೦ ವರ್ಷಗಳ ನಡುವೆ ಭಾರತದ ಕಾಮನ್ವೆಲ್ತ್‌ ಸಾಧನೆಯ ಸಂಕ್ಷಿಪ್ತ ವಿವರಣೆ ಇಲ್ಲಿದೆ.

೧೯೯೮ ಕಾಮನ್ವೆಲ್ತ್‌ ಗೇಮ್ಸ್‌ ಕೌಲಾಲಂಪುರ

ಈ ಕೂಟದಲ್ಲಿ ಭಾರತ ಒಟ್ಟು ೨೫ ಪದಕಗಳನ್ನು ಗೆದ್ದಿತ್ತು. ಈ ಕೂಟದಲ್ಲಿ ಹಾಕಿ ಮತ್ತು ಕ್ರಿಕೆಟ್‌ ಅನ್ನು ಸೇರಿಸಲಾಗಿತ್ತು. ಶೂಟಿಂಗ್‌ನಲ್ಲಿ ೪ ಚಿನ್ನ, ೨ ಬೆಳ್ಳಿ, ಒಂದು ಕಂಚು ಸೇರಿ ಒಟ್ಟು ಏಳು ಪದಕ ಹಾಗೂ ವೇಟ್‌ ಲಿಫ್ಟಿಂಗ್‌ನಲ್ಲಿ ೩ ಚಿನ್ನ ಹಾಗೂ ತಲಾ ಐದು ಬೆಳ್ಳಿ ಹಾಗೂ ಕಂಚಿನ ಪದಕ, ಬ್ಯಾಡ್ಮಿಂಟನ್‌ನಲ್ಲಿ ತಲಾ ೨ ರಜತ ಹಾಗೂ ಕಂಚಿನ ಪದಕ ಮತ್ತು ಬಾಕ್ಸಿಂಗ್‌ನಲ್ಲಿ ಒಂದು ಬೆಳ್ಳಿ ಪದಕವನ್ನು ಭಾರತ ಗೆದ್ದಿತ್ತು.

೨೦೦೨ ಕಾಮನ್ವೆಲ್ತ್ ಗೇಮ್ಸ್‌ ಮ್ಯೂನಿಚ್‌

ಭಾರತ ಒಟ್ಟು ಈ ಸ್ಪರ್ಧೆಯಲ್ಲಿ ೬೯ ಮೆಡಲ್‌ಗಳನ್ನು ಗೆದ್ದಿತ್ತು. ೩೦ ಚಿನ್ನ ೨೨ ಬೆಳ್ಳಿ ಹಾಗೂ ೧೭ ಕಂಚಿನ ಪದಕ ಗೆಲ್ಲುವ ಮೂಲಕ ಪದಕಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿತ್ತು. ೧೪ ಚಿನ್ನದ ಪದಕಗಳು ಶೂಟಿಂಗ್‌ನಲ್ಲಿ ೧೧ ಚಿನ್ನದ ಮೆಡಲ್‌ಗಳು ವೇಟ್‌ಲಿಫ್ಟಿಂಗ್‌ನಲ್ಲಿ ಭಾರತಕ್ಕೆ ಲಭಿಸಿತ್ತು. ಅಥ್ಲೆಟಿಕ್ಸ್‌ನಲ್ಲಿ ಅಂಜು ಬಾಬಿ ಜಾರ್ಜ್‌ ಲಾಂಗ್ ಜಂಪ್‌ನಲ್ಲಿ ಏಕೈಕ ಪದಕ ಗೆದ್ದಿದ್ದರು.’

೨೦೦೬ ಕಾಮನ್ವೆಲ್ತ್ ಗೇಮ್ಸ್‌ ಮೆಲ್ಬೋರ್ನ್‌

ಈ ಕೂಟದಲ್ಲಿ ಭಾರತ ಒಟ್ಟಾರೆ ೫೦ ಪದಕಗಳನ್ನು ತನ್ನದಾಗಿಸಿಕೊಂಡಿತು. ೨೨ ಚಿನ್ನ, ೧೭ ಬೆಳ್ಳಿ ಹಾಗೂ ೧೧ ಕಂಚಿನ ಪದಕಗಳನ್ನು ಗೆದ್ದ ಭಾರತ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಈ ಆವೃತ್ತಿಯಲ್ಲೂ ಮುಂದುವರಿಸಿತ್ತು. ಇಲ್ಲಿ ಶೂಟರ್‌ಗಳು ೧೬ ಚಿನ್ನ ಗೆದ್ದಿದ್ದರೆ, ವೇಟ್‌ಲಿಫ್ಟರ್‌ಗಳು ೩ ಹಾಗೂ ಟೇಬಲ್‌ ಟೆನಿಸ್‌ನಲ್ಲಿ ಎರಡು ಚಿನ್ನದ ಪದಕ ಲಭಿಸಿತ್ತು.

೨೦೧೦ ಕಾಮನ್ವೆಲ್ತ್‌ ಗೇಮ್ಸ್‌ ನವ ದೆಹಲಿ

ತನ್ನ ಆತಿಥ್ಯದಲ್ಲಿ ನಡೆದ ಈ ಕೂಟದಲ್ಲಿ ಭಾರತ ದಾಖಲೆಯ ೧೦೧ ಪದಕಗಳನ್ನು ಗದ್ದಿತ್ತು. ಭಾರತೀಯ ಅಥ್ಲೀಟ್‌ಗಳ ನಿಯೋಗ ೩೮ ಚಿನ್ನದ ಪದಕ, ೨೭ ಬೆಳ್ಳಿ ಪದಕ ಹಾಗೂ ೩೬ ಕಂಚಿನ ಪದಕ ತನ್ನದಾಗಿಸಿಕೊಂಡಿತ್ತು. ಇದು ಭಾರತದ ಪಾಲಿಗೆ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ದೊರೆತ ಗರಿಷ್ಠ ಪದಕದ ಸಾಧನೆಯಾಗಿದೆ.

೨೦೧೪ ಕಾಮನ್ವೆಲ್ತ್‌ ಗೇಮ್ಸ್‌ ಗ್ಲಾಸ್ಗೊ

ಭಾರತ ಈ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಒಟ್ಟಾರೆ ೬೪ ಪದಕಗಳನ್ನು ಗೆದ್ದಿತ್ತು. ಅದರಲ್ಲಿ 15 ಚಿನ್ನದ ಪದಕ, ೩೦ ರಜತ ಪದಕ, ಹಾಗೂ ೧೯ ಕಂಚಿನ ಪದಕ ಭಾರತ ಅಥ್ಲೀಟ್‌ಗಳ ಪಾಲಾಗಿತ್ತು. ಈ ಆವೃತ್ತಿಯಲ್ಲಿ ೫ ಚಿನ್ನದ ಪದಕ, ಶೂಟರ್‌ಗಳು ೪ ಚಿನ್ನ, ವೇಟ್‌ಲಿಫ್ಟರ್‌ಗಳು ೩ ಚಿನ್ನದ ಪದಕ ಗೆದ್ದಿದ್ದರು.

೨೦೧೮ರ ಕಾಮನ್ವೆಲ್ತ್‌ ಗೇಮ್ಸ್‌ ಗೋಲ್ಡ್‌ಕೋಸ್ಟ್‌

ಆಸ್ಟ್ರೇಲಿಯಾದ ಗೋಲ್ಡ್‌ಕೋಸ್ಟ್‌ನಲ್ಲಿ ಈ ಕಾಮನ್ವೆಲ್ತ್‌ ಗೇಮ್ಸ್ ನಡೆದಿತ್ತು. ಒಟ್ಟಾರೆ ೬೬ ಪದಕಗಳನ್ನು ಗೆದ್ದಿರುವ ಭಾರತ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿತ್ತು. ಈ ಕೂಟದಲ್ಲಿ ಭಾರತದ ಶೂಟರ್‌ಗಳು ಏಳು ಚಿನ್ನದ ಪದಕಗಳನ್ನು ಗೆದ್ದಿದ್ದರು. ಈ ಕೂಟದಲ್ಲಿ ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ ಚಿನ್ನದ ಪದಕ ಗೆದ್ದಿದ್ದರು.

ಇದನ್ನೂ ಓದಿ | Commenwealth Games | ಗಾಯಗೊಂಡಿರುವ ನೀರಜ್‌ ಅಲಭ್ಯ, ಭಾರತದ ಅಥ್ಲೆಟಿಕ್ಸ್‌ ತಂಡಕ್ಕೆ ಹಿನ್ನಡೆ

Exit mobile version