ನವದೆಹಲಿ: ಭಾರತದ ಒಲಿಂಪಿಕ್ಸ್ ಪದಕ ವಿಜೇತರಾದ ಸ್ಟಾರ್ ಮಹಿಳಾ ಬಾಕ್ಸರ್ ಮೇರಿ ಕೋಮ್, ಪಿ.ವಿ.ಸಿಂಧು ಹಾಗೂ ಮೀರಾಬಾಯಿ ಚಾನು ಸೇರಿ 10 ಮಂದಿ ಕ್ರೀಡಾಪಟುಗಳು (IOA) ಭಾರತ ಒಲಿಂಪಿಕ್ ಸಂಸ್ಥೆಯ (ಐಒಎ) ಅಥ್ಲೀಟ್‌ಗಳ ಸಮಿತಿಯ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸೋಮವಾರ ಈ ಹತ್ತು ಮಂದಿಯ ಅವಿರೋಧ ಆಯ್ಕೆ ನಡೆದಿದೆ. ವಿಂಟರ್ ಒಲಿಂಪಿಯನ್ ಶಿವ ಕೇಶವನ್, ಶೂಟರ್ ಗಗನ್ ನಾರಂಗ್, ಟೇಬಲ್ ಟೆನಿಸ್ ಪಟು ಅಚಂತ ಶರತ್ ಕಮಲ್, ಹಾಕಿ ಆಟಗಾರ್ತಿ ರಾಣಿ ರಾಂಪಾಲ್, ಫೆನ್ಸರ್ ಭವಾನಿ ದೇವಿ, ರೋವರ್ ಬಜರಂಗ್ ಲಾಲ್ ಮತ್ತು ಮಾಜಿ ಶಾಟ್‌ಪಟ್ ಪಟು ಒ.ಪಿ. ಖರಾನಾ ಅಪೆಕ್ಸ್ ಸಮಿತಿಗೆ ಆಯ್ಕೆಯಾದ ಇನ್ನುಳಿದ ಅಥ್ಲೀಟ್‌ಗಳಾಗಿದ್ದಾರೆ.
ಹತ್ತು ಮಂದಿ ನಾಮಪತ್ರ ಸಲ್ಲಿಕೆ
ಭಾರತ ಒಲಿಂಪಿಕ್ ಸಂಸ್ಥೆಯ ಈ ಚುನಾವಣೆಗೆ ಹತ್ತು ಮಂದಿ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಅದರಂತೆ ಐಒಎ ಚುನಾವಣಾಧಿಕಾರಿಯಾಗಿರುವ ಉಮೇಶ್ ಸಿನ್ಹಾ ಅವರು ಚುನಾವಣೆಗೆ ಮುನ್ನವೇ 10 ಅಥ್ಲೀಟ್‌ಗಳನ್ನು ಅವಿರೋಧವಾಗಿ ಆಯ್ಕೆಮಾಡಿದ್ದಾರೆ.
ಮಾಜಿ ಒಲಿಂಪಿಕ್ ಚಿನ್ನದ ಪದಕ ವಿಜೇತ ಶೂಟರ್ ಅಭಿನವ್ ಬಿಂದ್ರಾ ಮತ್ತು ಹಾಕಿ ತಂಡದ ಮಾಜಿ ನಾಯಕ ಸರ್ದಾರ್ ಸಿಂಗ್ ಕ್ರಮವಾಗಿ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಮತ್ತು ಏಷ್ಯಾ ಒಲಿಂಪಿಕ್ ಕೌನ್ಸಿಲ್‌ನ ಸದಸ್ಯರಾಗಿರುವುದರಿಂದ ಅವರೂ ಕೂಡ ಐಒಎನ ಅಥ್ಲೀಟ್‌ಗಳ ಸಮಿತಿಯಲ್ಲಿ ಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ | IND VS NZ | ಭಾರತ ವಿರುದ್ಧದ ತವರಿನ ಟಿ20, ಏಕದಿನ ಸರಣಿಗೆ ನ್ಯೂಜಿಲೆಂಡ್ ತಂಡ ಪ್ರಕಟ