ನಾಗ್ಪುರ: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ (INDvsAUS) ಮೊದಲ ಪಂದ್ಯದಲ್ಲಿ ಭಾರತ ತಂಡದ ಸ್ಪಿನ್ ಬೌಲರ್ ರವೀಂದ್ರ ಜಡೇಜಾ ಐದು ವಿಕೆಟ್ಗಳ ಸಾಧನೆ ಮಾಡಿದ್ದಾರೆ. ಅದರಲ್ಲೂ ಅವರು ಸ್ಟೀವ್ ಸ್ಮಿತ್, ಮ್ಯಾಟ್ ರೆನ್ಶಾ, ಪೀಟರ್ ಹ್ಯಾಂಡ್ಸ್ಕಾಂಬ್, ಮರ್ನಸ್ ಲಾಬುಶೇನ್ ಸೇರಿದಂತೆ ಪ್ರಮುಖ ವಿಕೆಟ್ಗಳನ್ನು ಕಬಳಿಸಿದ್ದಾರೆ. ಸುಮಾರು ಐದು ತಿಂಗಳ ಬಳಿಕ ಭಾರತ ತಂಡಕ್ಕೆ ಮರಳಿರುವ ಅವರು ಮೊದಲ ಪಂದ್ಯದಲ್ಲೇ ಐದು ವಿಕೆಟ್ಗಳ ಸಾಧನೆ ಮಾಡಿ ಮಿಂಚಿದ್ದಾರೆ. ಅವರ ಸಾಧನೆಗೆ ಭಾರತದ ಕ್ರಿಕೆಟ್ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರವೀಂದ್ರ ಜಡೇಜಾ ಅವರು ಐದು ತಿಂಗಳ ಹಿಂದೆ ಗಾಯದ ಸಮಸ್ಯೆಗೆ ಒಳಗಾಗಿ ಪ್ರಮುಖ ಟೂರ್ನಿಗಳಿಂದ ತಪ್ಪಿಸಿಕೊಂಡಿದ್ದರು. ಅಲ್ಲದೆ, ಏಷ್ಯಾ ಕಪ್ಗಾಗಿ ಯುಎಇಗೆ ತೆರಳಿದ್ದವರು ಅಲ್ಲಿಂದಲೇ ವಾಪಸ್ ಬಂದು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಅಲ್ಲಿಂದ ಬೆಂಗಳೂರಿನ ಎನ್ಸಿಎನಲ್ಲಿ ಪುನಶ್ಚೇತನಕ್ಕೆ ಒಳಗಾಗಿ ಅಭ್ಯಾಸ ಆರಂಭಿಸಿ, ರಣಜಿ ಟ್ರೋಫಿಯಲ್ಲಿ ಆಡಿ ಬಳಿಕ ಭಾರತ ತಂಡಕ್ಕೆ ಪ್ರವೇಶ ಪಡೆದುಕೊಂಡಿದ್ದರು. ಅಲ್ಲಿಂದ ಮೊದಲ ಪಂದ್ಯದಲ್ಲಿಯೇ ಅವರು ಐದು ವಿಕೆಟ್ಗಳ ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ : Ravindra jadeja : ಮತ್ತೆ ಭಾರತ ತಂಡದ ಜೆರ್ಸಿ ಧರಿಸಲು ಹೆಮ್ಮೆ ಎನಿಸುತ್ತದೆ ಎಂದ ರವೀಂದ್ರ ಜಡೇಜಾ
ರವೀಂದ್ರ ಜಡೇಜಾ ಅವರು ಭಾರತ ತಂಡದ ಪ್ರಮುಖ ಆಲ್ರೌಂಡರ್. ಅವರು ತಂಡದಲ್ಲಿ ಇರುವುದರಿಂದ ಭಾರತ ತಂಡದ ಎಲ್ಲ ವಿಭಾಗಗಳೂ ಬಲಿಷ್ಠವಾಗುತ್ತವೆ. ಅವರ ಅನುಪಸ್ಥಿತಿ ಟಿ20 ವಿಶ್ವ ಕಪ್ನಲ್ಲಿ ಪ್ರತಿಫಲನಗೊಂಡಿತು. ಭಾರತ ತಂಡದ ಮಧ್ಯಮ ಕ್ರಮಾಂಕ ವೈಫಲ್ಯ ಕಂಡಿತ್ತು. ಇದೀಗ ಜಡೇಜಾ ತಂಡಕ್ಕೆ ಮರಳಿದ್ದಾರೆ. ಬಂದವರೇ ತಮ್ಮ ಛಾಪು ಮೂಡಿಸಿದ್ದಾರೆ.