ದುಬೈ : ಪಾಕಿಸ್ತಾನ ವಿರುದ್ಧದ ಹಣಾಹಣಿಯಲ್ಲಿ ಸೋಲು ಕಂಡಿರುವ ಭಾರತ ತಂಡ, ಮಂಗಳವಾರ ನಡೆಯಲಿರುವ ಸೂಪರ್-೪ ಹಂತದ ತನ್ನ ಎರಡನೇ ಪಂದ್ಯದಲ್ಲಿ ಶ್ರೀಲಂಕಾ ತಂಡಕ್ಕೆ ಎದುರಾಗಲಿದೆ. ಇದರಿಂದಾಗಿ ಫೈನಲ್‌ಗೆ ಅವಕಾಶ ಪಡೆಬೇಕಾದರೆ ಈ ಪಂದ್ಯವನ್ನು ಭಾರತ ತಂಡ ಗೆಲ್ಲಲೇಬೇಕು. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದ ಬೌಲಿಂಗ್ ವಿಭಾಗ ವೈಫಲ್ಯ ಕಂಡಿರುವ ಕಾರಣ, ಲಂಕಾ ವಿರುದ್ಧದ ಹಣಾಹಣಿಯಲ್ಲಿ ಆ ವಿಭಾಗವನ್ನು ಬಲಗೊಳಿಸುವ ಅಗತ್ಯ ಎದುರಾಗಿದೆ. ರವಿಂದ್ರ ಜಡೇಜಾ ಅವರು ಗಾಯಗೊಂಡಿರುವ ಜತೆಗೆ ಹರ್ಷಲ್ ಪಟೇಲ್ ಹಾಗೂ ಜಸ್‌ಪ್ರಿತ್ ಬುಮ್ರಾ ಟೂರ್ನಿಗೆ ಅಲಭ್ಯರಾಗಿರುವ ಕಾರಣ ಇರುವ ಬೌಲರ್‌ಗಳ ಮೂಲಕವೇ ಸಮತೋಲನ ಕಾಪಾಡಿಕೊಳ್ಳಬೇಕಾಗಿದೆ.
ಪಾಕಿಸ್ತಾನ ತಂಡದ ವಿರುದ್ಧ ಭಾರತ ಐದು ಬೌಲರ್‌ಗಳನ್ನು ಆಯ್ಕೆ ಮಾಡಿಕೊಂಡಿತ್ತು. ಆದರೆ ಯಾವುದೇ ಬೌಲರ್‌ಗಳು ಪರಿಣಾಮಕಾರಿಯಾಗಿರಲಿಲ್ಲ. ಹಿರಿಯ ಬೌಲರ್ ಭುವನೇಶ್ವರ್ ಕುಮಾರ್ ಕೂಡ ತೀರಾ ವೈಫಲ್ಯ ಅನುಭವಿಸಿದ್ದರು. ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ೩ ವಿಕೆಟ್‌ಗಳನ್ನು ಕಬಳಿಸಿದ್ದರೆ, ಸೂಪರ್-೪ ಹಂತದಲ್ಲಿ ತೀವ್ರ ವೈಫಲ್ಯ ಎದುರಿಸಿದ್ದರು. ಯಜ್ವೇಂದ್ರ ಚಹಲ್ ಕತೆಯೂ ಅದೇ ಆಗಿತ್ತು. ಹೀಗಾಗಿ ರವೀಂದ್ರ ಜಡೇಜಾ ಅವರ ಬದಲಿಗೆ ಅಯ್ಕೆಯಾಗಿದ್ದ ಅಕ್ಷರ್ ಪಟೇಲ್ ಅವರನ್ನು ಲಂಕಾ ವಿರುದ್ಧ ಕಣಕ್ಕಿಳಿಸುವ ಸಾಧ್ಯತೆಗಳಿವೆ. ಅಂತೆಯೇ ಮೂರನೇ ವೇಗದ ಬೌಲರ್ ಆವೇಶ್ ಖಾನ್ ಕೂಡ ಜ್ವರದಿಂದ ಮುಕ್ತರಾಗಿ ಮತ್ತೆ ತಂಡಕ್ಕೆ ಮರಳುವ ಸಾಧ್ಯತೆಗಳಿವೆ.
ದಿನೇಶ್ ಅಥವಾ ಪಂತ್?
ರಿಷಭ್ ಪಂತ್ ಅಥವಾ ದಿನೇಶ್ ಕಾರ್ತಿಕ್ ಮಧ್ಯೆ ಯಾರು ಉತ್ತಮ ಎಂಬ ಚರ್ಚೆ ಮುಗಿಯುತ್ತಿಲ್ಲ. ಏತನ್ಮಧ್ಯೆ, ದೀಪಕ್ ಹೂಡ ಅವರಿಗೆ ಪಾಕ್ ವಿರುದ್ಧ ಅವಕಾಶ ನೀಡಲಾಗಿತ್ತು. ಅಂತೆಯೇ ರಿಷಭ್ ಪಂತ್ ಕೂಡ ಆಡುವ ೧೧ರ ಬಳಗದಲ್ಲಿ ಅವಕಾಶ ಪಡೆದುಕೊಂಡಿದ್ದರು. ಆದರೆ, ಅವರ ಬ್ಯಾಟಿಂಗ್ ವೈಖರಿ ಬಗ್ಗೆ ಆಕ್ಷೇಪಗಳು ವ್ಯಕ್ತಗೊಂಡಿವೆ.
ಪಾಕಿಸ್ತಾನ ವಿರುದ್ಧ ಭಾರತ ತಂಡದ ಆರಂಭಿಕ ಬ್ಯಾಟರ್‌ಗಳಾದ ಕೆ. ಎಲ್ ರಾಹುಲ್ ಹಾಗೂ ರೋಹಿತ್ ಶರ್ಮ ಉತ್ತಮ ಆರಂಭ ಒದಗಿಸಿಕೊಟ್ಟಿದ್ದು, ಆಶಾದಾಯಕ ಸಂಗತಿ. ಹೀಗಾಗಿ ಶ್ರೀಲಂಕಾ ವಿರುದ್ಧವೂ ದೊಡ್ಡ ಮೊತ್ತ ಪೇರಿಸಲು ಸಾಧ್ಯವಿದೆ. ಆದರೆ, ಅಫಘಾನಿಸ್ತಾನ ತಂಡವನ್ನು ಲಂಕಾ ತಂಡ ಚೇಸ್ ಮಾಡಿರುವುದನ್ನು ಗಮನಿಸಿದರೆ ಭಾರತ ಎಚ್ಚರಿಕೆ ವಹಿಸಬೇಕಾಗುತ್ತದೆ.
ಅತ್ತ ಲಂಕಾ ಬಳಗ ಗುಂಪು ಹಂತದ ಮೊದಲ ಪಂದ್ಯದಲ್ಲಿ ಹೀನಾಯವಾಗಿ ಸೋತಿದ್ದರೂ, ನಂತರದ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ವೀರೋಚಿತ ೨ ವಿಕೆಟ್ ಜಯ ಸಾಧಿಸಿ ಸೂಪರ್-೪ ಹಂತಕ್ಕೆ ಪ್ರವೇಶ ಪಡೆದುಕೊಂಡಿತ್ತು. ಸೂಪರ್‌೪ ಹಂತದ ಮೊದಲ ಪಂದ್ಯದಲ್ಲಿ ಅಫಘಾನಿಸ್ತಾನ ವಿರುದ್ಧ ೪ ವಿಕೆಟ್‌ಗಳ ಜಯ ಸಾಧಿಸಿತ್ತು. ಹೀಗಾಗಿ ಗೆಲ್ಲಲೇಬೇಕಾದ ಭಾರತ ತಂಡದ ನಾಯಕ ರೋಹಿತ್ ಶರ್ಮ ಎಚ್ಚರಿಕೆ ವಹಿಸಬೇಕಾಗಿದೆ.
ತಂಡಗಳು
ಭಾರತ: ರೋಹಿತ್ ಶರ್ಮ (ನಾಯಕ), ಕೆ. ಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ದೀಪಕ್ ಹೂಡ, ದಿನೇಶ್ ಕಾರ್ತಿಕ್, ಯಜ್ವೇಂದ್ರ ಚಹಲ್, ಭುವನೇಶ್ವರ್ ಕುಮಾರ್, ರವಿ ಬಿಷ್ಣೋಯಿ, ಅರ್ಶ್‌ದೀಪ್ ಸಿಂಗ್, ಆವೇಶ್ ಖಾನ್, ಅಕ್ಷರ್ ಪಟೇಲ್, ಆರ್. ಅಶ್ವಿನ್.
ಶ್ರೀಲಂಕಾ : ದಸುನ್ ಶನಕ (ನಾಯಕ), ದನುಷ್ಕಾ ಗುಣತಿಲಕ, ಪಾಥುಮ್ ನಿಸ್ಸಂಕಾ, ಕುಸಾಲ್ ಮೆಂಡಿಸ್, ಚರಿತಾ ಅಸಲಂಕಾ, ಭಾನುಕಾ ರಾಜಪಕ್ಸ, ಆಶೆನ್ ಭಂಡಾರ, ಧನಂಜಯ ಡಿ ಸಿಲ್ವಾ, ವಾನಿಂದು ಹಸರಂಗ, ಮಹೀಶ್ ತೀಕ್ಷಣ, ಜೆಫ್ರಿ ವಂಡರ್ಸೆ, ಪ್ರವೀಣ್ ಜಯವಿಕ್ರಮ, ಚಾಮಿಕಾ ಕರುಣಾರತ್ನೆ, ದಿಲ್ಶನ್ ಮಧುಶನಕ, ಮತೀಶ್ ಪತಿರಾಣಾ, ದಿನೇಶ್ ಚಂಡಿಮಲ್.
ಇದನ್ನೂ ಓದಿ | IND vs PAK | ಕೊಹ್ಲಿಯನ್ನು ನೋಡಿ ಕಲಿಯಿರಿ ಎಂದು ಸೂರ್ಯಕುಮಾರ್ ಮತ್ತು ಪಂತ್‌ಗೆ ಪಾಠ ಹೇಳಿದ ಗಂಭೀರ್