ಢಾಕಾ: ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರು ಬಾಂಗ್ಲಾದೇಶ(INDW vs BANW) ಪ್ರವಾಸಕ್ಕೆ ಸಜ್ಜಾಗಿದ್ದಾರೆ. ಬಾಂಗ್ಲಾ ವಿರುದ್ಧ ತಲಾ 3 ಟಿ20 ಮತ್ತು ಏಕದಿನ ಪಂದ್ಯಗಳನ್ನಾಡಲು ಹರ್ಮನ್ಪ್ರೀತ್ ಕೌರ್ ಬಳಗ ಜುಲೈ 6 ರಂದು ಢಾಕಾಗೆ ಪ್ರಯಾಣ ಬೆಳೆಸಲಿದೆ. ಎಲ್ಲ ಪಂದ್ಯಗಳು ಮೀರ್‌ಪುರದ ಶೇರ್-ಎ-ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ.
ವೇಳಾಪಟ್ಟಿ ಪ್ರಕಾರ ಮೊದಲು ಟಿ 20 ಸರಣಿ ನಡೆಯಲಿದೆ. ಇದು ಜುಲೈ 9, 11 ಮತ್ತು 13 ರಂದು ಢಾಕಾದಲ್ಲಿ ನಡೆಯಲಿದೆ. 2024ರ ಮಹಿಳಾ ಟಿ 20 ವಿಶ್ವಕಪ್‌ಗೆ ಬಾಂಗ್ಲಾದೇಶ ಅತಿಥೇಯವಾಗಿದೆ. ಹೀಗಾಗಿ ಈ ಸರಣಿ ಬಾಂಗ್ಲಾ ಪಾಲಿಗೆ ಮಹತ್ವದ್ದಾಗಿದೆ. ಏಕದಿನ ಸರಣಿ ಜುಲೈ 16, 19 ಮತ್ತು 22 ರಂದು ನಡೆಯಲಿದೆ. ಈ ಮೂರು ಪಂದ್ಯಗಳು 2022-25 ಐಸಿಸಿ ಮಹಿಳಾ ಏಕದಿನ ಚಾಂಪಿಯನ್‌ಶಿಪ್ ಭಾಗವಾಗಿರಲಿದೆ.
ಇದನ್ನೂ ಓದಿ ICC World Cup 2023: ವಿಶ್ವ ಕಪ್ ಅರ್ಹತಾ ಪಂದ್ಯಗಳಿಗೆ ವೇದಿಕೆ ಸಜ್ಜು; 2 ಸ್ಥಾನಕ್ಕೆ 10 ತಂಡಗಳ ಪೈಪೋಟಿ
ಭಾರತ ಪಾಕ್ ಪಂದ್ಯ ರದ್ದು
ಹಾಂಗ್ ಕಾಂಗ್‌ನಲ್ಲಿ ನಡೆಯುತ್ತಿರುವ ಮಹಿಳೆಯರ ಏಷ್ಯಾ ಕಪ್‌ನ ಶನಿವಾರ ನಡೆಯಬೇಕಿದ್ದ ಭಾರತ ‘ಎ’ ಮತ್ತು ಪಾಕಿಸ್ತಾನ ‘ಎ’ ನಡುವಣ ಪಂದ್ಯ ಒಂದೂ ಎಸೆತ ಕಾಣದೆ ರದ್ದುಗೊಂಡಿತು. ಫಲಿತಾಂಶ ಬಾರದ ಕಾರಣ ಎರಡೂ ತಂಡಗಳು ಟೂರ್ನಿಯ ಸೆಮಿಫೈನಲ್‌ಗೆ ತೇರ್ಗಡೆಯಾದವು. ಉಭಯ ತಂಡಗಳು ‘ಎ’ ಗುಂಪಿನಲ್ಲಿ ಮೊದಲೆರಡು ಸ್ಥಾನ ಪಡೆದ ಕಾರಣ ಸೆಮಿಗೆ ಲಗ್ಗೆಯಿಟ್ಟಿತು. ಸೆಮಿಯಲ್ಲಿ ಭಾರತ ತಂಡ ಲಂಕಾ ಸವಾಲು ಎದುರಿಸಿದರೆ, ಪಾಕ್ ತಂಡ ಬಾಂಗ್ಲಾದೇಶ ವಿರುದ್ಧ ಸೆಣಸಾಡಲಿದೆ.