ಮುಂಬಯಿ : ಹವಾಮಾನ ವೈಪರೀತ್ಯದ ಕಾರಣಕ್ಕೆ ಈಶಾನ್ಯ ರಾಜ್ಯಗಳಲ್ಲಿ ಕ್ರಿಕೆಟ್ ಆಡುವುದು ಮತ್ತು ಅಭ್ಯಾಸ ಮಾಡುವುದು ಸುಲಭವಲ್ಲ. ಹೀಗಾಗಿ ಆ ರಾಜ್ಯಗಳಲ್ಲಿ ಕ್ರಿಕೆಟ್ಗೆ (Indian Cricket) ಹೆಚ್ಚು ಮಾನ್ಯತೆ ಸಿಗುತ್ತಿಲ್ಲ. ಬದಲಾಗಿ ಮಳೆ, ಗಾಳಿಗೂ ಆಡಬಹುದಾದ ಫುಟ್ಬಾಲ್ ಪ್ರೀತಿ ಹೆಚ್ಚು. ಆದಾಗ್ಯೂ ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್ ಬಗ್ಗೆ ಅಲ್ಲಿನ ಮಂದಿ ಆಸಕ್ತಿ ವಹಿಸುತ್ತಿದ್ದಾರೆ. ಹೀಗಾಗಿ ಅವರಿಗೂ ಕ್ರಿಕೆಟ್ ತರಬೇತಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಅಲ್ಲಿ ಒಳಾಂಗಣ ಕ್ರಿಕೆಟ್ ತರಬೇತಿ ಕೇಂದ್ರಗಳನ್ನು ನಿರ್ಮಿಸಲು ಬಿಸಿಸಿಐ ಮುಂದಾಗಿದೆ.
ಅರುಣಾಚಲ ಪ್ರದೇಶ, ಮಣಿಪುರ, ಮಿಜೋರಾಮ್, ಮೇಘಾಲಯ, ನಾಗಾಲ್ಯಾಂಡ್ ಮತ್ತು ಸಿಕ್ಕಿಮ್ನಲ್ಲಿ ಒಳಾಂಗಣ ಕ್ರಿಕೆಟ್ ಸ್ಟೇಡಿಯಮ್ಗಳನ್ನು ನಿರ್ಮಿಸಲು ಬಿಸಿಸಿಐ ಟೆಂಡರ್ ಕರೆದಿದೆ. ಇಲ್ಲಿ ತರಬೇತಿ ಕೇಂದ್ರಗಳನ್ನು ನಿರ್ಮಾಣ ಮಾಡುವ ಜತೆಗೆ ವಾರ್ಷಿಕ ನಿರ್ವಹಣೆ ಮಾಡಲು ಇಚ್ಛಿಸುವ ಕಂಪನಿಗಳು ಮುಂದೆ ಬರಬೇಕು ಎಂಬುದಾಗಿ ಹೇಳಿದೆ.
ತರಬೇತಿ ಕೇಂದ್ರವನ್ನು ನಿರ್ಮಾಣ ಮಾಡಲು ಬಯಸುವ ಕಂಪನಿಗಳು 2 ಲಕ್ಷ ರೂಪಾಯಿ ಮರುಪಾವತಿಯಾಗದ ಮೊತ್ತವನ್ನು ನೀಡಿ ಟೆಂಡರ್ನಲ್ಲಿ ಪಾಲ್ಗೊಳ್ಳುವಂತೆ ಬಿಸಿಸಿಐ ಪ್ರಕಟಣೆ ಹೊರಡಿಸಿದೆ. ಇನ್ನೇನು ಕೆಲವೇ ದಿನಗಳಲ್ಲಿ ಬಿಡ್ ಪ್ರಕ್ರಿಯೆ ನಡೆಯಲಿದ್ದು ಕ್ರೀಡಾಂಗಣ ನಿರ್ಮಾಣ ಕಾರ್ಯಕ್ಕೆ ತಕ್ಷಣದಲ್ಲೇ ಚಾಲನೆ ಸಿಗಲಿದೆ ಎನ್ನಲಾಗಿದೆ.
ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಈಶಾನ್ಯ ರಾಜ್ಯಗಳ ಕ್ರಿಕೆಟ್ ತಂಡಗಳು ಹೆಚ್ಚು ಪ್ರಬಲವಾಗಿಲ್ಲ. ರಣಜಿ ಟ್ರೋಫಿಯಲ್ಲಿ ಶುಕ್ರವಾರ ನಾಗಾಲ್ಯಾಂಡ್ ತಂಡ ಉತ್ತರಾಖಂಡ ವಿರುದ್ಧ 25 ರನ್ಗಳಿಗೆ ಆಲ್ಔಟ್ ಆಗಿರುವುದೇ ಇದಕ್ಕೆ ಸಾಕ್ಷಿ . ಹೀಗಾಗಿ ಇಲ್ಲಿ ಕ್ರಿಕೆಟ್ನ ಅಭಿವೃದ್ಧಿಗೆ ಬಿಸಿಸಿಐ ಪ್ರಯತ್ನಿಸುತ್ತಿದೆ. ಅದಲ್ಲೊಂದು ಯತ್ನ ಒಳಾಂಗಣ ಕ್ರೀಡಾಂಗಣ.
ಇದನ್ನೂ ಓದಿ | ICC World Cup 2023| ತೆರಿಗೆ ಸಮಸ್ಯೆ; ಏಕದಿನ ವಿಶ್ವಕಪ್ ಆತಿಥ್ಯ ಕೈಜಾರುವ ಭೀತಿಯಲ್ಲಿ ಬಿಸಿಸಿಐ!