ಮುಂಬಯಿ: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ 3ನೇ ವನಿತಾ ಟಿ20 ಪಂದ್ಯದಲ್ಲಿ ಭಾರತ 21 ರನ್ನುಗಳಿಂದ ಸೋಲು ಕಂಡಿದೆ. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ 2-1 ಹಿನ್ನಡೆಗೆ ಒಳಗಾಗಿದೆ.
ಬುಧವಾರ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಆಸ್ಟ್ರೇಲಿಯ 8 ವಿಕೆಟ್ ನಷ್ಟಕ್ಕೆ 172 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಭಾರತ 7 ವಿಕೆಟಿಗೆ 151 ರನ್ ಗಳಿಸಿ ಶರಣಾಯಿತು. ಭಾರತ ಕಳೆದ ದ್ವಿತೀಯ ಪಂದ್ಯದಲ್ಲಿ ಸೂಪರ್ ಓವರ್ನಲ್ಲಿ ಗೆಲವು ಸಾಧಿಸಿತ್ತು. ಆದರೆ ಈ ಪಂದ್ಯದಲ್ಲಿ ಮೇಲುಗೈ ಸಾಧಿಸಲು ಎಡವಿತು.
ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 5 ರನ್ನಿಗೆ 2 ವಿಕೆಟ್ ಕಳೆದುಕೊಂಡು ಆರಂಭಿಕ ಕುಸಿತಕ್ಕೆ ಒಳಗಾಯಿತು. ಆದರೆ ಮಧ್ಯಮ ಕ್ರಮಾಂಕದ ಆಟಗಾರ್ತಿಯರಾದ ಎಲ್ಲಿಸ್ ಪೆರ್ರಿ ಮತ್ತು ಗ್ರೇಸ್ ಹ್ಯಾರಿಸ್ ಸೇರಿ ತಂಡವನ್ನು ಮೇಲೆತ್ತಿದರು. ಸ್ಫೋಟಕ ಆಟವಾಡಿದ ಪೆರ್ರಿ ಕೇವಲ 47 ಎಸೆತಗಳಿಂದ 75 ರನ್ ಸಿಡಿಸಿದರು (9 ಬೌಂಡರಿ, 3 ಸಿಕ್ಸರ್). ಗ್ರೇಸ್ ಹ್ಯಾರಿಸ್ ಆಟವೂ ಬಿರುಸಿನಿಂದ ಕೂಡಿತ್ತು. ಅವರ 41 ರನ್ 18 ಎಸೆತಗಳಿಂದ ಬಂತು. 4 ಫೋರ್, 3 ಸಿಕ್ಸರ್ ಬಾರಿಸಿದರು. ಭಾರತ ಪರ ರೇಣುಕಾ ಸಿಂಗ್, ಅಂಜಲಿ ಸರ್ವಾಣಿ, ದೀಪ್ತಿ ಶರ್ಮ, ದೇವಿಕಾ ವೈದ್ಯ ತಲಾ 2 ವಿಕೆಟ್ ಉರುಳಿಸಿದರು.
ಚೇಸಿಂಗ್ ವೇಳೆ ಭಾರತದ ಭರವಸೆಯ ಆಟಗಾರ್ತಿ ಸ್ಮತಿ ಮಂಧನಾ (1) ಅವರನ್ನು ಬೇಗನೇ ಕಳೆದುಕೊಂಡಿತು. ಶಫಾಲಿ ವರ್ಮ (52), ನಾಯಕಿ ಹರ್ಮನ್‌ಪ್ರೀತ್ ಕೌರ್ (37) ಮತ್ತು ದೀಪ್ತಿ ಶರ್ಮ (ಅಜೇಯ 25) ಹೊರತುಪಡಿಸಿ ಉಳಿದ ಆಟಗಾರ್ತಿಯರು ಬ್ಯಾಟಿಂಗ್ ವೈಫಲ್ಯ ಕಂಡ ಕಾರಣ ಸೋಲು ಕಂಡಿತು.
ಇದನ್ನೂ ಓದಿ | IND VS BAN | ಬೇಲ್ಸ್ ಕೃಪೆಯಿಂದ ಜೀವದಾನ ಪಡೆದ ಶ್ರೇಯಸ್ ಅಯ್ಯರ್: ವಿಡಿಯೊ ವೈರಲ್