Site icon Vistara News

INDW vs SAW: ಶುಭಾರಂಭದ ನಿರೀಕ್ಷೆಯಲ್ಲಿ ಹರ್ಮನ್​ಪ್ರೀತ್​ ಬಳಗ; ಇಂದು ಮೊದಲ ಏಕದಿನ

INDW vs SAW

INDW vs SAW: Harmanpreet's team looking for a good start; Today is the first ODI

ಬೆಂಗಳೂರು: ಆತಿಥೇಯ ಭಾರತ ಮತ್ತು ಪ್ರವಾಸಿ ದಕ್ಷಿಣ ಆಫ್ರಿಕಾ(INDW vs SAW) ಮಹಿಳಾ ಕ್ರಿಕೆಟ್​​ ಸರಣಿಗೆ ಇಂದು(ಭಾನುವಾರ) ಚಾಲನೆ ಸಿಗಲಿದೆ. ಏಕದಿನ ಪಂದ್ಯ ಆಡುವ ಮೂಲಕ ಸರಣಿ ಆರಂಭವಾಗಲಿದೆ. ಮೊದಲ ಏಕದಿನ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಪಂದ್ಯ ಮಧ್ಯಾಹ್ನ 1.30ಕ್ಕೆ ಆರಂಭಗೊಳ್ಳಲಿದೆ. ಪಂದ್ಯಕ್ಕೆ ಮಳೆ ಭೀತಿ ಕೂಡ ಎದುರಾಗಿದೆ.

ಹರ್ಮನ್‌ಪ್ರೀತ್‌ ಕೌರ್‌ ನೇತೃತ್ವದ ಭಾರತ ತಂಡ ವರ್ಷಾರಂಭದಲ್ಲಿ ಆಸ್ಟ್ರೇಲಿಯಾ ಎದುರಿನ ಏಕದಿನ ಹಾಗೂ ಟಿ20 ಸರಣಿಯಲ್ಲಿ ಕಳಪೆ ಪ್ರದರ್ಶನ ತೋರುವ ಮೂಲಕ ಸೋಲು ಕಂಡಿತ್ತು. ಇದೇ ವರ್ಷ ಟಿ20 ವಿಶ್ವಕಪ್​ ಟೂರ್ನಿಯೂ ಇರುವ ಕಾರಣ ಭಾರತ ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಬೇಕಿದೆ. ಜತೆಗೆ ಯುವ ಆಟಗಾರ್ತಿಯರು ಸಿಕ್ಕ ಅವಕಾಶವನ್ನು ಸರಿಯಾಗಿ ಸದುಪಯೋಗಪಡಿಸಿಕೊಳ್ಳಬೇಕಿದೆ.

ಉಪನಾಯಕಿ ಸ್ಮೃತಿ ಮಂಧನಾ-ಶಫಾಲಿ ವರ್ಮ ಜೋಡಿ ಕಳೆದ ಕೆಲ ವರ್ಷಗಳಿಂದ ನಿರೀಕ್ಷಿತ ಆರಂಭ ಒದಗಿಸುತ್ತಿಲ್ಲ. ದೇಶೀಯ ಕ್ರಿಕೆಟ್​ ಟೂರ್ನಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್​ ಪ್ರದರ್ಶನ ತೋರುತ್ತಿದ್ದ ಅಗ್ರ ಕ್ರಮಾಂಕದ ಬ್ಯಾಟರ್ ಪ್ರಿಯಾ ಪೂನಿಯಾ ಏಕದಿನ ಮತ್ತು ಟೆಸ್ಟ್‌ ತಂಡಕ್ಕೆ ಮರಳಿದ್ದಾರೆ. ಇವರಿಗೆ ಇಂದಿನ ಪಂದ್ಯದಲ್ಲಿ ಸ್ಥಾನ ಸಿಗುವುದು ಅನುಮಾನ. ಶಫಾಲಿ ಬ್ಯಾಟಿಂಗ್​ ವೈಫಲ್ಯ ಕಂಡರೆ ಮುಂದಿನ ಪಂದ್ಯದಲ್ಲಿ ಇವರು ಬೆಂಚ್​ ಕಾಯಬೇಕಾದೀತು. ಆಗ ಇವರ ಸ್ಥಾನದಲ್ಲಿ ಪ್ರಿಯಾ ಆಡಬಹುದು.

ಗಾಯದಿಂದ ವಿಶ್ರಾಂತಿ ಪಡೆದಿದ್ದ ಅನುಭವಿ ಆಟಗಾರ್ತಿ ಜೆಮಿಮಾ ರಾಡ್ರಿಗಸ್ ಈ ಸರಣಿ ಮೂಲಕ ಮತ್ತೆ ತಂಡಕ್ಕೆ ಕಮ್​ಬ್ಯಾಕ್​ ಮಾಡಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಇವರು ತಂಡಕ್ಕೆ ಆಸರೆಯಾಗಬಲ್ಲರು. ನಾಯಕಿ ಹರ್ಮನ್​ಪ್ರೀತ್​ ತಮ್ಮ ಬ್ಯಾಟಿಂಗ್​ ವೈಫಲ್ಯದಿಂದ ಹೊರಬರಬೇಕಿದೆ. ಇತ್ತೀಚೆಗೆ ಆಡಿದ ಎಲ್ಲ ಸರಣಿಯಲ್ಲೂ ಅವರು ರನ್​ ಬರ ಎದುರಿಸಿದ್ದರು. ಕರ್ನಾಟಕದ ಶ್ರೇಯಾಂಕಾ ಪಾಟೀಲ್‌ ಮೇಲೆ ಭಾರೀ ಭರವಸೆ ಇಡಲಾಗಿದೆ. ಅವರಿಗೆ ಇದು ತವರಿನ ಮೈದಾನವೂ ಹೌದು.

ಇದನ್ನೂ ಓದಿ INDW vs SAW: ಏಕದಿನ ಸರಣಿಗೆ ಅಭ್ಯಾಸ ಆರಂಭಿಸಿದ ಭಾರತ ಮಹಿಳಾ ತಂಡ; ಕನ್ನಡದಲ್ಲೇ ತಂಡದ ಸಿದ್ಧತೆ ವಿವರಿಸಿದ ಶ್ರೇಯಾಂಕಾ

ಕೆಲ ದಿನಗಳ ಹಿಂದೆ ಪಂದ್ಯ ಸಿದ್ಧತೆ ಬಗ್ಗೆ ಕನ್ನಡದಲ್ಲೇ ಮಾತನಾಡಿದ್ದ ಶ್ರೇಯಾಂಕ, ‘ಎಲ್ಲರಿಗೂ ನಮಸ್ಕಾರ, ನಾವು ಬೆಂಗಳೂರಿನಲ್ಲಿದ್ದೇವೆ. ಇಲ್ಲಿನ ವಾತಾವರಣ ತುಂಬಾ ಹಿತ ನೀಡಿದೆ. ಮೊದಲ ಅಭ್ಯಾಸ ಅವಧಿಯನ್ನು ಅತ್ಯಂತ ಯಶಸ್ವಿಯಾಗಿ ಮುಗಿಸಿದ್ದೇವೆ. ಎಲ್ಲರು ತುಂಬಾ ಎನರ್ಜಿಯಿಂದ ಅಭ್ಯಾಸ ನಡೆಸಿದೆವು. ಬಲಿಷ್ಠ ದಕ್ಷಿಣ ಆಫ್ರಿಕಾ ವಿರುದ್ಧ ಆಡಲು ಕಾತರಗೊಂಡಿದ್ದೇವೆ. ಇಲ್ಲಿ ನಡೆದ ಡಬ್ಲ್ಯುಪಿಎಲ್​ ಪಂದ್ಯಾವಳಿಯ ವೇಳೆ ಪ್ರೇಕ್ಷಕರು ದೊಡ್ಡ ಸಂಖ್ಯೆಯಲ್ಲಿ ಬಂದು ಸ್ಟೇಡಿಯಂ ತುಂಬಿ ಹೋಗಿತ್ತು. ಇದೀಗ ಏಕದಿನ ಸರಣಿಗೂ ಅದೇ ರೀತಿ ಸ್ಟೇಡಿಯಂಗೆ ಬಂದು ಟೀಮ್​ ಇಂಡಿಯಾಕ್ಕೆ ಸಪೋರ್ಟ್​ ಮಾಡಿ’ ಎಂದು ಕೇಳಿಕೊಂಡಿದ್ದರು.

ದಕ್ಷಿಣ ಆಫ್ರಿಕಾ ತಂಡದ ನಾಯಕಿ ಲಾರಾ ವೋಲ್ವಾರ್ಟ್‌ ಅಮೋಘ ಫಾರ್ಮ್ ನಲ್ಲಿದ್ದಾರೆ. ಕಳೆದ 5 ಇನ್ನಿಂಗ್ಸ್‌ಗಳಲ್ಲಿ ಮೂರು ಶತಕ ಬಾರಿಸಿದ ಸಾಧನೆ ಮಾಡಿದ್ದರು. ಹೀಗಾಗಿ ಇವರನ್ನು ಹೆಚ್ಚು ಹೊತ್ತು ಕ್ರೀಸ್​ನಲ್ಲಿ ಇರದಂತೆ ಭಾರತೀಯ ಬೌಲರ್​ಗಳು ನೋಡಿಕೊಳ್ಳಬೇಕು. ಮರಿಜಾನ್‌ ಕಾಪ್‌, ಅಯಬೊಂಗಾ ಖಾಕಾ, ನಾಡಿನ್‌ ಡಿ ಕ್ಲರ್ಕ್‌ ಕೂಡ ಉತ್ತಮ ಫಾರ್ಮ್​ನಲ್ಲಿದ್ದಾರೆ. ಈ ಬಾರಿಯ ಡಬ್ಲ್ಯುಪಿಎಲ್​ ಟೂರ್ನಿಯಲ್ಲೂ ಇವರೆಲ್ಲ ಶ್ರೇಷ್ಠ ಪ್ರದರ್ಶನ ತೋರಿದ್ದರು. ಬೆಂಗಳೂರಿನಲ್ಲಿ ಆಡಿದ ಅನುಭವ ಕೂಡ ಇವರಿಗಿದೆ. ಹೀಗಾಗಿ ಇವರಿಗೆ ಇಲ್ಲಿನ ಪಿಚ್​ಗೆ ಹೊಂದಿಕೊಳ್ಳಲು ಅಷ್ಟು ಕಷ್ಟವಾಗದು. ಒಟ್ಟಾರೆ ಪಂದ್ಯವನ್ನು ಜಿದ್ದಾಜಿದ್ದಿನಿಂದ ನಿರೀಕ್ಷಿಸಬಹುದು.

Exit mobile version