ರಾಂಚಿ : ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧದ ಟಿ20 (INDvsNZ T20) ಸರಣಿಯ ಮೊದಲ ಪಂದ್ಯಕ್ಕೆ ಮೊದಲು ಭಾರತ ತಂಡಕ್ಕೆ ಆಘಾತ ಎದುರಾಗಿದೆ. ಆರಂಭಿಕ ಬ್ಯಾಟರ್ ಋತುರಾಜ್ ಗಾಯಕ್ವಾಡ್ (Ruturaj Gaikwad) ಗಾಯದ ಸಮಸ್ಯೆಗೆ ಒಳಗಾಗಿದ್ದು ಟೂರ್ನಿಯಿಂದ ಹೊರಕ್ಕೆ ಬಿದಿದ್ದಾರೆ ಎಂಬುದಾಗಿ ಕ್ರಿಕ್ಬಜ್ (Cricbuzz) ವರದಿ ಮಾಡಿದೆ. 25 ವರ್ಷದ ಯುವ ಆಟಗಾರ ಮಣಿಗಟ್ಟಿನ ನೋವಿನ ಸಮಸ್ಯೆಗೆ ಒಳಗಾಗಿದ್ದಾರೆ. ಅವರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ತೆರಳಲಿದ್ದು ಅವರಲ್ಲಿ ಪುನಶ್ಚೇತನಕ್ಕೆ ಒಳಗಾಗಲಿದ್ದಾರೆ.
ಋತುರಾಜ್ ಗಾಯಕ್ವಾಡ್ ಅವರು ಮುಂಬಯಿ ತಂಡದ ಪರ ರಣಜಿ ಟ್ರೋಫಿಯಲ್ಲಿ ಆಡಿದ್ದರು. ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಎರಡು ಇನಿಂಗ್ಸ್ಗಳಲ್ಲಿ ಅವರು 8 ಹಾಗೂ 0 ರನ್ಗಳಿಗೆ ವಿಕೆಟ್ ಒಪ್ಪಿಸಿದ್ದರು. ಈ ವೇಳೆ ಅವರಿಗೆ ಕೈ ನೋವಿನ ಸಮಸ್ಯೆ ಎದುರಾಗಿತ್ತು. ಅದೇ ಸಮಸ್ಯೆಯ ಕಾರಣಕ್ಕೆ ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಯಲ್ಲಿ ಆಡಲು ಸಾಧ್ಯವಾಗುತ್ತಿಲ್ಲ ಎಂಬುದಾಗಿ ಟೀಮ್ ಇಂಡಿಯಾದ ಮೂಲಗಳು ತಿಳಿಸಿವೆ. ಗಾಯದ ವಿಚಾರದಲ್ಲಿ ಋತುರಾಜ್ ಗಾಯಕ್ವಾಡ್ ನತದೃಷ್ಟ ಎನಿಸಿಕೊಂಡಿದ್ದಾರೆ. ಶ್ರೀಲಂಕಾ ವಿರುದ್ಧದ ಸರಣಿಯ ವೇಳೆಯೂ ಅವರಿಗೆ ಕೈ ನೋವಿನ ಸಮಸ್ಯೆ ಕಾಣಿಸಿಕೊಂಡು ತಂಡದಲ್ಲಿ ಆಡುವ ಅವಕಾಶ ಕಳೆದುಕೊಂಡಿದ್ದರು. ಅದೇ ರೀತಿ ಕಳೆದ ವರ್ಷ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಏಕ ದಿನ ಸರಣಿಯನ್ನೂ ಕೊರೊನಾ ಕಾರಣಕ್ಕೆ ಕಳೆದುಕೊಂಡಿದ್ದರು.
ಇದನ್ನೂ ಓದಿ : Vijay Hazare Trophy | ಸೌರಾಷ್ಟ್ರ ತಂಡಕ್ಕೆ ವಿಜಯ್ ಹಜಾರೆ ಟ್ರೋಫಿ; ಋತುರಾಜ್ ಹೋರಾಟ ವ್ಯರ್ಥ
ಋತುರಾಜ್ ಗಾಯಕ್ವಾಡ್ ಪದೇಪದೆ ಗಾಯಗೊಳ್ಳುತ್ತಿರುವುದು ಟೀಮ್ ಇಂಡಿಯಾದ ಮ್ಯಾನೇಜ್ಮೆಂಟ್ಗೆ ತಲೆಬಿಸಿಯ ವಿಚಾರವಾಗಿ ಪರಿಣಮಿಸಿದೆ. ಆದಾಗ್ಯೂ ಅವರು ಸುಧಾರಿಸಿಕೊಂಡು ವಾಪಸ್ ಬರುವ ನಿರೀಕ್ಷೆಯಿದೆ. ಹೀಗಾಗಿ ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಗೆ ಪರ್ಯಾಯ ಆಟಗಾರನನ್ನು ಆಯ್ಕೆ ಮಾಡಿಲ್ಲ.