IPL 2022: ರಾಜಸ್ಥಾನ್ ವಿರುದ್ಧ ಏಳು ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ ಗುಜರಾತ್ ತಂಡ ಫೈನಲ್ ತಲುಪಿದೆ. ಈ ಬಾರಿಯ ಐಪಿಎಲ್ ಸರಣಿಯಲ್ಲಿ ಫೈನಲ್ ತಲುಪಿದ ಮೊದಲ ತಂಡ ಗುಜರಾತ್ ಟೈಟಾನ್ಸ್. ಆರಂಭದಿಂದಲೂ ಅಂಕಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಕಾಪಾಡಿಕೊಂಡು ಬಂದ ಈ ತಂಡ ಫೈನಲ್ ತಲುಪವಲ್ಲೂ ನಂಬರ್ ಒನ್! ಎನ್ನಿಸಿಕೊಂಡಿದೆ. ಡೇವಿಡ್ ಮಿಲ್ಲರ್ ರೋಚಕ ಬ್ಯಾಟಿಂಗ್ ಈ ಗೆಲುವಿಗೆ ಕಾರಣ.
ಗುಜರಾತ್ ತಂಡ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ರಾಜಸ್ಥಾನ್ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಕೇವಲ 3 ರನ್ ಗಳಿಸಿ ಪೆವಿಲಿಯನ್ ಸೇರಿದರು. ನಂತರ ತಂಡದ ಕ್ಯಾಪ್ಟನ್ ಸಂಜು ಸ್ಯಾಮ್ಸನ್ ಅಖಾಡಕ್ಕೆ ಇಳಿದು ಮಿಂಚಿನ ಬ್ಯಾಟಿಂಗ್ ಪ್ರದರ್ಶಿಸಿದರು. ಸಂಜು ಸ್ಯಾಮ್ಸನ್ 26 ಬಾಲ್‌ಗೆ 47 ರನ್ ಗಳಿಸಿದರೆ, ಜಾಸ್ ಬಟ್ಲರ್ 56 ಬಾಲ್‌ಗೆ 89 ರನ್ ಗಳಿಸಿ ರೋಚಕ ಆಟವಾಡಿದರು. 20 ಓವರ್ ಮುಗಿಯುವ ಹೊತ್ತಿಗೆ ತಂಡದ ಸ್ಕೋರ್ 6 ವಿಕೆಟ್ ನಷ್ಟಕ್ಕೆ 188 ಆಗಿತ್ತು.
ಟಾರ್ಗೆಟ್ ಬೆನ್ನಟ್ಟಿದ ಗುಜರಾತ್ ತಂಡ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತು. ಈ ಪಂದ್ಯದಲ್ಲಿ ಸ್ಟಾರ್ ಆಗಿದ್ದು ಡೇವಿಡ್ ಮಿಲ್ಲರ್. ಕೊನೆಯ ಹಂತದಲ್ಲಿ ಅವರು ಬಾರಿಸಿದ ಸಿಕ್ಸರ್‌ಗಳು ಮ್ಯಾಚ್‌ನ ಟರ್ನಿಂಗ್ ಪಾಯಿಂಟ್‌ಗಳು. 38 ಬಾಲ್‌ಗೆ ಅಜೇಯ 68 ರನ್ ಸಿಡಿಸಿದ ಮಿಲ್ಲರ್, ಪಂದ್ಯ ಮುಗಿಯಲು ಇನ್ನೂ ಮೂರು ಬಾಲ್ ಬಾಕಿ ಇರುವಾಗಲೇ ಮ್ಯಾಚ್ ಗೆಲ್ಲುವಂತೆ ಮಾಡಿದರು.
ರಾಜಸ್ಥಾನ್ ಸೋತರೂ ಮತ್ತೊಂದು ಅವಕಾಶವಿದೆ. ರಾಜಸ್ಥಾನ ತನ್ನ ಫೈನಲ್ ಕನಸನ್ನು ಜೀವಂತವಾಗಿರಿಸಿಕೊಳ್ಳಲು ಕೊಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ಗೆಲ್ಲಬೇಕು. ಫೈನಲ್ ತಲುಪಿದ ಗುಜರಾತ್ ತಂಡ ಕಪ್ ಗೆಲ್ಲಬಹುದೇ ಎನ್ನುವುದನ್ನು ಫೈನಲ್ ಪಂದ್ಯ ಹೇಳುತ್ತದೆ. ಆದರೆ ಸದ್ಯಕ್ಕೆ ರನರ್ ಅಪ್ ಸ್ಥಾನವಂತೂ ಖಚಿತವಾಗಿದೆ.