ಮೀರ್‌ಪುರ್ : ಟೀಮ್ ಇಂಡಿಯಾದ ವಿಕೆಟ್‌ಕೀಪರ್ ಬ್ಯಾಟರ್ ರಿಷಭ್ ಪಂತ್ ಬಾಂಗ್ಲಾದೇಶ ವಿರುದ್ಧದ ಏಕ ದಿನ ಸರಣಿಯ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದರು. ಶನಿವಾರ ನಡೆದ ಟೀಮ್ ಇಂಡಿಯಾದ ಅಭ್ಯಾಸದಲ್ಲಿ ಪಾಲ್ಗೊಂಡಿದ್ದ ಅವರು ಪಂದ್ಯ ಆರಂಭಕ್ಕೆ ಸ್ವಲ್ಪ ಹೊತ್ತಿನ ಮೊದಲು ಡ್ರೆಸ್ಸಿಂಗ್ ರೂಮ್ ತೊರೆದಿದ್ದರು. ಹೀಗಾಗಿ ಕೆ ಎಲ್ ರಾಹುಲ್ ವಿಕೆಟ್-ಕೀಪರ್ ಜವಾಬ್ದಾರಿ ವಹಿಸಿಕೊಂಡಿದ್ದರು.
ರಿಷಭ್ ಪಂತ್ ತಂಡಕ್ಕೆ ಲಭ್ಯರಿಲ್ಲ ಎಂಬುದನ್ನು ಬಿಸಿಸಿಐ ಹೇಳಿದೆ. ಆದರೆ ಯಾಕೆ ಆಡಲಿಲ್ಲ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಅದರೆ, ಮೂಲಗಳ ಪ್ರಕಾರ ರಿಷಭ್ ಪಂತ್ ಅವರೇ ಕೊನೇ ಕ್ಷಣದಲ್ಲಿ ತಮ್ಮನ್ನು ತಂಡದಿಂದ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರು ಎನ್ನಲಾಗಿದೆ. ಅಷ್ಟಾಗಿಯೂ ಪಂತ್ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ ಎಂಬುದು ಕ್ರಿಕೆಟ್ ಅಭಿಮಾನಿಗಳ ಪ್ರಶ್ನೆ. ಬಿಸಿಸಿಐ ಒಪ್ಪಿಗೆಯೊಂದಿಗೆ ಅವರು ತಂಡ ತೊರೆದಿರಬಹುದು ಎಂಬುದಾಗಿ ಹೇಳಲಾಗುತ್ತಿದೆ.
ರಿಷಭ್ ಪಂತ್ ಮೂರು ಪಂದ್ಯಗಳ ಏಕ ದಿನ ಸರಣಿಗೆ ಮಾತ್ರ ಲಭ್ಯರಿಲ್ಲ ಎಂಬುದು ಗೊತ್ತಾಗಿದೆ. ಡಿಸೆಂಬರ್ ೧೪ರಿಂದ ಆರಂಭವಾಗುವ ಟೆಸ್ಟ್ ಸರಣಿಯ ವೇಳೆ ತಂಡಕ್ಕೆ ವಾಪಸಾಗಲಿದ್ದಾರೆ ಎನ್ನಲಾಗಿದೆ. ಹೀಗಾಗಿ ಬಿಸಿಸಿಐ ರಿಷಭ್ ಪಂತ್ ಬದಲಿಗೆ ಬೇರೆ ಆಟಗಾರನನ್ನು ಆಯ್ಕೆ ಮಾಡಿಲ್ಲ.
ಡ್ರೆಸಿಂಗ್ ರೂಮ್‌ಗೆ ಬಂದಾಗಲೇ ತಿಳಿಯಿತು!
ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ವಿಕೆಟ್‌ಕೀಪಿಂಗ್ ಹೊಣೆಗಾರಿಕೆ ವಹಿಸಿಕೊಂಡಿದ್ದ ಕೆ. ಎಲ್ ರಾಹುಲ್ ಅವರಿಗೂ ರಿಷಭ್ ಪಂತ್ ಅಲಭ್ಯತೆ ಬಗ್ಗೆ ಮಾಹಿತಿ ಇಲ್ಲ. ಮೊದಲ ಪಂದ್ಯದ ಮುಕ್ತಾಯದ ಬಳಿಕ ಮಾತನಾಡಿದ ಅವರು “ಡ್ರೆಸಿಂಗ್ ರೂಮ್‌ಗೆ ಹೋಗುವ ತನಕವೂ ನನಗೆ ರಿಷಭ್ ಆಡುವುದಿಲ್ಲ ಎಂಬ ಮಾಹಿತಿ ಇರಲಿಲ್ಲ,” ಎಂಬುದಾಗಿ ತಿಳಿಸಿದ್ದಾರೆ.
ರಿಷಭ್ ಪಂತ್ ಕಳಪೆ ಫಾರ್ಮ್ ಎದುರಿಸುತ್ತಿದ್ದಾರೆ. ಏಷ್ಯಾ ಕಪ್, ಟಿ೨೦ ವಿಶ್ವ ಕಪ್ ಹಾಗೂ ನ್ಯೂಜಿಲ್ಯಾಂಡ್ ವಿರುದ್ಧದ ಪ್ರವಾಸದ ವೇಳೆ ಪಂತ್ ರನ್ ಬರ ಎದುರಿಸಿದ್ದರು. ಇದರಿಂದಾಗಿ ಅವರು ಟೀಕೆಗಳಿಗೆ ಗುರಿಯಾಗಿದ್ದರು. ಇದೀಗ ಅವರು ವಿಶ್ರಾಂತಿ ತೆಗೆದುಕೊಳ್ಳುವುದಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ | IND VS BAN | ಬಾಂಗ್ಲಾ ವಿರುದ್ಧದ ಏಕದಿನ ಸರಣಿಯಿಂದ ದಿಢೀರ್ ಹೊರಬಿದ್ದ ರಿಷಭ್ ಪಂತ್ ಕಾರಣ ಏನು?