ಮೆಲ್ಬೋರ್ನ್: ಇದುವರೆಗಿನ ಏಳು ಟಿ20 ವಿಶ್ವ ಕಪ್ ಹಲವು ದಾಖಲೆಗಳಿಗೆ ಸಾಕ್ಷಿಯಾಗಿದೆ. ಎಂಟನೇ ಆವೃತ್ತಿಯ ವಿಶ್ವ ಕಪ್ ಆಸ್ಟ್ರೇಲಿಯಾದಲ್ಲಿ ಅರಂಭಗೊಂಡಿದ್ದು, ೧೬ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಅಂತೆಯೇ ಈ ಹಿಂದಿನ ಆವೃತ್ತಿಗಳಲ್ಲಿ ದಾಖಲಾದ ಕೆಲವು ಸ್ವಾರಸ್ಯಕರ ಸಂಗತಿಗಳು ಇಲ್ಲಿವೆ..
1. ಟಿ20 ವಿಶ್ವ ಕಪ್ ಇತಿಹಾಸದಲ್ಲಿ ಅತ್ಯಧಿಕ ಶೂನ್ಯ ಸಂಪಾದನೆ ಮಾಡಿದ ಆಟಗಾರರೆಂದರೆ ಪಾಕಿಸ್ತಾನ ಕ್ರಿಕೆಟಿಗ ಶಾಹಿದ್ ಅಫ್ರಿದಿ ಮತ್ತು ಶ್ರೀಲಂಕಾದ ತಿಲಕರತ್ನೆ ದಿಲ್ಶನ್. ಇಬ್ಬರು ಆಟಗಾರರು 5 ಬಾರಿ ಶೂನ್ಯಕ್ಕೆ ಔಟಾಗಿ ಜಂಟಿ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ. ಇವರ ಬಳಿಕ ಇಂಗ್ಲೆಂಡ್ ತಂಡದ ಅಲೆಕ್ಸ್ ಹೇಲ್ಸ್ 3 ಬಾರಿ ಶೂನ್ಯ ಸುತ್ತಿದ ಆಟಗಾರ.
2. ಅತಿ ಹೆಚ್ಚು ಮೊತ್ತ ಪೇರಿಸಿದ ದಾಖಲೆ ಶ್ರೀಲಂಕಾ ತಂಡದ ಹೆಸರಿನಲ್ಲಿದೆ. 2007ರ ಉದ್ಘಾಟನಾ ಆವೃತ್ತಿಯಲ್ಲಿ ಟಿ20 ವಿಶ್ವ ಕಪ್ ಆವೃತ್ತಿಯಲ್ಲಿ ಕೀನ್ಯಾ ತಂಡದ ವಿರುದ್ಧ ೬ ವಿಕೆಟ್‌ಗೆ 260 ರನ್ ಗಳಿಸಿತ್ತು.
3. ಬೌಂಡರಿ ಮತ್ತು ಸಿಕ್ಸರ್ ಮೂಲಕ ಅತ್ಯಧಿಕ ರನ್ ಗಳಿಸಿದ ಆಟಗಾರರ ಯಾದಿಯಲ್ಲಿ ಕ್ರಿಸ್ ಗೇಲ್ ಮೊದಲಿಗರು. ಉದ್ಘಾಟನಾ ಆವೃತ್ತಿಯ ವಿಶ್ವ ಕಪ್ನಲ್ಲಿ 10 ಸಿಕ್ಸರ್ (60), 7 ಬೌಂಡರಿ (28) ಒಳಗೊಂಡಂತೆ 88 ರನ್ ಸಿಡಿಸಿದ್ದರು.
4. ಉದ್ಘಾಟನಾ ಆವೃತ್ತಿಯ ಟಿ 20 ವಿಶ್ವ ಕಪ್ ಆಡಿದ ನಾಲ್ವರು ಆಟಗಾರರು ಈ ಬಾರಿಯ ವಿಶ್ವ ಕಪ್ನಲ್ಲಿಯೂ ಕಾಣಿಸಿಕೊಂಡಿದ್ದಾರೆ. ಭಾರತ ಕ್ರಿಕೆಟ್ ತಂಡದ ಆಟಗಾರರಾದ ರೋಹಿತ್ ಶರ್ಮಾ ಮತ್ತು ದಿನೇಶ್ ಕಾರ್ತಿಕ್, ಬಾಂಗ್ಲಾದೇಶದ ಶಕಿಬ್ ಅಲ್ ಹಸನ್ ಹಾಗೂ ಜಿಂಬಾಬ್ವೆಯ ಸೀನ್ ವಿಲಿಯಮ್ಸ್ 2022 ರ ವಿಶ್ವ ಕಪ್ನಲ್ಲಿಯೂ ಕಾಣಿಸಿಕೊಂಡಿದ್ದಾರೆ. ಆದರೆ ಸೀನ್ ವಿಲಿಯಮ್ಸ್ 2007 ವಿಶ್ವ ಕಪ್ನಲ್ಲಿ ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಂಡಿರಲಿಲ್ಲ.
5. ಟಿ20 ವಿಶ್ವ ಕಪ್ನಲ್ಲಿ ತಂಡವೊಂದರ ಕನಿಷ್ಠ ಸ್ಕೋರ್ 2014ರಲ್ಲಿ ದಾಖಲಾಯಿತು. ಶ್ರೀಲಂಕಾ ತಂಡದ ವಿರುದ್ಧ ನೆದರ್ಲೆಂಡ್ಸ್ ತಂಡ 79 ರನ್ ಗಳಿಸಿದ್ದು ಈ ವರೆಗಿನ ಕನಿಷ್ಠ ಮೊತ್ತ.
6. ಇದುವರೆಗಿನ 7 ಟಿ20 ವಿಶ್ವ ಕಪ್ ಆವೃತ್ತಿಯಲ್ಲಿ ಕೇವಲ 9 ಶತಕಗಳು ಮಾತ್ರ ದಾಖಲಾಗಿವೆ.
7. ಅತೀ ಹೆಚ್ಚು ಇತರ ರನ್ ನೀಡಿದ ಕೆಟ್ಟ ದಾಖಲೆ ವೆಸ್ಟ್ ಇಂಡೀಸ್ ತಂಡದ ಹೆಸರಿನಲ್ಲಿದೆ. ಬರೋಬ್ಬರಿ 28 ರನ್ ನೀಡಿದೆ. ಇದರಲ್ಲಿ 23 ವೈಡ್, ಒಂದು ನೋ ಬಾಲ್, ನಾಲ್ಕು ಲೆಗ್ಬೈ.
8. ಅತ್ಯಧಿಕ ಗರಿಷ್ಠ ಸ್ಕೋರರ್ ಪಟ್ಟಿಯಲ್ಲಿ ನ್ಯೂಜಿಲೆಂಡ್ ತಂಡದ ಬ್ರೆಂಡನ್ ಮೆಕಲಮ್ (123) ಅಗ್ರಸ್ಥಾನದಲ್ಲಿದ್ದಾರೆ. ದ್ವಿತೀಯ ಸ್ಥಾನದಲ್ಲಿ ಕ್ರಿಸ್ ಗೇಲ್(117) ಗುರುತಿಸಿಕೊಂಡಿದ್ದಾರೆ.
9. ಅತೀ ಹೆಚ್ಚು ವಿಶ್ವ ಕಪ್ ಪಂದ್ಯಗಳ್ನಾಡಿದ ದಾಖಲೆ ಶ್ರೀಲಂಕಾ ಕ್ರಿಕೆಟ್ ತಂಡದ ತಿಲಕರತ್ನೆ ದಿಲ್ಶನ್(35) ಹೆಸರಿನಲ್ಲಿದೆ. ಆದರೆ ರೋಹಿತ್ ಶರ್ಮಾ (33) ಮತ್ತು ಶಕಿಬ್ ಅಲ್ ಹಸನ್ (31) ಗೆ ಈ ದಾಖಲೆಯನ್ನು ಮುರಿಯುವ ಅವಕಾಶವಿದೆ. ಏಕೆಂದರೆ ಈ ಬಾರಿಯ ವಿಶ್ವ ಕಪ್ನಲ್ಲಿ ಈ ಇಬ್ಬರು ಆಟಗಾರರು ಆಡುತ್ತಿದ್ದಾರೆ.
10. ಈ ವರೆಗಿನ ಟಿ20 ವಿಶ್ವ ಕಪ್ ಇತಿಹಾಸದಲ್ಲಿ ಮೂರು ಬಾರಿ ಪಂದ್ಯಗಳು ಟೈ ಕಂಡಿದೆ. ಮೊದಲ ಟೈ ಭಾರತ ಮತ್ತು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕಂಡುಬಂತು. ಈ ಪಂದ್ಯದಲ್ಲಿ ಗೆಲುವಿಗೆ ಬಾಲ್ ಔಟ್ ನೀಡಲಾಗಿತ್ತು. ಇದರಲ್ಲಿ ಭಾರತ ಮೇಲುಗೈ ಸಾಧಿಸಿತ್ತು. ಇದಾದ ಬಳಿಕ ನ್ಯೂಜಿಲೆಂಡ್ ಮತ್ತು ಶ್ರೀಲಂಕಾ, ವೆಸ್ಟ್ ಇಂಡೀಸ್ ಮತ್ತು ನ್ಯೂಜಿಲೆಂಡ್ ತಂಡದ ವಿರುದ್ಧ ಪಂದ್ಯ ಟೈ ಗೊಂಡಿತ್ತು. ಆದರೆ ಇಲ್ಲಿ ಸೂಪರ್ ಓವರ್ ಮೂಲಕ ಫಲಿತಾಂಶ ನಿರ್ಣಯಿಸಲಾಗಿತ್ತು.
ಇದನ್ನೂ ಓದಿ | T20 World Cup | ಟಿ20 ವಿಶ್ವ ಕಪ್ ವೇಳಾಪಟ್ಟಿ ಇಂತಿದೆ, ಯಾರಿಗೆ ಯಾರ ವಿರುದ್ಧ ಯಾವಾಗ ಪಂದ್ಯ?