Site icon Vistara News

Team India | ವಿಶ್ವ ಕಪ್‌ಗೆ ಸಿದ್ಧತೆ ನಡೆಸುತ್ತಿದ್ದ ಭಾರತ ತಂಡಕ್ಕೆ ಆಘಾತ, ಪ್ರಮುಖ ಆಲ್‌ರೌಂಡರ್‌ ಅಲಭ್ಯ

team india

ಮುಂಬಯಿ : ಆಸ್ಟ್ತೇಲಿಯಾದಲ್ಲಿ ಮುಂದಿನ ಅಕ್ಟೋಬರ್ ಹಾಗೂ ನವೆಂಬರ್‌ನಲ್ಲಿ ನಡೆಯಲಿರುವ ಟಿ೨೦ ವಿಶ್ವ ಕಪ್‌ಗೆ ತಂಡದ ಸಂಯೋಜನೆ ರೂಪಿಸುತ್ತಿದ್ದ ಟೀಮ್‌ ಇಂಡಿಯಾ (Team India) ಮ್ಯಾನೇಜ್ಮೆಂಟ್‌ಗೆ ಹೊಸ ಸವಾಲು ಎದುರಾಗಿದೆ. ತಂಡದ ಕಾಯಂ ಸದಸ್ಯ ಹಾಗೂ ಬೌಲಿಂಗ್ ಆಲ್‌ರೌಂಡರ್‌ ರವೀಂದ್ರ ಜಡೇಜಾ ಅವರಿಗೆ ಮಂಡಿ ಶಸ್ತ್ರ ಚಿಕಿತ್ಸೆ ಅನಿವಾರ್ಯವಾಗಿದ್ದು, ವಿಶ್ವ ಕಪ್‌ಗೆ ಅಲಭ್ಯರಾಗಲಿದ್ದಾರೆ.

ಏಷ್ಯಾ ಕಪ್‌ನಲ್ಲಿ ಮೊದಲೆರಡು ಪಂದ್ಯಗಳಲ್ಲಿ ಆಡಿದ್ದ ಹಿರಿಯ ಆಲ್‌ರೌಂಡರ್‌ ಜಡೇಜಾ ಅವರು ಏಕಾಏಕಿ ಗಾಯದ ಸಮಸ್ಯೆಗೆ ಒಳಗಾಗಿದ್ದರು. ಹೀಗಾಗಿ ಪಾಕಿಸ್ತಾನ ವಿರುದ್ಧ ಭಾನುವಾರ (ಸೆಪ್ಟೆಂಬರ್‌ ೪ರಂದು) ನಡೆಯುವ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ಇದೀಗ ಅವರಿಗೆ ಶಸ್ತ್ರ ಚಿಕಿತ್ಸೆ ಅನಿವಾರ್ಯ ಎಂಬ ವಾರ್ತೆ ಬಂದಿದೆ.

೩೩ ವರ್ಷದ ಜಡೇಜಾ ಅವರ ಲಭ್ಯತೆಯಿಂದಾಗಿ ಪಾಕಿಸ್ತಾನ ಹಾಗೂ ಹಾಂಕಾಂಗ್‌ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಲು ರೋಹಿತ್‌ ಶರ್ಮ ಬಳಗಕ್ಕೆ ಅನುಕೂಲವಾಗಿತ್ತು. ಆದರೆ ಅವರು ಎದುರಿಸುತ್ತಿರುವ ಎಸಿಎಲ್‌ ಸಮಸ್ಯೆಗೆ ಶಸ್ತ್ರ ಚಿಕಿತ್ಸೆ ಅಗತ್ಯವಾಗಿರುವ ಕಾರಣ ಸುಧಾರಿಸಿಕೊಳ್ಳುವುದಕ್ಕೆ ಆರು ತಿಂಗಳು ಬೇಕಾಗುತ್ತದೆ. ಹೀಗಾಗಿ ಅವರು ವಿಶ್ವ ಕಪ್‌ನಲ್ಲಿ ಆಡುವುದಿಲ್ಲ ಎಂದು ಹೇಳಲಾಗಿದೆ.

ಜಡೇಜಾ ಅವರು ಹಲವು ದಿನಗಳಿಂದ ಬಲಗಾಲಿನ ಮಂಡಿಯ ಸಮಸ್ಯೆ ಎದುರಿಸುತ್ತಿದ್ದಾರೆ. ಎಡಗೈ ಬೌಲರ್‌ ಆಗಿರುವ ಅವರು ಬಲಗಾಲನ್ನು ಮೊದಲು ಊರುವಾಗ ಸಮಸ್ಯೆ ಎದುರಿಸುತ್ತಿದ್ದರು. ಹೀಗಾಗಿ ಸಮಸ್ಯೆಯ ಸುಧಾರಣೆಗಾಗಿ ಶಸ್ತ್ರ ಚಿಕಿತ್ಸೆಯ ಮೊರೆ ಹೋಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ | Team India | ನಾಲ್ಕನೇ ಕ್ರಮಾಂಕಲ್ಲಿ ಬ್ಯಾಟ್‌ ಮಾಡುವ ನಿರೀಕ್ಷೆಯಿತ್ತು ಎಂದ ರವೀಂದ್ರ ಜಡೇಜಾ

Exit mobile version