ಮುಂಬಯಿ: 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(IPL 2023)ಗೆ ಬಿಸಿಸಿಐ ಸಿದ್ಧತೆ ಆರಂಭಿಸಿದೆ. ಇದರ ಭಾಗವಾಗಿ ಇದೇ ಡಿಸೆಂಬರ್ 23 ರಂದು ಕೊಚ್ಚಿಯಲ್ಲಿ ಆಟಗಾರರ ಮಿನಿ ಹರಾಜು ಕೂಡ ನಡೆಯಲಿದೆ. ಆದರೆ ಇದಕ್ಕೂ ಮೊದಲು ಲೀಗ್‌ನ ಆರಂಭದ ಕುರಿತು ಮಹತ್ವದ ಸುದ್ದಿಯೊಂದು ಹೊರಬಿದ್ದಿದ್ದು, ವರದಿಯ ಪ್ರಕಾರ ಈ ಬಾರಿಯ ಐಪಿಎಲ್ ಒಂದು ವಾರ ತಡವಾಗಿ ಪ್ರಾರಂಭವಾಗಲಿದೆ ಎಂದು ತಿಳಿದುಬಂದಿದೆ.
ಈ ಹಿಂದೆ ಮಾರ್ಚ್ 23 ರಿಂದ ಐಪಿಎಲ್ ಆರಂಭವಾಗಲಿದೆ ಎಂದು ಹೇಳಲಾಗಿತ್ತು. ಆದರೆ ಮಹಿಳಾ ಐಪಿಎಲ್ ಆರಂಭಿಸಲೂ ಬಿಸಿಸಿಐ (BCCI) ಮುಂದಾಗಿದೆ. ಇದರ ಅಂಗವಾಗಿ ಮುಂದಿನ ವರ್ಷದ ಮಾರ್ಚ್‌ನಲ್ಲಿ ಮಹಿಳಾ ಐಪಿಎಲ್ ನಡೆಯಲಿದೆ. ವರದಿಗಳ ಪ್ರಕಾರ, ಮಹಿಳಾ ಐಪಿಎಲ್‌ನ (Women’s IPL) ಮೊದಲ ಆವೃತ್ತಿಯೂ ಮಾರ್ಚ್ 3 ರಿಂದ ಪ್ರಾರಂಭವಾಗಲಿದ್ದು, ಮಾರ್ಚ್ 26 ರವರೆಗೆ ನಡೆಯಲಿದೆ. ಇದರಿಂದಾಗಿ ಪುರುಷರ ಐಪಿಎಲ್ 16ನೇ ಆವೃತ್ತಿ ಕೊಂಚ ತಡವಾಗಿ ಆರಂಭವಾಗಲಿದೆ ಎನ್ನಲಾಗಿದೆ. ಅದರಂತೆ ಎಪ್ರಿಲ್ 1 ರಿಂದ ಟೂರ್ನಿಗೆ ಚಾಲನೆ ಸಿಗುವ ಸಾಧ್ಯತೆ ಇದೆ.
ಈಗಾಗಲೇ ಐಪಿಎಲ್ 2023ರ ಮಿನಿ ಹರಾಜಿಗಾಗಿ ಒಟ್ಟು 991 ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ 714 ಭಾರತೀಯ ಆಟಗಾರರು ಮತ್ತು 277 ವಿದೇಶಿ ಆಟಗಾರರು ಸೇರಿದ್ದಾರೆ. ಇನ್ನು 21 ಆಟಗಾರರು 2 ಕೋ.ರೂ. ಮೂಲ ಬೆಲೆಯಲ್ಲಿ ತಮ್ಮ ಹೆಸರನ್ನು ನೊಂದಣಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ | Women’s IPL | ಮಹಿಳೆಯರ ಐಪಿಎಲ್ ನೇರ ಪ್ರಸಾರ ಹಕ್ಕು ವಿತರಣೆ ಟೆಂಡರ್ ಕರೆದ ಬಿಸಿಸಿಐ