Site icon Vistara News

IOC Session: ಒಲಿಂಪಿಕ್ಸ್ ಕನಸು ನನಸಾಗಿಸುವ ಮೊದಲ ಹೆಜ್ಜೆ; 40 ವರ್ಷಗಳ ಬಳಿಕ ಭಾರತದಲ್ಲಿ ಐಒಸಿ ಸಭೆ

International Olympic Committee

ಮುಂಬಯಿ: ವಿಶ್ವದ ಅತ್ಯಂತ ಬೃಹತ್‌ ಕ್ರೀಡಾಕೂಟವಾದ ಒಲಿಂಪಿಕ್ಸ್‌ ಭಾರತದಲ್ಲಿ ನಡೆಯುವ ಕಾಲ ಸನ್ನಿಹಿತವಾದಂತಿದೆ. ಅಕ್ಟೋಬರ್ 15 ರಿಂದ 17ರ ವರೆಗೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧಿವೇಶನ(International Olympic Committee Session) ಮುಂಬೈಯಲ್ಲಿ ನಡೆಯಲಿದೆ. ಇದು 40 ವರ್ಷಗಳ ನಂತರ ಭಾರತದಲ್ಲಿ ನಡೆಯುವ ಐಒಸಿಯ ಸಭೆ ಇದಾಗಿದೆ. ಈ ಹಿಂದೆ 1983 ನವದೆಹಲಿ ಐಒಸಿ 86ನೇ ಆವೃತ್ತಿಯ ಅಧಿವೇಶನವನ್ನು ನಡೆಸಿತ್ತು. ಮೂಲಗಳ ಪ್ರಕಾರ ಭಾರತವೂ ಒಲಿಂಪಿಕ್ಸ್​ ಕೂಟದ ಆತಿಥ್ಯವಹಿಸುವ ಎಲ್ಲ ಸಾಧ್ಯತೆ ಇದೆ ಎನ್ನಲಾಗಿದೆ.

2036ರ ಒಲಿಂಪಿಕ್ಸ್

ಸದ್ಯದ ವರದಿಯ ಪ್ರಕಾರ 2036ರ ಒಲಿಂಪಿಕ್ಸ್(2036 Olympics) ಕ್ರೀಡಾಕೂಟವನ್ನು ಆಯೋಜಿಸಲು ಭಾರತ ಒಲುವು ತೋರಲಿದೆ ಎನ್ನಲಾಗಿದೆ. ಕೆಲ ತಿಂಗಳುಗಳ ಹಿಂದೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಅಧ್ಯಕ್ಷ ಥಾಮಸ್ ಬಾಕ್​(IOC President Thomas Bach) ಅವರು ಭಾರತದ ಒಲಿಂಪಿಕ್ಸ್​ ಆತಿಥ್ಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದರು. ಸೆಪ್ಟೆಂಬರ್ 4 ರಂದು ನಡೆದ ಸಂದರ್ಶನದಲ್ಲಿ, ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ) ಮತ್ತು ಭಾರತ ಸರ್ಕಾರ ಎರಡೂ ವ್ಯಕ್ತಪಡಿಸಿದ ಆಸಕ್ತಿಯ ಬಗ್ಗೆ ತನಗೆ ತಿಳಿದಿದೆ ಎಂದು ಬಾಕ್​ ಬಹಿರಂಗಪಡಿಸಿದ್ದರು.

“ನಾವು ಕೆಲವೊಮ್ಮೆ ಸಂವಾದಗಳನ್ನು ಹೊಂದಿದ್ದೇವೆ ಮತ್ತು ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ) ಮತ್ತು ಕೇಂದ್ರ ಸರ್ಕಾರದ ಕಡೆಯಿಂದ ವಿಭಿನ್ನ ಸೂಚನೆಗಳಿವೆ. ಇದು ಇಡೀ ಒಲಿಂಪಿಕ್ ಆಂದೋಲನಕ್ಕೆ ಉತ್ತಮ ಸುದ್ದಿಯಾಗಿದೆ. ಭಾರತವು ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿದೆ. ಒಲಿಂಪಿಕ್ಸ್​ ಕೂಡವನ್ನು ನಡೆಸುವ ಸಾಮರ್ಥ್ಯವೂ ಇದೆ” ಎಂದು ಬಾಕ್​ ಹೇಳಿದ್ದರು.

ಇದನ್ನೂ ಓದಿ Olympics Cricket: ಒಲಿಂಪಿಕ್ಸ್​ಗೆ ಕ್ರಿಕೆಟ್ ಸೇರ್ಪಡೆ ನಿರ್ಧಾರ ವಿಳಂಬ

ಭಾರತದ ನಿಯೋಗದ ನೇತೃತ್ವ ವಹಿಸಿರುವ ನೀತಾ ಅಂಬಾನಿ, ಐಒಸಿಯ ಮುಂದಿನ ಭೇಟಿಯನ್ನು ಭಾರತದಲ್ಲಿ ನಡೆಸಲು ವಕಾಲತ್ತು ವಹಿಸಿದ್ದಾರೆ. “ಭವಿಷ್ಯದಲ್ಲಿ ಯೂತ್ ಒಲಿಂಪಿಕ್ ಹಾಗೂ ಒಲಿಂಪಿಕ್ ಗೇಮ್ಸ್ ಅನ್ನು ಭಾರತದಲ್ಲಿ ನಡೆಸುವುದು ನಮ್ಮ ಗುರಿ. ಜಗತ್ತಿನಲ್ಲೇ ಅತಿ ಹೆಚ್ಚು ಯುವ ಶಕ್ತಿಯನ್ನು ಭಾರತ ಹೊಂದಿದ್ದು, ಇದರಿಂದಾಗಿ ಒಲಿಂಪಿಕ್ಸ್​ ಮಹತ್ವ ಭಾರತದ ಯುವಕರಿಗೆ ಅರ್ಥವಾಗಲಿದೆ. ಈ ಪಾಲುದಾರಿಕೆಯನ್ನು ನಾವು ಇನ್ನಷ್ಟು ಬಲಪಡಿಸಬೇಕಿದೆ” ಎಂದು ನೀತಾ ಅಂಬಾನಿ ಹೇಳಿದ್ದರು.

ಬಿಡ್​ ಸಲ್ಲಿಕೆ

ಒಲಿಂಪಿಕ್ಸ್ ಕ್ರೀಡಾ ಕೂಟದ ಆತಿಥ್ಯ ವಹಿಸುವ ಕುರಿತು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಗೆ ಮುಂದಿನ ವರ್ಷ ನೀಲನಕ್ಷೆ ಸಲ್ಲಿಸಲಾಗುವುದು ಎಂದು ಕೆಲವು ದಿನಗಳ ಹಿಂದೆ ಕೇಂದ್ರ ಕ್ರೀಡಾ ಸಚಿವ ಅನುರಾಗ್​ ಠಾಕೂರ್​ ಸಂದರ್ಶನವೊಂದರಲ್ಲಿ ತಿಳಿಸಿದ್ದರು. “ಇದುವರೆಗೆ ನಮ್ಮ ದೇಶದಲ್ಲಿ ಒಂದು ಬಾರಿಯೂ ಒಲಿಂಪಿಕ್ಸ್‌ ನಡೆಯದಿರುವುದು ವಿಪರ್ಯಾಸವೇ ಸರಿ. ಆದರೆ ಸರ್ಕಾರ ಈ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮಾಡುತ್ತಿದೆ. 2036 ಒಲಿಂಪಿಕ್ಸ್‌ ಕೂಟವನ್ನು ಭಾರತದಲ್ಲಿ ನಡೆಸುವುದಕ್ಕಾಗಿ ಬಿಡ್‌ ಸಲ್ಲಿಸಲು ಯೋಜನೆ ರೂಪಿಸಲಾಗಿದೆ” ಎಂದು ಅನುರಾಗ್ ಠಾಕೂರ್ ಸ್ಪಷ್ಟಪಡಿಸಿದ್ದರು.

Exit mobile version