ನವದೆಹಲಿ: ಅಮಾನತುಗೊಂಡಿರುವ ರಾಷ್ಟ್ರೀಯ ಕುಸ್ತಿ ಸಂಸ್ಥೆಯ(WFI) ದೈನಂದಿನ ವ್ಯವಹಾರಗಳನ್ನು ನಡೆಸಲು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (IOA) ತ್ರಿಸದಸ್ಯರ ತಾತ್ಕಾಲಿಕ ಸಮಿತಿಯನ್ನು ರಚಿಸಿದೆ. ಕುಸ್ತಿ ಸಂಸ್ಥೆಯ ನೂತನ ಅಧ್ಯಕ್ಷ ಸಂಜಯ್ ಸಿಂಗ್, ಮಾಜಿ ಅಧ್ಯಕ್ಷರಾಗಿದ್ದ, ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ಆಪ್ತರಾಗಿದ್ದು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ತನ್ನದೇ ಆದ ಸಂವಿಧಾನದ ನಿಬಂಧನೆಗಳನ್ನು ಅನುಸರಿಸದ ಕಾರಣ ರಾಷ್ಟ್ರೀಯ ಕುಸ್ತಿ ಸಂಸ್ಥೆಯನ್ನು ಕ್ರೀಡಾ ಸಚಿವಾಲಯ ಅಮಾನತು ಮಾಡಿತ್ತು.
ಇದೀಗ ಅಮಾನತುಗೊಂಡಿರುವ ರಾಷ್ಟ್ರೀಯ ಕುಸ್ತಿ ಸಂಸ್ಥೆಯ ದೈನಂದಿನ ವ್ಯವಹಾರಗಳನ್ನು ನಡೆಸಲು ಐಒಎ ತ್ರಿಸದಸ್ಯರ ತಾತ್ಕಾಲಿಕ ಸಮಿತಿಯನ್ನು ರಚಿಸಿದೆ. ವುಶು ಅಸೋಸಿಯೇಷನ್ ಆಫ್ ಇಂಡಿಯಾ ಅಧ್ಯಕ್ಷ ಭೂಪಿಂದರ್ ಸಿಂಗ್ ಬಾಜ್ವಾ ಅವರು ಸಮಿತಿಯ ಅಧ್ಯಕ್ಷರಾಗಿದ್ದು, ಹಾಕಿ ಒಲಿಂಪಿಯನ್ ಎಂಎಂ ಸೋಮಯ್ಯ ಮತ್ತು ಮಾಜಿ ಅಂತಾರಾಷ್ಟ್ರೀಯ ಶಟ್ಲರ್ ಮಂಜುಷಾ ಕನ್ವರ್ ಈ ಸಮಿತಿಯ ಸದಸ್ಯರಾಗಿದ್ದಾರೆ.
ಅಸ್ತಿತ್ವದಲ್ಲಿರುವ ನಿಯಮ ಮತ್ತು ನಿಬಂಧನೆಗಳನ್ನು ಹೊಸದಾಗಿ ಆಯ್ಕೆಯಾದ ಕುಸ್ತಿ ಫೆಡರೇಶನ್ ಸಂಪೂರ್ಣ ನಿರ್ಲಕ್ಷಿಸಿತ್ತು. ಇದೇ ಕಾರಣದಿಂದ ಕೇಂದ್ರ ಕ್ರೀಡಾ ಸಚಿವಾಲಯವು ಡಿ. 24 ಭಾನುವಾರದಂದು ಅಧಿಕೃತ ಪ್ರಕಟಣೆಯಲ್ಲಿ ಅಮಾನತು ಶಿಕ್ಷೆಯನ್ನು ಪ್ರಕಟಿಸಿತ್ತು.
“ಕ್ರೀಡಾ ಸಂಸ್ಥೆಗಳಲ್ಲಿ ಉತ್ತಮ ಆಡಳಿತದ ತತ್ವಗಳನ್ನು ಎತ್ತಿಹಿಡಿಯಲು ತಕ್ಷಣದ ಕ್ರಮದ ಅಗತ್ಯವಿದೆ. ಸಮಸ್ಯೆಗಳನ್ನು ಸರಿಪಡಿಸುವ ಕ್ರಮಗಳ ಅಗತ್ಯವಿದೆ, ಆದ್ದರಿಂದ ಶಿಸ್ತಿನ ಕುಸ್ತಿಪಟುಗಳಿಗೆ ಯಾವುದೇ ರೀತಿಯಲ್ಲಿ ತೊಂದರೆ ಅನುಭವಿಸದಂತೆ ನೋಡಿಕೊಳ್ಳಬೇಕಾಗಿದೆ. ಡಬ್ಲ್ಯುಎಫ್ಐನ ವ್ಯವಹಾರಗಳನ್ನು ನಿರ್ವಹಿಸಲು ಮಧ್ಯಂತರ ಅವಧಿಗೆ ಸೂಕ್ತ ವ್ಯವಸ್ಥೆಗಳನ್ನು ಮಾಡಲು ಕ್ರೀಡಾ ಸಚಿವಾಲಯ ಐಒಎಗೆ ಪತ್ರ ಬರೆದಿತ್ತು. ಇದೀಗ ಐಒಎ ಕ್ರೀಡಾ ಸಚಿವಾಲಯದ ಮನವಿಯಂತೆ ತ್ರಿಸದಸ್ಯರ ತಾತ್ಕಾಲಿಕ ಸಮಿತಿಯನ್ನು ರಚಿಸಿದೆ.
ಇದನ್ನೂ ಓದಿ WFI Suspended: ರಾಷ್ಟ್ರೀಯ ಕುಸ್ತಿ ಫೆಡರೇಶನ್ ಸಂಸ್ಥೆ ಅಮಾನತು ಮಾಡಲು ಕಾರಣವೇನು?
ಬ್ರಿಜ್‌ಭೂಷಣ್ ವಿರುದ್ಧ ಹೋರಾಟ
ಆರು ಬಾರಿ ಬಿಜೆಪಿ ಸಂಸದರಾಗಿದ್ದ ಬ್ರಿಜ್ ಭೂಷಣ್ ಅವರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಸಾಕ್ಷಿ ಮಲಿಕ್ ಸೇರಿದಂತೆ ದೇಶದ ಉನ್ನತ ಕುಸ್ತಿಪಟುಗಳು ಆರೋಪಿಸಿದ ನಂತರ ಅವರು ರಾಜೀನಾಮೆ ನೀಡಬೇಕಾಯಿತು. ಒಲಿಂಪಿಕ್ ಕಂಚಿನ ಪದಕ ವಿಜೇತ ಬಜರಂಗ್ ಪೂನಿಯಾ ಮತ್ತು ಕಾಮನ್ವೆಲ್ತ್ ಕ್ರೀಡಾಕೂಟದ ಚಿನ್ನದ ಪದಕ ವಿಜೇತೆ ವಿನೇಶ್ ಫೋಗಟ್ ಸೇರಿದಂತೆ ಅಗ್ರ ಕುಸ್ತಿಪಟುಗಳು ಜನವರಿಯಲ್ಲಿ ಬಿಜೆಪಿ ಸಂಸದರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಬೀದಿಗಿಳಿದಿದ್ದರು.
2012ರಿಂದ 2022ರವರೆಗೆ 10 ವರ್ಷಗಳ ಅವಧಿಯಲ್ಲಿ ತಮ್ಮ ಮೇಲೆ ದೌರ್ಜನ್ಯ ನಡೆದಿದೆ ಎಂದು ಏಳು ಮಹಿಳಾ ಕುಸ್ತಿಪಟುಗಳು ಬ್ರಿಜ್ ಭೂಷಣ್ ಶರಣ್ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಕ್ರಿಮಿನಲ್ ಬೆದರಿಕೆಯ ಆರೋಪ ಹೊರಿಸಿದ್ದರು. ಪ್ರತ್ಯೇಕ ಪೊಲೀಸ್ ದೂರುಗಳನ್ನು ದಾಖಲಿಸಿದ್ದರು. ಆದರೆ ದಿಲ್ಲಿ ಪೊಲೀಸರು ಬ್ರಿಷ್ಭೂಷಣ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರಲಿಲ್ಲ. ಹೀಗಾಗಿ ಕುಸ್ತಿಪಟುಗಳು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿದ ಸುಪ್ರೀಮ್ ಕೋರ್ಟ್ ದೂರು ದಾಖಲಿಸಿಕೊಳ್ಳುವಂತೆ ಸೂಚನೆ ನೀಡಿತ್ತು. ನಂತರ ದೆಹಲಿ ಪೊಲೀಸರು ಪ್ರಕಣ ದಾಖಲಿಸಿಕೊಂಡು ತನಿಖೆ ಆರಂಭಿಸಿ, ಬ್ರಿಜ್‌ಭೂಷಣ್ ವಿರುದ್ಧ ಕೋರ್ಟಿಗೆ ಚಾರ್ಜ್‌ಶೀಟ್ ಸಲ್ಲಿಸಿದ್ದರು.