ಜಕಾರ್ತ: ಇಲ್ಲಿ ನಡೆಯುತ್ತಿರುವ ಇಂಡೋನೇಷ್ಯಾ ಓಪನ್(Indonesia Open) ವರ್ಲ್ಡ್ ಟೂರ್ ಸೂಪರ್-1000′ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತಕ್ಕೆ ಗುರುವಾರ ಮಿಶ್ರ ಫಲಿತಾಂಶ ದಾಖಲಾಗಿದೆ. “ಆಲ್ ಇಂಡಿಯನ್’ ಹೋರಾಟದಲ್ಲಿ ಲಕ್ಷ್ಯ ಸೇನ್(Lakshya Sen) ಅವರು ಅನುಭವಿ ಕೆ. ಶ್ರೀಕಾಂತ್(Kidambi Srikanth) ವಿರುದ್ಧ ಸೋತು ಅಭಿಯಾನವನ್ನು ಮುಗಿಸಿದ್ದಾರೆ. ಪಿ.ವಿ. ಸಿಂಧು(PV Sindhu) ಕೂಡ ಮಹಿಳಾ ಸಿಂಗಲ್ಸ್ನಲ್ಲಿ ಸೋಲನುಭವಿಸಿ ಕೂಟದಿಂದ ನಿರ್ಗಮಿಸಿದ್ದಾರೆ.
ಗುರುವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಲಕ್ಷ್ಯ ಸೇನ್ ಅವರು ಕೆ. ಶ್ರೀಕಾಂತ್ ಎದುರು 17-21, 20-22 ನೇರ ಗೇಮ್ಗಳಿಂದ ಪರಾಭವಗೊಂಡರು. ಅನುಭವಿ ಕೆ. ಶ್ರೀಕಾಂತ್ ಅವರು ಬಲಿಷ್ಠ ಹೊಡೆತಗಳ ಮೂಲಕ ಆರಂಭದಿಂದಲೇ ಪಂದ್ಯದಲ್ಲಿ ಹಿಡಿ ಸಾಧಿಸಿದರು. ದ್ವಿತೀಯ ಗೇಮ್ನಲ್ಲಿ ಲಕ್ಷ್ಯ ಸೇನ್ ಪ್ರಬಲ ಪೈಪೋಟಿ ನೀಡಿದರೂ ಗೆಲುವು ದಾಖಲಿಸಲು ವಿಫಲರಾದರು. ಉಭಯ ಆಟಗಾರರ ಈ ಹೋರಾಟ 45 ನಿಮಿಷಗಳ ತನಕ ಸಾಗಿತು.
ಬುಧವಾರ ನಡೆದಿದ್ದ ಮೊದಲ ಸುತ್ತಿನ ಪಂದ್ಯದಲ್ಲಿ ಲಕ್ಷ್ಯ ಸೇನ್ ಅವರು ತನಗಿಂತ ಮೇಲಿನ ಶ್ರೇಯಾಂಕ ಹೊಂದಿದ್ದ ಮಲೇಷ್ಯಾದ ಲೀ ಜೀ ಜಿಯಾ ಅವರನ್ನು ಕೇವಲ 33 ನಿಮಿಷಗಳಲ್ಲಿ 21-13, 21-17ರಿಂದ ಮಣಿಸಿದ್ದರು. ಕೆ. ಶ್ರೀಕಾಂತ್ ಅವರು 21-13, 12-19ರಿಂದ ಚೀನದ ಲು ಗುವಾಂಗ್ ಜು ಅವರನ್ನು ಹಿಮ್ಮಟ್ಟಿಸಿದ್ದರು.
ಇದನ್ನೂ ಓದಿ
ಆಟ ಮುಗಿಸಿದ ಸಿಂಧು
ದಿನ ಮತ್ತೊಂದು ಮಹಿಳಾ ಸಿಂಗ್ಸಲ್ನ ಪ್ರಿ ಕ್ವಾರ್ಟರ್ ಕಾದಾಟದಲ್ಲಿ ಅವಳಿ ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ ಸಿಂಧು ತೈವಾನ್‌ನ ತೈ ತ್ಸು ಯಿಂಗ್ ಎದುರು 21-18, 21-16 ನೇರ ಗೇಮ್ಗಳಿಂದ ಸೋಲು ಕಂಡರು. ಈ ಮೂಲಕ ತ್ಸು ಯಿಂಗ್ ವಿರುದ್ಧ ಸಿಂಧು ಅವರ ವೈಫಲ್ಯ ಮತ್ತೆ ಮುಂದುವರಿಯಿತು. ವಿಶ್ವದ ಮಾಜಿ ನಂಬರ್ ಒನ್ ಆಟಗಾರ್ತಿ ಆಗಿರುವ ತ್ಸು ಯಿಂಗ್ ವಿರುದ್ಧ 2019ರಿಂದ ಸಿಂಧು ಒಂದೂ ಪಂದ್ಯವನ್ನು ಗೆದ್ದಿಲ್ಲ. ಒಟ್ಟಾರೆ ಸಿಂಧು ಈ ಎದುರಾಳಿ ವಿರುದ್ಧ ಕೇವಲ 5 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿದ್ದಾರೆ. ತ್ಸು ಯಿಂಗ್ ಅವರು ಸಿಂಧು ವಿರುದ್ಧ ಒಟ್ಟು 19 ಗೆಲುವು ದಾಖಲಿಸಿದ್ದಾರೆ.