ಮುಂಬಯಿ: ಬಲಗೈ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿರುವ ಟೀಮ್ ಇಂಡಿಯಾದ (Team india) ನಾಯಕ ರೋಹಿತ್ ಶರ್ಮ ಸರಣಿಯ ಕೊನೇ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಅವರು ಭಾರತಕ್ಕೆ ಮರಳಲಿದ್ದು ತಜ್ಞ ವೈದ್ಯರಿಂದ ಪರೀಕ್ಷೆಗೆ ಒಳಪಡಲಿದ್ದಾರೆ.
ರೋಹಿತ್ ಶರ್ಮ ಅವರು ಬಾಂಗ್ಲಾದೇಶ ವಿರುದ್ಧದ ಎರಡನೇ ಪಂದ್ಯದಲ್ಲಿ ಪೀಲ್ಡಿಂಗ್ ಮಾಡುವ ವೇಳೆ ಗಾಯಗೊಂಡಿದ್ದರು. ಹೀಗಾಗಿ ಅವರು ಫೀಲ್ಡ್ ತೊರೆದು ವೈದ್ಯಕೀಯ ಪರೀಕ್ಷೆಗೆ ಒಳಪಟ್ಟಿದ್ದರು. ಬಳಿಕ ಅವರು ಬ್ಯಾಂಡೇಜ್ ಸಮೇತ ಪೆವಿಲಿಯನ್‌ನಲ್ಲಿ ಕಾಣಿಸಿಕೊಂಡಿದ್ದರು. ಭಾರತ ತಂಡ ಬ್ಯಾಟಿಂಗ್ ಆರಂಭಿಸಿದಾಗ ಅವರು ಆರಂಭದಲ್ಲಿ ಕ್ರೀಸ್‌ಗೆ ಇಳಿದಿರಲಿಲ್ಲ. ಬಲದಾಗಿ ೯ನೆಯವರಾಗಿ ಆಡಲು ಇಳಿದು ನೋವಿನ ನಡುವೆ ೨೮ ಎಸೆತಗಳಲ್ಲಿ ಸ್ಫೋಟಕ ೫೧ ರನ್ ಬಾರಿಸಿದ್ದರು. ಅದರೂ ತಂಡ ೫ ರನ್‌ಗಳಿಂದ ಪರಾಜಯಗೊಂಡು ಸರಣಿಯನ್ನು ಕಳೆದುಕೊಂಡಿತ್ತು.
ಪಂದ್ಯ ಮುಗಿದ ಬಳಿಕ ಮಾತನಾಡಿದ ಕೋಚ್ ರಾಹುಲ್ ದ್ರಾವಿಡ್ ಅವರು “ರೋಹಿತ್ ಶರ್ಮ ಅವರು ಮುಂದಿನ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ಅವರು ಮುಂಬಯಿಗೆ ತೆರಳಿ ಮುಂದಿನ ಪರೀಕ್ಷೆಗೆ ಒಳಪಡಲಿದ್ದಾರೆ,” ಎಂದು ಹೇಳಿದ್ದಾರೆ.
ಬಾಂಗ್ಲಾದೇಶ ವಿರುದ್ಧದ ಮೊದಲ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಮಾದರಿಗೆ ಪದಾರ್ಪಣೆ ಮಾಡಿದ್ದ ಕುಲ್ದೀಪ್ ಸೇನ್ ಕೂಡ ಗಾಯದ ಸಮಸ್ಯೆ ಕಾರಣಕ್ಕೆ ಎರಡನೇ ಪಂದ್ಯದಲ್ಲಿ ಆಡಿರಲಿಲ್ಲ. ಅವರು ಮೂರನೇ ಪಂದ್ಯಕ್ಕೆ ಇರುವುದಿಲ್ಲ ಎಂಬುದಾಗಿ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ. ಅಂತೆಯೇ ಪಂದ್ಯದ ನಡುವೆ ಗಾಯಗೊಂಡ ಆಲ್‌ರೌಂಡರ್ ದೀಪಕ್ ಚಾಹರ್ ಅವರು ಮೂರನೇ ಪಂದ್ಯದಲ್ಲಿ ಆಡುವುದಿಲ್ಲ ಎಂಬುದಾಗಿ ದ್ರಾವಿಡ್ ತಿಳಿಸಿದ್ದಾರೆ.
ಟೀಮ್ ಇಂಡಿಯಾ ಮೊದಲ ಪಂದ್ಯದಲ್ಲಿ ರೋಚಕ ೧ ವಿಕೆಟ್ ಸೋಲಿಗೆ ಒಳಗಾಗಿದ್ದರೆ, ಎರಡನೇ ಪಂದ್ಯದಲ್ಲಿ ವಿರೋಚಿತ ೫ ರನ್ ಸೋಲು ಕಂಡಿತ್ತು. ಹೀಗಾಗಿ ಭಾರತ ತಂಡ ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಕಳೆದುಕೊಂಡಿದೆ.
ಇದನ್ನೂ ಓದಿ | Rohit Sharma | ಅತಿ ವೇಗದಲ್ಲಿ 500 ಸಿಕ್ಸರ್‌ಗಳ ದಾಖಲೆ ಬರೆದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ