ನವದೆಹಲಿ: ಭಾರತ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್(Brij Bhushan Sharan Singh) ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪಗಳ ತನಿಖೆಗಾಗಿ ರಚಿಸಿರುವ ಸಮಿತಿಯು ತನ್ನ ವರದಿಯನ್ನು ಶೀಘ್ರ ಸಲ್ಲಿಸಲಿದೆ ಎಂದು ಭಾರತ ಒಲಿಂಪಿಕ್ ಸಂಸ್ಥೆಯ (IOA) ಅಧ್ಯಕ್ಷೆ ಪಿ.ಟಿ. ಉಷಾ(PT Usha) ತಿಳಿಸಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ಪಿ.ಟಿ. ಉಷಾ, ಇದೊಂದು ಸೂಕ್ಷ್ಮ ವಿಚಾರವಾಗಿದೆ. ಹೀಗಾಗಿ ತನಿಖೆಗೆ ಸಮಯ ಬೇಕಾಗುತ್ತದೆ. ಸದ್ಯಕ್ಕೆ ವರದಿ ಅಂತಿಮಗೊಂಡಿಲ್ಲ. ನಾವು ಕುಸ್ತಿಪಟುಗಳೊಂದಿಗೆ ಚರ್ಚಿಸಿದ್ದೇವೆ. ಸಮಿತಿಯು ವರದಿಯನ್ನು ಅಂತಿಮಗೊಳಿಸಿದ ಬಳಿಕ ನಮಗೆ ನೀಡಲಿದೆ” ಎಂದು ಅವರು ಐಒಎಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಹೇಳಿದರು.
ದೇಶದ ಖ್ಯಾತ ಕುಸ್ತಿಪಟುಗಳು ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿ ದೆಹಲಿಯ ಜಂತರ್ ಮಂತರ್ನಲ್ಲಿ ಮೂರು ದಿನಗಳ ಕಾಲ ಪ್ರತಿಭಟನೆ ನಡೆಸಿದ್ದರು. ಬಳಿಕ ಕುಸ್ತಿ ಪಟುಗಳ ಆಗ್ರಹದಂತೆ ಪ್ರಕರಣದ ಕುರಿತು ತನಿಖೆ ನಡೆಸಲು ಅನುಭವಿ ಬಾಕ್ಸರ್ ಎಂಸಿ ಮೇರಿ ಕೋಮ್(MC Mary Kom) ನೇತೃತ್ವದಲ್ಲಿ ಏಳು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ.
ಇದನ್ನೂ ಓದಿ Wrestling: ಪ್ರಮುಖ ಟೂರ್ನಿಯಿಂದ ಹಿಂದೆ ಸರಿಯುತ್ತಿರುವ ಕುಸ್ತಿ ಪಟುಗಳ ವರ್ತನೆಗೆ ಕ್ರೀಡಾ ಸಚಿವಾಲಯ ಬೇಸರ
ಒಲಿಂಪಿಯನ್ ಕುಸ್ತಿ ಪಟುಗಳಾದ ವಿನೇಶ್ ಪೋಗಟ್, ದೀಪಕ್ ಪೂನಿಯಾ, ರವಿ ದಹಿಯಾ, ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್ ಸೇರಿದಂತೆ ಮತ್ತಿತರ ಕುಸ್ತಿಪಟುಗಳು ಪ್ರತಿಭಟನೆ ನಡೆಸಿ, ಬ್ರಿಜ್‌ಭೂಷಣ್ ವಿರುದ್ಧದ ಆರೋಪಗಳ ತನಿಖೆಗೆ ಒತ್ತಾಯಿಸಿದ್ದರು.