Site icon Vistara News

Border Gavaskar Trophy 2023 | ಪ್ರವಾಸಿ ಆಸ್ಟ್ರೇಲಿಯಾ ತಂಡಕ್ಕೆ ಗಾಯದ ಸಮಸ್ಯೆ; ಸ್ಟಾರ್ಕ್​ ಇಲ್ಲ, ಗ್ರೀನ್​ ಅಲಭ್ಯ

Cameron Green

ನಾಗ್ಪುರ : ಬಾರ್ಡರ್​ ಗವಾಸ್ಕರ್​ ಟ್ರೋಫಿ ಟೆಸ್ಟ್​ ಸರಣಿಯಲ್ಲಿ (Border Gavaskar Trophy 2023) ಪಾಲ್ಗೊಳ್ಳಲು ಬರುತ್ತಿರುವ ಆಸ್ಟ್ರೇಲಿಯಾ ತಂಡಕ್ಕೆ ಗಾಯದ ಸಮಸ್ಯೆ ಎದುರಾಗಿದೆ. ಕಳೆದ ಬಾರಿ ತವರಿನಲ್ಲಿಯೇ ಭಾರತ ವಿರುದ್ಧ ಸರಣಿ ಸೋತು ಮುಖಭಂಗ ಅನುಭವಿಸಿದ್ದ ಆಸೀಸ್​ ಪಡೆ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಭಾರತಕ್ಕೆ ಕಾಲಿಡುತ್ತಿದ್ದರೂ ಇಬ್ಬರು ಪ್ರಮುಖ ಆಟಗಾರರ ಅನುಪಸ್ಥಿತಿಯಿಂದ ಹಿನ್ನಡೆಗೆ ಒಳಗಾಗಿದೆ. ಆಸ್ಟ್ರೇಲಿಯಾ ತಂಡದ ಮಾರಕ ಬೌಲರ್​ ಮಿಚೆಲ್​ ಸ್ಟಾರ್ಕ್​ ಹಾಗೂ ಸ್ಟಾರ್ ಆಲ್​ರೌಂಡರ್​ ಕ್ಯಾಮೆರೂನ್​ ಗ್ರೀನ್ ಮೊದಲ ಪಂದ್ಯಕ್ಕೆ ಅಲಭ್ಯರಾಗಿರುವ ಆಟಗಾರರು. ಇವರಿಬ್ಬರು ಆ ತಂಡದ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಬಹುದಾಗಿದ್ದ ಆಟಗಾರರು. ಹೀಗಾಗಿ ಭಾರತಕ್ಕೆ ಹಿನ್ನಡೆ ಉಂಟಾಗಿದೆ.

ತಾವು ಮೊದಲ ಪಂದ್ಯದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂಬುದಾಗಿ ವೇಗದ ಬೌಲರ್​ ಮಿಚೆಲ್​ ಸ್ಟಾರ್ಕ್​ ಹೇಳಿದ್ದಾರೆ. ಅವರಿಗೆ ಕೈ ಬೆರಳಿನ ನೋವು ಉಂಟಾಗದೆ. ಫೆಬ್ರವರಿ 9ರಂದು ಮೊದಲ ಹಣಾಹಣಿ ನಡೆಯಲಿದ್ದ ಆ ವೇಳೆಗೆ ಅವರು ಸಂಪೂರ್ಣ ಗುಣಮುಖರಾಗುವುದಿಲ್ಲ. ಹೀಗಾಗಿ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಆಸ್ಟ್ರೇಲಿಯಾ ಪ್ರಮುಖ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್‌ ಗಾಯಗೊಂಡಿದ್ದರು. ಅದರಿಂದಾಗಿ ಆ ಸರಣಿಯಿಂದ ಹೊರಬಿದ್ದಿದ್ದರು. ಸೋಮವಾರ (ಜ.30) ನಡೆದಿದ್ದ ಕ್ರಿಕೆಟ್ ಆಸ್ಟ್ರೇಲಿಯಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತಮ್ಮ ಗಾಯದ ಸಮಸ್ಯೆ ಕುರಿತು ಮಾಹಿತಿ ನೀಡಿದ್ದಾರೆ.

“ಗಾಯದ ಸಮಸ್ಯೆಯಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಇನ್ನೂ ಕೆಲವು ದಿನಗಳು ಬೇಕಾಗಬಹುದು. ಆದ್ದರಿಂದ ನಾನು ಭಾರತ ವಿರುದ್ಧ ನಡೆಯಲಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್‌ ಸರಣಿಯ ಮೊದಲ ಟೆಸ್ಟ್ ಪಂದ್ಯದಿಂದ ದೂರ ಉಳಿಯಲು ನಿರ್ಧರಿಸಿದ್ದೇನೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸವಿದೆ,” ಎಂದು ಮಿಚೆಲ್‌ ಸ್ಟಾರ್ಕ್‌ ಹೇಳಿದ್ದಾರೆ.

ದೆಹಲಿಯಲ್ಲಿ ಆಯೋಜನೆಗೊಂಡಿರುವ ಎರಡನೇ ಟೆಸ್ಟ್​ ಪಂದ್ಯದ ವೇಳೆಗೆ ಸಂಪೂರ್ಣ ಫಿಟ್ ಆಗುವ ಭರವಸೆ ಇದೆ. ದೆಹಲಿಯಲ್ಲಿ ಅಭ್ಯಾಸ ಆರಂಭಿಸಿ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಲು ಎದುರು ನೋಡುತ್ತಿದ್ದೇನೆ ಎಂದು ಸ್ಟಾರ್ಕ್​ ಹೇಳಿದ್ದಾರೆ.

ಗ್ರೀನ್​ ಅಲಭ್ಯ

ಆಸ್ಟ್ರೇಲಿಯಾ ತಂಡದ ಪ್ರಮುಖ ಆಲ್​ರೌಂಡರ್​ ಕ್ಯಾಮೆರೂನ್​ ಗ್ರೀನ್​ ಫಿಟ್ನೆಸ್ ಬಗ್ಗೆಯೂ ಇನ್ನೂ ಮಾಹಿತಿಯಿಲ್ಲ. ಅವರು ಕೂಡ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದರು ಎಂಬ ಮಾಹಿತಿ ಇತ್ತು. ಆದರೆ. ಆಸ್ಟ್ರೇಲಿಯಾ ತಂಡ ಗ್ರೀನ್​ ಲಭ್ಯತೆ ಬಗ್ಗೆ ವಿಶ್ವಾಸ ಇರಿಸಿಕೊಂಡಿದೆ.

ನಾವು ಕ್ಯಾಮೆರಾನ್ ಗ್ರೀನ್ ಅವರ ಲಭ್ಯತೆಯ ನಿರೀಕ್ಷೆ ಹೊಂದಿದ್ದೇವೆ. 6ನೇ ಕ್ರಮಾಂಕದಲ್ಲಿ ಅವರ ಬ್ಯಾಟಿಂಗ್ ತಂಡಕ್ಕೆ ಹೆಚ್ಚು ಮೌಲ್ಯ ತಂದುಕೊಡಲಿದೆ. ಅವರು ವೇಗದ ಬೌಲಿಂಗ್ ಮಾಡುವುದು ತಂಡಕ್ಕೆ ಪ್ಲಸ್‌ ಪಾಯಿಂಟ್‌ ಕೂಡ. ತಂಡದಲ್ಲಿ ಸಾಕಷ್ಟು ಎಡಗೈ ಬ್ಯಾಟ್ಸ್‌ಮನ್‌ಗಳಿದ್ದು, ತಂಡ ಬಲಿಷ್ಠವಾಗಿದೆ,” ಎಂದು ತಂಡದ ಮುಖ್ಯ ಕೋಚ್ ಆಂಡ್ರೆ ಮೆಕ್‌ಡೊನಾಲ್ಡ್‌ ತಿಳಿಸಿದ್ದಾರೆ.

ಇದನ್ನೂ ಓದಿ : INDvsAUS : ಭಾರತದ ಅಭ್ಯಾಸ ಪಂದ್ಯಗಳು ನಮಗೆ ಪ್ರಯೋಜನಕ್ಕೆ ಬರುವುದಿಲ್ಲ ಎಂದ ಸ್ವೀವ್​ ಸ್ಮಿತ್​

Exit mobile version