Site icon Vistara News

Asia Cup: ನಾಯಕತ್ವಕ್ಕೆ ಗುಡ್​ ಬೈ ಹೇಳಿ, ಏಷ್ಯಾ ಕಪ್​ನಿಂದ ಹೊರಗುಳಿದ ಬಾಂಗ್ಲಾ ಆಟಗಾರ

Bangladeshi cricketer

ಢಾಕಾ: ಅಫಘಾನಿಸ್ತಾನ ವಿರುದ್ಧದ ಏಕದಿನ ಸರಣಿಯ ವೇಳೆ ದಿಢೀರ್​ ಕ್ರಿಕೆಟ್​ಗೆ ವಿದಾಯ ಹೇಳಿ ಬಳಿಕ ಪ್ರಧಾನಿ ಶೇಖ್​ ಹಸೀನಾ(Prime Minister Sheikh Hasina) ಅವರ ಮನವೊಲಿಕೆಯಿಂದ ನಿವೃತ್ತಿ ವಾಪಸ್​ ಪಡೆದಿದ್ದ ತಮೀಮ್ ಇಕ್ಬಾಲ್(Tamim Iqbal), ಶುಕ್ರವಾರ ತಮ್ಮ ನಾಯಕತ್ವ ಸ್ಥಾನದಿಂದ ಕೆಳಗಿಳಿಯುವ ಜತೆಗೆ ಏಷ್ಯಾಕಪ್(Asia Cup)​ ಟೂರ್ನಿಯಿಂದ ಹೊರಗುಳಿಯುವುದಾಗಿ ಪ್ರಕಟಿಸಿದ್ದಾರೆ.

ಬೆನ್ನು ನೋವಿನ ಸಮಸ್ಯೆಯಿಂದಾಗಿ ಪಾಕ್​ ಮತ್ತು ಶ್ರೀಲಂಕಾದಲ್ಲಿ ನಡೆಯುವ ಹೈಬ್ರಿಡ್​ ಮಾದರಿಯ ಏಷ್ಯಾ ಕಪ್​ನಿಂದ ಹೊರಗುಳಿಯುವುದಾಗಿ ತಮೀಮ್ ಇಕ್ಬಾಲ್ ತಿಳಿಸಿದ್ದಾರೆ. ಮುಂದಿನ ಕಿವೀಸ್​ ವಿರುದ್ಧದ ಸರಣಿಯಲ್ಲಿ ತಂಡಕ್ಕೆ ವಾಪಸ್​ ಆಗುವ ಮೂಲಕ ವಿಶ್ವಕಪ್​ನಲ್ಲಿ ಉತ್ತಮ ಪ್ರದರ್ಶನ ತೋರುವ ವಿಶ್ವಾಸವಿದೆ ಎಂದಿದ್ದಾರೆ. ಸ್ಟಾರ್​ ಆಟಗಾರ ಅಲಭ್ಯತೆ ಬಾಂಗ್ಲಾ ತಂಡಕ್ಕೆ ದೊಡ್ಡ ಹೊಡೆತ ನೀಡಿದೆ.

ಕಳೆದ ತಿಂಗಳ ಜುಲೈ 6 ರಂದು ತಮೀಮ್​ ಅವರು ದಿಢೀರ್​ ಆಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಆದರೆ ಪ್ರಧಾನಿ ಶೇಖ್ ಹಸೀನಾ ಅವರ ಮನವಿಯ ಮೇರೆಗೆ ಮರು ದಿನವೇ ತಮ್ಮ ಈ ನಿವೃತ್ತಿ ನಿರ್ಧಾರವನ್ನು ಹಿಂಪಡೆದು ಏಷ್ಯಾಕಪ್​ನಲ್ಲಿ ಪಾಲ್ಗೊಳ್ಳುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ ಬೆನ್ನು ನೋವಿನ ಗಾಯಕ್ಕೆ ತುತ್ತಾದ ಕಾರಣ ಅವರು ಈ ಟೂರ್ನಿಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ. ಅವರ ಗೈರನ್ನು ಬಾಂಗ್ಲಾ ಕ್ರಿಕೆಟ್​ ಮಂಡಳಿಯೂ ಖಚಿತಪಡಿಸಿದೆ. ಸದ್ಯ ತಮೀಮ್ ತಮ್ಮ ಗಾಯದ ಬಗ್ಗೆ ಲಂಡನ್ ವೈದ್ಯರಿಂದ ಸಲಹೆ ಪಡೆಯಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ Tamim Iqbal: ಪ್ರಧಾನಿ ಶೇಖ್ ಹಸೀನಾ ಮನವೊಲಿಕೆಗೆ ಮಣಿದು ನಿವೃತ್ತಿ ನಿರ್ಧಾರದಿಂದ ಯೂ-ಟರ್ನ್ ಹೊಡೆದ ತಮೀಮ್ ಇಕ್ಬಾಲ್

2007ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಇಕ್ಬಾಲ್​ 2007ರ ವಿಶ್ವಕಪ್ ನಲ್ಲಿ ಭಾರತದ ವಿರುದ್ಧ ಅರ್ಧಶತಕ ಸಿಡಿಸಿ ತಂಡದ ಐತಿಹಾಸಿಕ ಜಯಕ್ಕೆ ಕಾರಣರಾಗಿದ್ದರು. ಬಾಂಗ್ಲಾ ವಿರುದ್ಧ ಸೋತ ಭಾರತ ಕೂಟದಿಂದ ಹೊರಬಿದ್ದಿತ್ತು. ಒಟ್ಟಾರೆ ಅವರು ಬಾಂಗ್ಲಾ ಪರ 69 ಟೆಸ್ಟ್ ಪಂದ್ಯಗಳಲ್ಲಿ 5082 ರನ್, 238 ಏಕದಿನ ಪಂದ್ಯಗಳಲ್ಲಿ 8224 ರನ್ ಮತ್ತು 78 ಟಿ20 ಪಂದ್ಯಗಳಲ್ಲಿ 1758 ರನ್ ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಒಟ್ಟು 25 ಶತಕಗಳನ್ನು ಬಾರಿಸಿದ್ದಾರೆ. ಟೆಸ್ಟ್​ನಲ್ಲಿ 10, ಏಕದಿನದಲ್ಲಿ 14, ಟಿ20ಯಲ್ಲಿ 1 ಶತಕ ಬಾರಿಸಿದ್ದಾರೆ.

Exit mobile version