Site icon Vistara News

IPL 2023: ಆರ್​ಸಿಬಿ ಬಗ್ಗೆ ಭಾವನಾತ್ಮಕ ಸಂದೇಶ ಬರೆದ ಎಬಿ ಡಿ ವಿಲಿಯರ್ಸ್​

IPL 2023: AB de Villiers wrote an emotional message about RCB

IPL 2023: AB de Villiers wrote an emotional message about RCB

ಬೆಂಗಳೂರು: ಐಪಿಎಲ್​ನ(IPL 2023) ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಮಾಜಿ ಆಟಗಾರ, ಮಿಸ್ಟರ್​ 360 ಡಿಗ್ರಿ ಖ್ಯಾತಿಯ ಎಬಿ ಡಿ ವಿಲಿಯರ್ಸ್(AB de Villiers)​ ಅವರು ಆರ್​ಸಿಬಿ ಅಭಿಮಾನಿಗಳಿಗಾಗಿ ಭಾವನಾತ್ಮಕ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ.​ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಮ್ಮ ಡ್ರೆಸ್ಸಿಂಗ್​ ರೂಮಿನ ಬಾಲ್ಕನಿಯತ್ತ ಹೆಜ್ಜೆ ಹಾಕಿದಾಗ ನನ್ನ ಕಣ್ಣಂಚಿನಲ್ಲಿ ನೀರು ಜಿನುಗಿತು. ಪ್ರತಿ ಸಲ ಎಬಿಡಿ, ಎಬಿಡಿ ಎಂಬ ಅಭಿಮಾನಿಗಳ ಕೂಗು ನಮ್ಮನ್ನು ಗೆಲುವಿಗಾಗಿ ಹುರಿದುಂಬಿಸುತ್ತಿತ್ತು. ಆದರೆ ಈ ಬಾರಿಯ ಕೂಗಿನಲ್ಲಿ ಬೇರೆಯದ್ದೇ ಭಾವನೆ ಇತ್ತು. ನನಗೆ ಸಹಕಾರ ನೀಡಿದ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.

ಕಳೆದ ಭಾನುವಾರ(ಮಾರ್ಚ್​ 26)ದಂದು ಆರ್​ಸಿಬಿ ಪ್ರಾಂಚೈಸಿಯು “ಅನ್​ಬಾಕ್ಸ್​ ಆರ್‌ಸಿಬಿ” ಎಂಬ ಕಾರ್ಯಕ್ರಮ ನಡೆಸಿತ್ತು. ಈ ಕಾರ್ಯಕ್ರಮದಲ್ಲಿ ಆರ್​ಸಿಬಿಯ ಮಾಜಿ ಆಟಗಾರಾದ ವೆಸ್ಟ್ ಇಂಡೀಸ್ ಕ್ರಿಸ್ ಗೇಲ್ ಮತ್ತು ಎಬಿ ಡಿವಿಲಿಯರ್ಸ್​ಗೆ ಹಾಲ್ ಆಫ್ ಫೇಮ್‌ ಗೌರವ ಸೂಚಿಸಲಾಗಿತ್ತು. ಉಭಯ ಆಟಗಾರರು ಆರ್​ಸಿಬಿ ತಂಡಕ್ಕೆ ನೀಡಿದ ಕೊಡುಗೆಗೆ ಗೌರವವಾಗಿ ಆರ್​ಸಿಬಿ ಫ್ರಾಂಚೈಸಿಯು ಡಿ ವಿಲಿಯರ್ಸ್ ಅವರ ಜೆರ್ಸಿ ಸಂಖ್ಯೆ 17 ಮತ್ತು ಕ್ರಿಸ್​ ಗೇಲ್ ಅವರ ಜೆರ್ಸಿ ಸಂಖ್ಯೆ 333ರನ್ನು ಹಾಲ್ ಆಫ್ ಫೇಮ್‌(Hall of Fame) ಸೇರ್ಪಡೆಗೊಳಿಸಿ ನಿವೃತ್ತಿ ಘೋಷಿಸಿತ್ತು.

ಹಾಲ್ ಆಫ್ ಫೇಮ್‌ ಸೇರ್ಪಡೆಗೊಂಡ ಬಳಿಕ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಸಂದೇಶವೊಂದನ್ನು ಎಬಿಡಿ ಪೋಸ್ಟ್ ಮಾಡಿದ್ದಾರೆ. ಈ ಸಂದೇಶದಲ್ಲಿ ಆರ್​ಸಿಬಿ ತಂಡ ಮತ್ತು ತಮ್ಮ ಜರ್ಸಿ ಸಂಖ್ಯೆಯನ್ನು ನಿವೃತ್ತಿಗೊಳಿಸಿದ್ದಕ್ಕಾಗಿ ಫ್ರಾಂಚೈಸಿಗೆ ಧನ್ಯವಾದ ಅರ್ಪಿಸಿದ್ದಾರೆ. ಜತೆಗೆ ಅವರು ಆರ್​ಸಿಬಿಯಲ್ಲಿ ಕಳೆದ ದಿನಗಳ ಬಗ್ಗೆಯೂ ತಿಳಿಸಿದ್ದಾರೆ.

ಇದನ್ನೂ ಓದಿ IPL 2023: ಕೋವಿಡ್​ ಮಾರ್ಗಸೂಚಿ ಪಾಲನೆ ಕಡ್ಡಾಯ; ಐಪಿಎಲ್​ ಫ್ರಾಂಚೈಸಿಗಳಿಗೆ ಬಿಸಿಸಿಐ ಆದೇಶ

“ಆರ್​ಸಿಬಿ ಹಾಲ್‌ ಆಫ್‌ ಫೇಮ್‌ಗೆ ಸೇರ್ಪಡೆಗೊಂಡಾಗ ನನ್ನ ಹೃದಯ ತುಂಬಿ ಬಂದಿತು. ನಾನು ಮತ್ತು ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ಆರ್​ಸಿಬಿ ವೇದಿಕೆ​ಯ ಮೆಟ್ಟಿಲುಗಳ ಮೇಲೆ ಈ ಬಾರಿ ನಡೆದಾಗ ಬೇರೆಯೇ ಅನುಭವವಾಯಿತು. 2003 ರಿಂದ ನಾನು ಭಾರತದಲ್ಲಿ ಕಳೆದ ದಿನಗಳ ಕುರಿತು ಯೋಚಿಸುತ್ತಿದ್ದಾಗ ಹಲವು ಮರೆಯಲಾರದ ನೆನಪುಗಳು ಕಣ್ಣಮುಂದೆ ಹಾದುಹೋದವು. ನಾನು ಈ ದೇಶ ಮತ್ತು ಜನರೊಂದಿಗೆ ಆಳವಾದ ಸಂಪರ್ಕ, ಸಂಬಂಧ ಹೊಂದಿದ್ದೇನೆ. ಇದಕ್ಕಾಗಿ ತಂಡದ ಸಹ ಆಟಗಾರರಿಗೆ ಹಾಗೂ ವಿಶೇಷವಾಗಿ ವಿರಾಟ್(Virat Kohli), ಆರ್‌ಸಿಬಿ ಅಭಿಮಾನಿಗಳಿಗೆ ಧನ್ಯವಾದಗಳು” ಎಂದು ಎಬಿಡಿ ಭಾವನಾತ್ಮಕ ಸಂದೇಶವನ್ನು ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Exit mobile version