ಬೆಂಗಳೂರು : ಮೊದಲು ಹೇಳಿದ್ದಕ್ಕಿಂತ ಹಾಕಿ ಸ್ಟಿಕ್ ಮೂರು ಇಂಚು ದೊಡ್ಡದಿದೆ ಎಂದು ಭಾರತ ಹಾಕಿ ತಂಡದ ಗೋಲ್‌ಕೀಪರ್ ಶ್ರೀಜೇಶ್ ಅವರಿಗೆ ಇಂಡಿಗೊ ವಿಮಾನಯಾನ ಸಂಸ್ಥೆಯವರು (IndiGo Flight) ೧,೫೦೦ ರೂಪಾಯಿ ಹೆಚ್ಚುವರಿ ದರ ವಿಧಿಸಿದ ಪ್ರಸಂಗ ನಡೆದಿದೆ. ಈ ಬಗ್ಗೆ ಶ್ರೀಜೇಶ್ ಅವರು ಟ್ವಿಟರ್ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕ್ರೀಡಾ ಪ್ರೇಮಿಗಳು ಹಾಗೂ ನೆಟ್ಟಿಗರು ಕೂಡ ವಿಮಾನಯಾನ ಸಂಸ್ಥೆಯ ಧೋರಣೆಗೆ ಅಸಮಾಧಾನ ಹೊರಹಾಕಿದ್ದಾರೆ.
ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಶ್ರೀಜೇಶ್ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೊಚ್ಚಿಗೆ ಇಂಡಿಗೊ ವಿಮಾನದಲ್ಲಿ ಪ್ರಯಾಣ ಮಾಡಿದ್ದರು. ಬೋರ್ಡಿಂಗ್ ಪ್ರಕ್ರಿಯೆ ವೇಳೆ ನಿಮ್ಮ ಹಾಕಿ ಸ್ಟಿಕ್ ನಿಗದಿಗಿಂತ ಹೆಚ್ಚು ಉದ್ದವಿದೆ ಎಂದು ಆಕ್ಷೇಪಿಸಿದ ವಿಮಾನ ನಿಲ್ದಾಣದ ಗ್ರೌಂಡ್ ಸ್ಟಾಫ್, ಹೆಚ್ಚುವರಿ ಹಣ ನೀಡುವಂತೆ ಕೋರಿದ್ದಾರೆ. ಅಲ್ಲದೆ, ಮೂರು ಇಂಚು ಹೆಚ್ಚು ಉದ್ದವಿದ್ದ ಸ್ಟಿಕ್‌ಗೆ ೧೫೦೦ ರೂಪಾಯಿ ಹೆಚ್ಚು ಪಡೆದುಕೊಂಡಿದ್ದಾರೆ.
ಮೂಲಗಳ ಪ್ರಕಾರ ಶ್ರೀಜೇಶ್ ಅವರಿಗೆ ೩೮ ಇಂಚಿನ ಹಾಕಿ ಸ್ಟಿಕ್ ಅನ್ನು ಕೊಂಡೊಯ್ಯಲು ಇಂಡಿಗೊ ಸಂಸ್ಥೆ ಪೂರ್ವಾನುಮತಿ ನೀಡಿತ್ತು. ಆದರೆ, ಶ್ರೀಜೇಶ್ ಅವರ ಹೊಂದಿದ್ದ ಸ್ಟಿಕ್ ೪೧ ಇಂಚು ಉದ್ದವಿತ್ತು. ಹೀಗಾಗಿ ನಿಗದಿಗಿಂತ ಹೆಚ್ಚು ಉದ್ದವಿದೆ ಎಂದು ಹೆಚ್ಚುವರಿ ದರ ವಿಧಿಸಲಾಗಿದೆ ಎನ್ನಲಾಗಿದೆ.
ಏನಂದರು ಶ್ರೀಜೇಶ್
ಎಫ್‌ಐಎಚ್ ನನಗೆ ೪೧ ಇಂಚಿನ ಹಾಕಿ ಸ್ಟಿಕ್‌ನಲ್ಲಿ ಆಡುವ ಅವಕಾಶ ನೀಡಿದೆ. ಇಂಡಿಗೊ ಸಂಸ್ಥೆಯು ನನಗೆ ೩೮ ಇಂಚಿಗಿಂತ ದೊಡ್ಡ ಹಾಕಿ ಸ್ಟಿಕ್ ಕೊಂಡೊಯ್ಯಲು ಅವಕಾಶ ನೀಡುತ್ತಿಲ್ಲ. ಏನು ಮಾಡುವುದು? ಅದಕ್ಕಾಗಿ ಹೆಚ್ಚುವರಿ ೧೫೦೦ ರೂಪಾಯಿ ಪಾವತಿ ಮಾಡುವಂತಾಯಿತು,” ಎಂದು ಶ್ರೀಜೇಶ್ ಬರೆದುಕೊಂಡಿದ್ದಾರೆ.
ಘಟನೆ ಬಳಿಕ ಎಚ್ಚೆತ್ತ ಇಂಡಿಯೊ ಸಂಸ್ಥೆ, ಹಾಕಿ ಆಟಗಾರನಿಗೆ ಕ್ಷಮೆ ಕೋರಿದೆ. ನಿಮಗೆ ಆಗಿರುವ ಅಡಚಣೆಗೆ ಕ್ಷಮೆ ಕೋರುತ್ತೇವೆ. ನಿಮ್ಮ ಕ್ರೀಡಾ ಸಾಧನಗೆ ಬಗ್ಗೆ ನಮಗೆ ಹೆಮ್ಮೆಯಿದೆ. ನಿಮ್ಮ ಸೇವೆಗೆ ನಮ್ಮ ಪ್ರಯಾಣ ಸಂಸ್ಥೆ ಸಿದ್ಧವಿದೆ,” ಎಂಬುದಾಗಿ ಟ್ವೀಟ್ ಮಾಡಿದೆ.
ಇದನ್ನೂ ಓದಿ | Hockey India | ಹಾಕಿ ಇಂಡಿಯಾದ ಅಧ್ಯಕ್ಷರಾಗಿ ಮಾಜಿ ನಾಯಕ ದಿಲೀಪ್ ಟಿರ್ಕಿ ಅವಿರೋಧ ಆಯ್ಕೆ