ಪೋರ್ಟ್ ಆಫ್ ಸ್ಪೇನ್: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಮುಕ್ತಾಯದ ಬಳಿಕ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್‌ಗೆ ಪ್ರವಾಸ ಕೈಗೊಳ್ಳಲಿದೆ. ಜುಲೈ-ಆಗಸ್ಟ್ ತಿಂಗಳಲ್ಲಿ ನಡೆಯುವ ಉಭಯ ತಂಡಗಳ ಸರಣಿಯ ತಾತ್ಕಾಲಿಕ ವೇಳಾಪಟ್ಟಿಯೊಂದು ಪ್ರಕಟಗೊಂಡಿದೆ. ಸದ್ಯ ಬಿಸಿಸಿಐಯಿಂದ ಒಪ್ಪಿಗೆ ಸಿಗುವುದೊಂದೆ ಬಾಕಿ ಉಳಿದಿದೆ. ಅನಂತರ ವೇಳಾಪಟ್ಟಿ ಅಧಿಕೃತಗೊಳ್ಳಲಿದೆ.
ಇತ್ತಂಡಗಳ ಕ್ರಿಕೆಟ್ ಸರಣಿಯಲ್ಲಿ 2 ಟೆಸ್ಟ್, 3 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನು ಆಡಲಾಗುವುದು. ಹೆಚ್ಚುರಿಯಾಗಿ 2 ಟಿ20 ಪಂದ್ಯಗಳನ್ನು ಅಮೆರಿಕದ ಫ್ಲೋರಿಡಾದಲ್ಲಿ ಆಡುವ ಸಾಧ್ಯತೆ ಇದೆ. ಆದರೆ ಇದು ಅಧಿಕೃತಗೊಂಡಿಲ್ಲ. ಪ್ರಸಕ್ತ ಸಾಗುತ್ತಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಫೈನಲ್ ವೇಳೆ ಬಿಸಿಸಿಐ ಮತ್ತು “ಕ್ರಿಕೆಟ್ ವೆಸ್ಟ್ ಇಂಡೀಸ್’ನ ವರಿಷ್ಠರು ಮಾತುಕತೆ ನಡೆಸಿ ವೇಳಾಪಟ್ಟಿಯನ್ನು ಅಂತಿಮಗೊಳಿಸಲಿದ್ದಾರೆ. ಇದೇ ಕಾರಣಕ್ಕೆ ವಿಂಡೀಸ್ ಕ್ರಿಕೆಟ್ ಮಂಡಳಿಯ ಸದಸ್ಯರು ಲಂಡನ್ನ ಓವಲ್ಗೆ ಆಗಮಿಸಿದ್ದಾರೆ.
ಸದ್ಯದ ವೇಳಾಪಟ್ಟಿಯ ಪ್ರಕಾರ ಟೆಸ್ಟ್ ಪಂದ್ಯಗಳು ಡೊಮಿನಿಕಾ (ಜು. 12-16) ಮತ್ತು ಟ್ರಿನಿಡಾಡ್‌ನಲ್ಲಿ (ಜು. 20-24) ನಡೆಯಲಿವೆ. ಏಕದಿನ ಪಂದ್ಯಗಳು ಬಾರ್ಬಡಾಸ್ (ಜು. 27, 29) ಮತ್ತು ಟ್ರಿನಿಡಾಡ್ (ಆ. 1). ಟಿ20 ಪಂದ್ಯಗಳನ್ನು ಟ್ರಿನಿಡಾಡ್ (ಆ. 4) ಮತ್ತು ಗಯಾನಾದಲ್ಲಿ (ಆ. 6, ಆ. 8) ಆಡಲಾಗುವುದು ಎಂದು ಹೇಳಲಾಗಿದೆ. ಆದರೆ ಅಂತಿಮ ವೇಳಾಪಟ್ಟಿ ಬಿಡುಗಡೆಗೊಂಡ ಬಳಿಕ ಇದರಲ್ಲಿ ಸಣ್ಣ ಪುಟ್ಟ ಬದಲಾವಣೆ ಕಂಡುಬರುವ ಸಾಧ್ಯೆತೆ ಇದೆ.
ಇದನ್ನೂ ಓದಿ WTC Final 2023 : ಶಮಿ ಎಸೆತಕ್ಕೆ ಮರ್ನಸ್ ಲಾಬುಶೇನ್ ಬೌಲ್ಡ್ ಆದ ರೀತಿ ಹೀಗಿದೆ
ಏಷ್ಯಾ ಕಪ್ ಮತ್ತು ಏಕದಿನ ವಿಶ್ವ ಕಪ್ ದೃಷ್ಟಿಯಲ್ಲಿ ಭಾರತಕ್ಕೆ ಈ ಸರಣಿ ಮಹತ್ವದ್ದಾಗಿದೆ. ಏಕೆಂದರೆ ತಂಡ ಸಂಯೋಜನೆಗೆ ಇದು ಉತ್ತಮ ಅವಕಾಶವಾಗಿದೆ.