ಮುಂಬಯಿ : ಭಾರತ ತಂಡದ ವೇಗದ ಬೌಲರ್ ಜಸ್‌ಪ್ರಿತ್ ಬುಮ್ರಾ ಅವರು ಬೆನ್ನಿನ ಒತ್ತಡ ಗಾಯದ ಸಮಸ್ಯೆಗೆ ಒಳಗಾಗಿದ್ದು, ಮುಂಬರುವ ಟಿ೨೦ ವಿಶ್ವ ಕಪ್‌ನಲ್ಲಿ ಪಾಲ್ಗೊಳ್ಳುವುದು ಸಾಧ್ಯವಿಲ್ಲ ಎಂಬುದಾಗಿ ವರದಿಯಾಗುತ್ತಿವೆ. ಏತನ್ಮಧ್ಯೆ, ಬಿಸಿಸಿಐ ಮೂಲವೊಂದರ ಪ್ರಕಾರ ಬುಮ್ರಾ ಅವರ ಗಾಯ ಗಂಭೀರವಾಗಿಲ್ಲ. ಹೀಗಾಗಿ ಟಿ೨೦ ವಿಶ್ವ ಕಪ್‌ಗಾಗಿ ಆಸ್ಟ್ರೇಲಿಯಾಗೆ ತೆರಳುವ ತಂಡದ ಜತೆ ಪ್ರಯಾಣಿಸಲಿದ್ದಾರೆ. ಒಂದು ವೇಳೆ ಅವರು ಸಮಸ್ಯೆಯಿಂದ ಹೊರ ಬಂದರೆ ಆಡಿಸುವ ಗುರಿ ಹೊಂದಲಾಗಿದೆ.
ಬುಮ್ರಾ ಅವರ ಬೆನ್ನು ನೋವಿಗೆ ೪ರಿಂದ ೬ ತಿಂಗಳು ವಿಶ್ರಾಂತಿ ಅಗತ್ಯವಿದೆ ಎಂಬುದಾಗಿ ವರದಿಗಳಾಗಿದ್ದವು. ಆದರೆ, ಬಿಸಿಸಿಐ ಈ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಹೀಗಾಗಿ ಅವರ ಗಾಯದ ಸಮಸ್ಯೆ ಹಾಗೂ ಸುಧಾರಣೆ ಬಗ್ಗೆ ಯಾರಿಗೂ ಖಚಿತ ಮಾಹಿತಿ ಇಲ್ಲ. ಆದರೆ, ಶುಕ್ರವಾರ ಸಂಜೆಯ ವೇಳೆ ಬಂದ ಮಾಹಿತಿ ಪ್ರಕಾರ ಅವರನ್ನು ಟಿ೨೦ ವಿಶ್ವ ಕಪ್‌ನಲ್ಲಿ ಆಡಿಸುವ ಚಿಂತನೆಯನ್ನೂ ಬಿಸಿಸಿಐ ಹೊಂದಿದೆ ಎನ್ನಲಾಗಿದೆ.
ಬುಮ್ರಾ ಅವರನ್ನು ಆಸ್ಟ್ರೇಲಿಯಾಗೆ ಹೋಗುವ ತಂಡದ ಜತೆ ಕಳುಹಿಸುವುದು ಬಿಸಿಸಿಐ ಗುರಿ. ತಂಡದ ವೈದ್ಯಕೀಯ ವಿಭಾಗ ಅವರ ಮೇಲೆ ನಿಗಾ ಇಡಲಿದ್ದು, ಅವರು ಆಡಲು ಸಮರ್ಥರು ಎನಿಸಿದರೆ ಆಡುವ ಬಳಗಕ್ಕೆ ಸೇರಿಸುವುದು ಬಿಸಿಸಿಐ ಉದ್ದೇಶವಾಗಿದೆ.
ಶುಕ್ರವಾರ ಬೆಳಗ್ಗೆ ಜಸ್‌ಪ್ರಿತ್ ಬುಮ್ರಾ ಅವರ ಬದಲಿಗೆ ಮೊಹಮ್ಮದ್ ಸಿರಾಜ್ ಅವರಿಗೆ ದಕ್ಷಿಣ ಆಫ್ರಿಕಾ ವಿರುದ್ಧದ ಟಿ೨೦ ಸರಣಿಯಲ್ಲಿ ಅವಕಾಶ ನೀಡಲಾಗಿತ್ತು.
ಇದನ್ನೂ ಓದಿ | Team India | ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್‌ಗೆ ಹೊಸ ಚಿಂತೆ, ಜಸ್‌ಪ್ರಿತ್ ಬುಮ್ರಾ ಕಳಪೆ ಫಾರ್ಮ್