ಮುಂಬಯಿ: ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನ (WTC 2023) ಫೈನಲ್ ಪಂದ್ಯಕ್ಕೆ ಆಸ್ಟ್ರೇಲಿಯಾ ಹಾಗೂ ಭಾರತ ತಂಡ ತೇರ್ಗಡೆಗೊಂಡಿದೆ. ಜೂನ್ 7ರಂದು ಇಂಗ್ಲೆಂಡ್ನ ಕಿಂಗ್ಸ್ಟನ್ ಓವಲ್ನಲ್ಲಿ ಫೈನಲ್ ಹಣಾಹಣಿ ಆರಂಭವಾಗಲಿದೆ. ಇದು ಎರಡನೇ ಆವೃತ್ತಿಯ ಟೆಸ್ಟ್ ಚಾಂಪಿಯನ್ಷಿಪ್ ಆಗಿದ್ದು, ಈ ಹಿಂದೆ ಮೊದಲ ಆವೃತ್ತಿಯಲ್ಲೂ ಭಾರತ ತಂಡ ಫೈನಲ್ಗೇರಿತ್ತು. ಆದರೆ, ಫೈನಲ್ ಹಣಾಹಣಿಯಲ್ಲಿ ಭಾರತ ತಂಡ ಸೋಲು ಕಂಡಿತ್ತು. ಇದೀಗ ಎರಡನೇ ಬಾರಿ ತಂಡ ಫೈನ್ಲಗೇರಿರುವ ಕಾರಣ ಟ್ರೋಫಿ ಗೆಲ್ಲುವ ಭರವಸೆ ಮೂಡಿದೆ. ಆದರೆ, ಇಂಗ್ಲೆಂಡ್ನ ತಟಸ್ಥ ತಾಣದಲ್ಲಿ ಹೇಗೆ ಭಾರತ ತಂಡ ಗೆಲುವಿನ ಯೋಜನೆ ರೂಪಿಸಿಕೊಳ್ಳಬಹುದು ಎಂಬ ಚರ್ಚೆಗಳು ಆರಂಭಗೊಂಡಿವೆ. ಏತನ್ಮಧ್ಯೆ, ಆ ಸರಣಿಯಲ್ಲಿ ಭಾರತ ತಂಡದಲ್ಲಿ ಯಾರೆಲ್ಲ ಇರಬೇಕು ಎಂಬ ಚರ್ಚೆಯೂ ಶುರುವಾಗಿದೆ.
ಭಾರತ ತಂಡಕ್ಕೆ ಪ್ರಮುಖವಾಗಿ ಇಬ್ಬರ ಅಲಭ್ಯತೆಯ ಕೊರಗು ಕಾಡಲಿದೆ. ವೇಗದ ಬೌಲರ್ ಜಸ್ಪ್ರಿತ್ ಬುಮ್ರಾ ಹಾಗೂ ವಿಕೆಟ್ಕೀಪರ್ ಬ್ಯಾಟರ್ ರಿಷಭ್ ಪಂತ್. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಸ್ಪಿನ್ ಪಿಚ್ನಲ್ಲಿ ಆಡಿದ್ದ ಕಾರಣ ಟೀಮ್ ಇಂಡಿಯಾಗೆ ವೇಗದ ಬೌಲಿಂಗ್ನ ಅವಶ್ಯಕತೆ ಬಿದ್ದಿರಲಿಲ್ಲ. ಆದರೆ, ಟೆಸ್ಟ್ ವಿಶ್ವ ಚಾಂಪಿಯನ್ಷಿಪ್ ಇಂಗ್ಲೆಂಡ್ನಲ್ಲಿ ನಡೆಯುವ ಕಾರಣ ಅಲ್ಲಿ ವೇಗದ ಬೌಲರ್ ಅಗತ್ಯ. ಆದರೆ, ವಿಕೆಟ್ಕೀಪರ್ ಶ್ರೀಕರ್ ಭರತ್ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಅವಕಾಶ ಪಡೆದುಕೊಂಡಿದ್ದರೂ ಅವರು ಛಾಪು ಮೂಡಿಸಲು ವಿಫಲಗೊಂಡಿದ್ದರು. ಹೀಗಾಗಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನಲ್ಲಿ ವಿಕೆಟ್ಕೀಪರ್ ಕೋಟಾದಲ್ಲಿ ರಾಹುಲ್ಗೆ ಅವಕಾಶ ನೀಡಬೇಕು ಎಂದು ಸುನೀಲ್ ಗವಾಸ್ಕರ್ ಹೇಳಿದ್ದಾರೆ.
ಇದನ್ನೂ ಓದಿ : INDvsAUS : ಕೆ ಎಲ್ ರಾಹುಲ್ ವಿರುದ್ಧ ಮಗದೊಮ್ಮೆ ಟೀಕೆಗಳ ಪ್ರಹಾರ ನಡೆಸಿದ ವೆಂಕಟೇಶ್ ಪ್ರಸಾದ್
ಕೆ. ಎಲ್ ರಾಹುಲ್ ವಿಕೆಟ್ಕೀಪಿಂಗ್ ಮಾಡಬಲ್ಲರು. ಐದು ಅಥವಾ ಆರನೇ ಕ್ರಮಾಂಕದಲ್ಲಿ ಬ್ಯಾಟ್ ಕೂಡ ಬೀಸಬಲ್ಲರು. ಅದಕ್ಕಿಂತಲೂ ಹೆಚ್ಚಾಗಿ ಇಂಗ್ಲೆಂಡ್ ಪಿಚ್ನಲ್ಲಿ ರಾಹುಲ್ ಉತ್ತಮ ಸಾಧನೆ ಹೊಂದಿದ್ದಾರೆ. ಕಳೆದ ಬಾರಿ ಲಾರ್ಡ್ಸ್ನಲ್ಲಿ ಶತಕ ಬಾರಿಸಿದ್ದರು. ಹೀಗಾಗಿ ಆಡುವ 11ರ ಬಳಗದಲ್ಲಿ ರಾಹುಲ್ಗೆ ಅವಕಾಶ ನೀಡಬೇಕು ಎಂದು ಗವಾಸ್ಕರ್ ನುಡಿದಿದ್ದಾರೆ.
ಭಾರತ ತಂಡದ ಮಾಜಿ ವಿಕೆಟ್ಕೀಪರ್ ಹಾಗೂ ಹಾಲಿ ಕ್ರಿಕೆಟ್ ವಿಶ್ಲೇಷಕ ದಿನೇಶ್ ಕಾರ್ತಿಕ್ ಕೂಡ ಇದೇ ಅಭಿಪ್ರಾಯವನ್ನು ಮಂಡಿಸಿದ್ದಾರೆ. ಇಂಗ್ಲೆಂಡ್ ಪಿಚ್ನಲ್ಲಿ ವಿಕೆಟ್ಕೀಪರ್ಗೆ ವಿಕೆಟ್ ಪಕ್ಕದಲ್ಲೇ ನಿಂತು ಕೀಪಿಂಗ್ ಮಾಡುವ ಅವಶ್ಯಕತೆ ಇಲ್ಲ. ಅಲ್ಲಿದ್ದು ವೇಗದ ಪಿಚ್ ಆಗಿರುವ ಕಾರಣ ಅಲ್ಲಿ ದೂರ ನಿಂತು ವಿಕೆಟ್ಕೀಪಿಂಗ್ ಮಾಡಲು ಕೆ. ಎಲ್ ರಾಹುಲ್ ಸಾಕು. ಅಥವಾ ಇಶಾನ್ ಕಿಶನ್ಗೆ ಅವಕಾಶ ನೀಡಬಹುದು ಎಂದು ಹೇಳಿದ್ದಾರೆ.