ಮುಂಬಯಿ: ವೆಸ್ಟ್ ಇಂಡೀಸ್(IND vs WI) ವಿರುದ್ಧದ ಸರಣಿಯ ಮೂರು ಮಾದರಿಗೆ ಭಾರತ ತಂಡ ಪ್ರಕಟಗೊಂಡಿದೆ. ಆದರೆ ಟೆಸ್ಟ್ ಸರಣಿಗೆ ಪ್ರಕಟಮಾಡಲಾದ ತಂಡವನ್ನು ನೋಡಿ ಅನೇಕ ಮಾಜಿ ಆಟಗಾರರು ಬಿಸಿಸಿಐ ವಿದುದ್ಧ ಲೇವಡಿ ಮಾಡಿದ್ದಾರೆ. ಇದೀಗ ಈ ಸಾಲಿಗೆ ಸುನೀಲ್ ಗವಾಸ್ಕರ್(sunil gavaskar) ಕೂಡ ಸೇರ್ಪಡೆಯಾಗಿದ್ದಾರೆ. “ಉತ್ತಮ ಅವಕಾಶವೊಂದನ್ನು ಕಳೆದುಕೊಂಡಿದ್ದೀರ” ಎಂದು ಹೇಳುವ ಮೂಲಕ ಬಿಸಿಸಿಐ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ಸೋತ ಬಳಿಕ ಭಾರತ ಟೆಸ್ಟ್ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ಇದಕ್ಕೆ ಬಿಸಿಸಿಐ ಕೂಡ ಸೊಪ್ಪುಹಾಕಿತ್ತು. ಯಂಗ್ ಇಂಡಿಯಾ ಶೀಘ್ರದಲ್ಲೇ ಪ್ರಕಟಗೊಳ್ಳಲಿದೆ ಎಂದು ಹೇಳಿತ್ತು. ಆದರೆ ಶುಕ್ರವಾರ ಪ್ರಕಟಗೊಂಡ ತಂಡವನ್ನು ನೋಡುವಾಗ ಅದೇ ಹಾಡು ಅದೇ ರಾಗ ಎಂಬಂತೆ ಹಿರಿಯ ಆಟಗಾರರೆಲ್ಲ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ತೋರಿಕೆಗಷ್ಟೇ ಚೇತೇಶ್ವರ್ ಪೂಜಾರ(Cheteshwar Pujara) ಮತ್ತು ಉಮೇಶ್ ಯಾದವ್(Umesh Yadav) ಅವರನ್ನು ಕೈ ಬಿಟ್ಟಂತಿದೆ.
ಯುವ ಆಟಗಾರರಾದ ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್ ಅವರನ್ನು ತಂಡಕ್ಕೆ ಸೇರಿಸಲಾಗಿದ್ದರೂ, ರೋಹಿತ್ ಶರ್ಮಾ, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್ ಮತ್ತು ಅಕ್ಷರ್ ಪಟೇಲ್ ಅವರನ್ನು ಮುಂದುವರಿಸಲಾಗಿದೆ. ಇದೇ ಕಾರಣಕ್ಕೆ ಗವಾಸ್ಕರ್ ಬಿಸಿಸಿಐ ವಿರುದ್ಧ ಗರಂ ಆಗಿದ್ದಾರೆ. ಇದೇ ವರ್ಷದಲ್ಲಿ ಏಕದಿನ ವಿಶ್ವಕಪ್ ನಡೆಯಲಿರುವ ಕಾರಣ ಸೀನಿಯರ್ ಆಟಗಾರರಿಗೆ ಟೆಸ್ಟ್ ನಿಂದ ವಿಶ್ರಾಂತಿ ನೀಡಬೇಕಿತ್ತು ಎಂದಿದ್ದಾರೆ.
ವಿಂಡೀಸ್ ವಿರುದ್ಧದ ಸರಣಿ ಮುಕ್ತಾಯದ ಬೆನ್ನಲೇ ಏಷ್ಯಾ ಕಪ್ ನಡೆಯಲಿದೆ ಜತೆಗೆ ಅಕ್ಟೋಬರ್ ತಿಂಗಳಿನಲ್ಲಿ ಏಕದಿನ ವಿಶ್ವ ಕಪ್ ಕೂಡ ನಡೆಯಲಿದೆ. ಹೀಗಾಗಿ ಈ ಸರಣಿಗೆ ಮಹತ್ವ ನೀಡುವ ನಿಟ್ಟಿನಲ್ಲಿ ಟೆಸ್ಟ್ ಸರಣಿಗೆ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಬೇಕಿತ್ತು. ಅತಿಯಾದ ಕ್ರಿಕೆಟ್ನಿಂದ ಅನೇಕ ಹಿರಿಯ ಆಟಗಾರರು ದಣಿದಿದ್ದಾರೆ. ಈ ಎಲ್ಲ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ವಿಶ್ರಾಂತಿ ನೀಡಬೇಕಿತ್ತು. ಆದರೆ ಈ ಅದ್ಭುತ ಅವಕಾಶವೊಂದನ್ನು ಬಿಸಿಸಿಐ ಕೆಳೆದುಕೊಂಡಿದೆ ಎಂದು ಹೇಳಿದರು.
ಇದನ್ನೂ ಓದಿ INDvsWI : ಸರ್ಫರಾಜ್ ಖಾನ್ ಆಯ್ಕೆ ಮಾಡುವುದಿಲ್ಲ ಎಂದು ಘೋಷಿಸಲಿ; ಬಿಸಿಸಿಐಗೆ ಮಾಜಿ ಆಟಗಾರನ ಸವಾಲು
ಟೆಸ್ಟ್ ಕ್ರಿಕೆಟ್ ವಿಶ್ವ ಕಪ್ಗೆ ಇನ್ನೂ ಎರಡು ವರ್ಷಗಳಿವೆ. ಈಗ ಇರುವ ಅನೇಕ ಆಟಗಾರರು ಆ ವೇಳೆಗೆ ತಂಡದಲ್ಲಿ ಇರುವುದು ಅನುಮಾನ. ಏಕೆಂದರೆ ಈಗಾಗಲೇ ಕೊಹ್ಲಿ, ರಹಾನೆ, ರೋಹಿತ್ ಸೇರಿ ಅನೇಕರು 35ರ ಸನಿಹದಲ್ಲಿದ್ದಾರೆ. ಇವರನೆಲ್ಲ ತಂಡದಿಂದ ಕೈ ಬಿಟ್ಟು ಯುವ ಆಟಗಾರರಿಗೆ ಅವಕಾಶ ನೀಡಿದರೆ ಉತ್ತಮ ಎಂದು ಬಿಸಿಸಿಐಗೆ ಸಲಹೆಯನ್ನೂ ಕೂಡ ಗವಾಸ್ಕರ್ ನೀಡಿದ್ದಾರೆ.