ನವ ದೆಹಲಿ : ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಪದಕಗ ಗೆದ್ದಿರುವ ಭಾರತದ ೬೧ ಅಥ್ಲೀಟ್‌ಗಳಿಗೆ ಭಾರತೀಯ ಒಲಿಂಪಿಕ್ಸ್ ಸಂಸ್ಥೆ (ಐಒಎ) ನಗದು ಬಹುಮಾನ ನೀಡಿದೆ. ಬರ್ಮಿಂಗ್ಹಮ್‌ನಲ್ಲಿ ಅತ್ಯುತ್ತಮ ಸಾಧನೆ ತೋರಿದ ಸಾಧಕರನ್ನು ದೇಶವೇ ಕೊಂಡಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ನಿವಾಸಕ್ಕೆ ಕರೆಸಿ ಅತಿಥ್ಯ ನೀಡಿದ್ದರು. ಆಯಾಯ ರಾಜ್ಯದ ಕ್ರೀಡಾ ಇಲಾಖೆಗಳೂ ಕೂಡ ಕರೆಸಿ ಸಮ್ಮಾನ ಮಾಡಿ ನಗದು ಬಹುಮಾನ ಘೋಷಿಸಿದ್ದವು. ಇದೀಗ ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ ಭಾನುವಾರ ಕಾರ್ಯಕ್ರಮ ಆಯೋಜಿಸಿ ಪದಕ ವಿಜೇತರಿಗೆ ಬಹುಮಾನ ವಿತರಣೆ ಮಾಡಿದೆ.
ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪಕದ ಎಲ್ಲ ಅಥ್ಲೀಟ್‌ಗಳು ೨೦ ಲಕ್ಷ ರೂಪಾಯಿ ಬಹುಮಾನ ಪಡೆದರೆ, ಬೆಳ್ಳಿ ಪದಕ ಗೆದ್ದವರಿಗೆ ೧೦ ಲಕ್ಷ ರೂಪಾಯಿ ಬಹುಮಾನ ಹಾಗೂ ಕಂಚು ಗೆದ್ದ ೨೩ ಅಥ್ಲೀಟ್‌ಗಳಿಗೆ ತಲಾ ೭.೫ ಲಕ್ಷ ರೂಪಾಯಿ ಬಹುಮಾನ ಸಿಗಲಿದೆ.
ಕಾರ್ಯಕ್ರಮದಲ್ಲಿ ಭಾರತೀಯ ಒಲಿಂಪಿಕ್ ಸಂಸ್ಥೆಯ ಹಂಗಾಮಿ ಅಧ್ಯಕ್ಷ ಅನಿಲ್ ಖನ್ನಾ, ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ, ಖಜಾಂಜಿ ಅನ್ನದಾನೇಶ್ವರ ಪಾಂಡೆ ಮತ್ತಿರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಮೋದಿಯ ಅಭಿಮಾನದ ಮಾತುಗಳು
ಶನಿವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಥ್ಲೀಟ್‌ಗಳಿಗೆ ಆತಿಥ್ಯ ನೀಡಿದ್ದರು. ಈ ವೇಳೆ ಭಾರತೀಯ ಕ್ರೀಡಾ ಕ್ಷೇತ್ರದ ಬಗ್ಗೆ ಅಭಿಮಾನದ ಮಾತುಗಳನ್ನು ಆಡಿದ್ದರು. ಭಾರತದ ಕ್ರೀಡಾ ಕ್ಷೇತ್ರ ಸುವರ್ಣಯುಗಕ್ಕೆ ಹೆಜ್ಜೆಯಿಟ್ಟಿದೆ. ಪ್ರತಿಯೊಬ್ಬರ ಅಥ್ಲೀಟ್ ಈ ದೇಶದ ಸಂಪತ್ತು. ಅವರಿಗೆ ಪ್ರೇರಣೆ ನೀಡುವುದು ನಮ್ಮ ಜವಾಬ್ದಾರಿ ಎಂದು ಹೇಳಿದ್ದರು.
ಇದನ್ನೂ ಓದಿ : CWG- 2022 | ಭಾರತದ ಕ್ರೀಡಾ ಕ್ಷೇತ್ರದ ಸುವರ್ಣಯುಗ ಶುರು ಎಂದು ಬಣ್ಣಿಸಿದ ಪ್ರಧಾನಿ ಮೋದಿ