ಕೊಲಂಬೊ: 9ನೇ ಆವೃತ್ತಿಯ ಮಹಿಳೆಯರ ಏಷ್ಯಾ ಕಪ್ ಕ್ರಿಕೆಟ್(Womens Asia Cup T20 2024) ಪಂದ್ಯಾವಳಿಗೆ ಕ್ಷಣಗಣನೆ ಮೊದಲ್ಗೊಂಡಿದೆ. ನಾಳೆ(ಶುಕ್ರವಾರ) ನಡೆಯುವ ಉದ್ಘಾಟನ ಪಂದ್ಯದಲ್ಲಿ ಯುಎಇ ಮತ್ತು ನೇಪಾಳ ಮುಖಾಮುಖಿಯಾಗುವ ಮೂಲಕ ಟೂರ್ನಿಗೆ ವಿದ್ಯುಕ್ತ ಚಾಲನೆ ಸಿಗಲಿದೆ. ಇದೇ ದಿನ ರಾತ್ರಿ ನಡೆಯುವ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಭಾರತ(India Women) ತಂಡ ಬದ್ಧ ಎದುರಾಳಿ ಪಾಕಿಸ್ತಾನದ(INDW vs PAKW) ವಿರುದ್ಧ ಸೆಣಸಾಡಲಿದೆ. ಶ್ರೀಲಂಕಾದ ಡಂಬುಲದಲ್ಲಿ ಪಂದ್ಯಾವಳಿ ನಡೆಯಲಿದೆ.
7 ಬಾರಿ ಟೂರ್ನಿಯಲ್ಲಿ ಚಾಂಪಿಯನ್ ಆಗುವ ಮೂಲಕ ಪ್ರಭುತ್ವ ಸ್ಥಾಪಿಸಿರುವ ಭಾರತ ಈ ಬಾರಿಯೂ ಕಪ್ ಗೆಲ್ಲುವ ಫೇವರಿಟ್ ಆಗಿದೆ. ಅದರಲ್ಲೂ ಮೊದಲ ಪಂದ್ಯದಲ್ಲಿಯೇ ಪಾಕ್ ವಿರುದ್ಧ ಆಡುತ್ತಿರುವುದು ಆಟಗಾರ್ತಿಯರ ಜೋಶ್ ಇನ್ನಷ್ಟು ಹೆಚ್ಚುವಂತೆ ಮಾಡಿದೆ. ಭಾರತ ಟೂರ್ನಿಯಲ್ಲಿ ಕಪ್ ಗೆಲ್ಲದ್ದು ಒಂದು ಬಾರಿ ಮಾತ್ರ.
2018ರಲ್ಲಿ ಮಲೇಷ್ಯಾದಲ್ಲಿ ನಡೆದಿದ್ದ 7ನೇ ಆವೃತ್ತಿಯ ಫೈನಲ್ನಲ್ಲಿ ಭಾರತಕ್ಕೆ ಬಾಂಗ್ಲಾದೇಶದ 3 ವಿಕೆಟ್ ಅಂತರದ ಆಘಾತಕಾರಿ ಸೋಲುಣಿಸಿ ಚೊಚ್ಚಲ ಏಷ್ಯಾ ಕಪ್ ಗೆದ್ದು ಸಂಭ್ರಮಿಸಿತ್ತು. ಈ ಒಂದು ಆವೃತ್ತಿ ಬಿಟ್ಟರೆ ಉಳಿದೆಲ್ಲ ಆವೃತ್ತಿಯಲ್ಲಿಯೂ ಭಾರತವೇ ಕಪ್ ಗೆದ್ದು ಪಾರುಪತ್ಯ ಸಾಧಿಸಿದೆ. ಮಹಿಳಾ ಏಷ್ಯಾ ಕಪ್ ಮೊದಲು ಆರಂಭಗೊಂಡಿದ್ದು 2004ರಲ್ಲಿ ಮಿಥಾಲಿ ಸಾರಥ್ಯದಲ್ಲಿ ಭಾರತ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಭಾರತ ಮತ್ತು ಆತಿಥೇಯ ಶ್ರೀಲಂಕಾ ಮಾತ್ರ ಈ ಆವೃತ್ತಿಯಲ್ಲಿ ಆಡಿತ್ತು. ಇತ್ತಂಡಗಳು 5 ಪಂದ್ಯಗಳ ಸರಣಿಯನ್ನಾಡಿದವು. ಭಾರತ ಎಲ್ಲ 5 ಪಂದ್ಯಗಳನ್ನು ಜಯಿಸಿ ಚಾಂಪಿಯನ್ ಎನಿಸಿತ್ತು.
ಮುಖಾಮುಖಿ
ಭಾರತ ಮತ್ತು ಪಾಕಿಸ್ತಾನ ಮಹಿಳಾ ತಂಡ ಇದುವರೆಗೆ 13 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಭಾರತ 10 ಪಂದ್ಯ ಗೆದ್ದು ಪ್ರಾಬಲ್ಯ ಸಾಧಿಸಿದೆ. ಪಾಕಿಸ್ತಾನ ಕೇಲವ 3 ಪಂದ್ಯ ಗೆದ್ದಿದೆ. ಇತ್ತಂಡಗಳು ಕೊನೆಯ ಬಾರಿಗೆ ಮುಖಾಮುಖಿಯಾಗಿದ್ದು 2022ರಲ್ಲಿ. ಈ ಪಂದ್ಯವನ್ನು ಭಾರತ 107 ರನ್ಗಳಿಂದ ಗೆದ್ದು ಬೀಗಿತ್ತು.
ಭಾರತ ಬಲಿಷ್ಠ
ಇತ್ತೀಚಿಗೆ ಭಾರತ ತಂಡದ ಪ್ರದರ್ಶನವನ್ನು ನೋಡುವಾಗ ಭಾರತ ಬಲಿಷ್ಠ ಎನ್ನಲಡ್ಡಿಯಿಲ್ಲ. ಆರಂಭಿಕ ಆಟಗಾರ್ತಿಯರಾದ ಸ್ಮೃತಿ ಮಂಧಾನ, ಶಫಾಲಿ ವರ್ಮ, ಮಧ್ಯಮ ಕ್ರಮಾಂಕದಲ್ಲಿ ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮ ಮತ್ತು ರಿಚಾ ಘೋಷ್ ಪ್ರಚಂಡ ಬ್ಯಾಟಿಂಗ್ ಫಾರ್ಮ್ನಲ್ಲಿದ್ದಾರೆ. ಹೀಗಾಗಿ ನಾಳೆ(ಶುಕ್ರವಾರ) ನಡೆಯುವ ಪಾಕ್ ವಿರುದ್ಧದ ಪಂದ್ಯದಲ್ಲಿಯೂ ಇವರ ಬ್ಯಾಟಿಂಗ್ ಮೇಲೆ ತಂಡ ಬೆಟ್ಟದಷ್ಟು ನಿರೀಕ್ಷೆ ಇರಿಸಿದೆ.
ಇದನ್ನೂ ಓದಿ Asia Cup 2024 : ಮಹಿಳಾ ಏಷ್ಯಾಕಪ್ ಟೂರ್ನಿಗೆ ಭಾರತ ತಂಡ ಪ್ರಕಟ
ಉಭಯ ತಂಡಗಳು
ಭಾರತ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ಉಮಾ ಚೆಟ್ರಿ (ವಿಕೆಟ್ ಕೀಪರ್), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ, ಜೆಮಿಮಾ ರೊಡ್ರಿಗಸ್, ರೇಣುಕಾ ಠಾಕೂರ್, ದಯಾಲನ್ ಹೇಮಲತಾ, ಆಶಾ ಶೋಭಾನಾ, ರಾಧಾ ಯಾದವ್, ಶ್ರೇಯಾಂಕಾ ಪಾಟೀಲ್, ಸಜನಾ ಸಜೀವನ್.
ಪಾಕಿಸ್ತಾನ: ನಿದಾ ದಾರ್ (ನಾಯಕಿ), ಇರಾಮ್ ಜಾವೇದ್, ಸಾದಿಯಾ ಇಕ್ಬಾಲ್, ಅಲಿಯಾ ರಿಯಾಜ್, ಡಯಾನಾ ಬೇಗ್, ಫಾತಿಮಾ ಸನಾ, ಗುಲ್ ಫಿರೋಜಾ, ಮುನೀಬಾ ಅಲಿ, ಸಿದ್ರಾ ಅಮೀನ್, ನಜಿಹಾ ಅಲ್ವಿ, ಸೈಯದಾ ಅರೂಬ್ ಶಾ, ನಶ್ರಾ ಸುಂಧು, ತಸ್ಮಿಯಾ ರುಬಾಬ್, ಒಮೈಮಾ ಸೊಹೈಲ್, ತುಬಾ ಹಸನ್