ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಆರ್ ಆರ್ ವಿರುದ್ಧದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ನಾಯಕ ಪಾಂಡ್ಯಾ ಅವರ ಬ್ಯಾಟಿಂಗ್ ಬಲದಿಂದ 37 ರನ್ ಗಳ ಗೆಲುವು ದಾಖಲಿಸಿದೆ. ಆ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಹಾರ್ದಿಕ್ ಪಾಂಡ್ಯಾ ಪಡೆ ನಿಗದಿತ 20 ಓವರಗಳಲ್ಲಿ 4 ವಿಕೆಟ್ ಕಳೆದುಕೊಂಡು
192 ರನ್ ಗಳ ಬೃಹತ್ ಮೊತ್ತ ಪೇರಿಸಿತ್ತು. ನಾಯಕ ಪಾಂಡ್ಯಾ 52 ಎಸೆತಗಳಿಂದ 8 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್ ಗಳ ಸಹಿತ 87ರನ್ ಸಿಡಿಸಿ ಔಟಾಗದೆ ಉಳಿದರು. ಅಭಿನವ್ ಮನೋಹರ್ ಕೂಡ ಸ್ಫೋಟಕ ಬ್ಯಾಟಿಂಗ್ ಮೂಲಕ 28 ಎಸೆತಗಳಿಂದ 4 ಬೌಂಡರಿ 2 ಸಿಕ್ಸರ್ ಗಳೊಂದಿಗೆ 43 ರನ್ ಗಳಿಸಿದರೆ, ಮಿಲ್ಲರ್ 14 ಎಸೆತಗಳಿಂದ ಐದು ಬೌಂಡರಿ, 1 ಸಿಕ್ಸರ್ ಒಳಗೊಂಡ 31ರನ್ ಮೂಲಕ ತಂಡ ಬೃಹತ್ ಮೊತ್ತ ಗಳಿಸಲು ನೆರವಾದರು. ಆರ್ ಆರ್ ಪರ ಕುಲ್ದೀಪ್ ಸೇನ್, ಚಾಹಲ್ ಹಾಗೂ ರಿಯಾನ್ ಪರಾಗ್ ತಲಾ ವಿಕೆಟ್ ಪಡೆದರು.
193 ರನ್ ಗಳ ಗುರಿ ಬೆನ್ನತ್ತಿದ ರಾಜಸ್ತಾನ ರಾಯಲ್ಸ್ ಆರಂಭಿಕ ಅಘಾತ ಅನುಭವಿಸಿತು. 56 ರನ್ ಗಳಿಸುವಷ್ಟರಲ್ಲಿ ದೇವದತ್ ಪಡಿಕ್ಕಲ್(0), ಆರ್.ಅಶ್ವಿನ್ (8) ವಿಕೆಟ್ ಕಳೆದುಕೊಂಡಿತು. ಆದರೆ ಆರಂಭದಿಂದಲೂ ಅಬ್ಬರಿಸಿದ ಜೋಸ್ ಬಟ್ಲರ್ ಟೈಟಾನ್ಸ್ ಬೌಲರ್ ಗಳನ್ನು ಸರಿಯಾಗಿ ದಂಡಿಸಿದ್ರು. 24 ಎಸೆತಗಳನ್ನು ಎದುರಿಸಿ 8 ಬೌಂಡರಿ ಹಾಗೂ 3 ಅಮೋಘ ಸಿಕ್ಸರ್ ಗಳೊಂದಿಗೆ 54 ರನ್ ಗಳಿಸಿ ಫರ್ಗೋಸನ್ ಗೆ ವಿಕೆಟ್ ಒಪ್ಪಿಸಿದರು.
ಬಳಿಕ ನಾಯಕ ಸಂಜು ಸ್ಯಾಮ್ಸನ್(11) ಸೇರಿದಂತೆ ಯಾವೊಬ್ಬ ಬ್ಯಾಟರ್ ಕೂಡ ತಂಡವನ್ನು ಗೆಲುವಿನ ಗುರಿ ಮುಟ್ಟಿಸಲು ವಿಫಲರಾದರು.
ಟೈಟಾನ್ಸ್ ಪರ ಯಶ್ ದಯಾಲ್ ಹಾಗೂ ಫರ್ಗೂಸನ್ ತಲಾ ಮೂರು ವಿಕೆಟ್ ಪಡೆದರೆ ಮೊಹಮ್ಮದ್ ಶಮಿ, ವಿಜಯ್ ಶಂಕರ್ ಒಂದೊಂದು ವಿಕೆಟ್ ಕಿತ್ತರು.