ಮುಂಬಯಿ: ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ವಿರುದ್ಧ ಶನಿವಾರ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್(Mumbai Indians) 7 ವಿಕೆಟ್ಗಳ ಸೋಲಿಗೆ ತುತ್ತಾಗಿದೆ. ಇದರೊಂದಿಗೆ ಹಾಲಿ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಆಡಿದ ಎರಡೂ ಪಂದ್ಯಗಳಲ್ಲಿ ಸೋಲು ಕಂಡಿತು. ಇದೀಗ ಈ ಸೋಲಿಗೆ ಬ್ಯಾಟಿಂಗ್ ವೈಫಲ್ಯವೇ ಪ್ರಮುಖ ಕಾರಣ ಎಂದು ತಂಡದ ಬ್ಯಾಟಿಂಗ್ ಕೋಚ್ ಮಾರ್ಕ್ ಬೌಷರ್ ಹೇಳಿದ್ದಾರೆ.
ಮುಂಬಯಿಯ ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಶನಿವಾರದ ಐಪಿಎಲ್ನ(IPL 2023) ಡಬಲ್ ಹೆಡರ್ನ ದ್ವಿತೀಯ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ಇಂಡಿಯನ್ಸ್ ನಾಟಕೀಯ ಕುಸಿತ ಕಂಡು 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ 18.1 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 159 ರನ್ ಬಾರಿಸಿ ಗೆಲುವು ದಾಖಲಿಸಿತು.
ಮೊದಲು ಇನಿಂಗ್ಸ್ ಆರಂಭಿಸಿ ಮುಂಬೈಗೆ ನಾಯಕ ರೋಹಿತ್ ಮತ್ತು ಇಶಾನ್ ಕಿಶನ್ ಉತ್ತಮ ಆರಂಭ ಒದಗಿಸಿದರು. ಮೂರು ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಮೂವತ್ತು ರನ್ ಬಾರಿಸಿದ ಈ ಜೋಡಿ ಅಪಾಯಕಾರಿಯಾಗುವ ಸೂಚನೆ ನೀಡಿತು. ರೋಹಿತ್ ಮತ್ತು ಇಶಾನ್ ಕಿಶನ್ ಕ್ರೀಸ್ನಲ್ಲಿ ಬೇರೂರಿ ನಿಂತಾಗ ಈ ಪಂದ್ಯದಲ್ಲಿಯೂ ಚೆನ್ನೈ ಬೌಲರ್ಗಳು ಹಳಿ ತಪ್ಪಿದಂತೆ ಕಂಡುಬಂತು. ಆದರೆ ತುಷಾರ್ ದೇಶ್ಪಾಂಡೆ ನಾಯಕ ರೋಹಿತ್ ಶರ್ಮ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಚೆನ್ನೈಗೆ ಅರ್ಲಿ ಬ್ರೇಕ್ ನೀಡಿದರು. ರೋಹಿತ್ 21 ರನ್ ಬಾರಿಸಿದರು. ಈ ವಿಕೆಟ್ ಪತನದ ಬಳಿಕ ಆಡಲಿಳಿದ ಕ್ಯಾಮರೂನ್ ಗ್ರೀನ್ ಅವರು ಇಶಾನ್ ಕಿಶನ್ ಜತೆಗೂಡಿ ಇನಿಂಗ್ಸ್ ಬೆಳೆಸುವ ಯೋಜನೆಯಲ್ಲಿದ್ದರು. ಆದರೆ ಕಿಶನ್ ಕೂಡ ವಿಕೆಟ್ ಕೈಚೆಲ್ಲಿದರು. ಅವರ ಗಳಿಕೆ 32. ಇದರಲ್ಲಿ 5 ಬೌಂಡರಿ ಸಿಡಿಯಿತು.
ಆರಂಭಿಕರಿಬ್ಬರ ವಿಕೆಟ್ ಪತನದ ಬಳಿಕ ಚೆನ್ನೈ ಬೌಲರ್ಗಳು ಪಂದ್ಯದಲ್ಲಿ ಸಂಪೂರ್ಣ ಹಿಡಿತ ಸಾಧಿಸಿದರು. ಇವರ ಬೌಲಿಂಗ್ ಆಕ್ರಮಣಕ್ಕೆ ನಲುಗಿದ ಮುಂಬೈ ಯಾವ ಹಂತದಲ್ಲೂ ಚೇತರಿಕೆಯ ಲಕ್ಷಣ ತೋರಲಿಲ್ಲ. ಒಂದೊಂದು ರನ್ನಿಗೂ ಅದು ಪರದಾಟ ನಡೆಸಿತು.
ಇದನ್ನೂ ಓದಿ IPL 2023: ಕೆಕೆಆರ್-ಗುಜರಾತ್ ಟೈಟಾನ್ಸ್ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
ಸೋಲಿನ ಬಳಿಕ ಮಾತನಾಡಿದ ತಂಡದ ಬ್ಯಾಟಿಂಗ್ ಕೋಚ್ ಮಾರ್ಕ್ ಬೌಷರ್, ‘ಪವರ್‌ಪ್ಲೇನಲ್ಲಿ ತಂಡ ಉತ್ತಮ ಬ್ಯಾಟಿಂಗ್ ನಡೆಸುವ ಮೂಲಕ ಉತ್ತಮ ಆರಂಭವನ್ನು ಪಡೆದೆವು. ಆದರೆ ಅದಾದ ಬಳಿಕ ನಾವು ನಾಟಕೀಯ ಕುಸಿತ ಕಂಡೆವು. ಯಾವ ಹಂತದಲ್ಲಿಯೂ ಉತ್ತಮ ಜತೆಯಾಟ ನೆಡೆಸಲು ಸಾಧ್ಯವಾಗಲಿಲ್ಲ. ಈ ಕಾರಣದಿಂದಾಗಿ ನಮಗೆ ಸುಮಾರು 30-40 ರನ್‌ಗಳನ್ನು ಕಡಿಮೆಯಾದವು ಇದೇ ಸೋಲಿಗೆ ಮುಖ್ಯ ಕಾರಣ’ ಎಂದು ಹೇಳಿದರು.
ಇದನ್ನೂ ಓದಿ IPL 2023: ಗೆಲುವಿನ ಹುಡುಕಾಟದಲ್ಲಿ ಸನ್ರೈಸರ್ಸ್ ಹೈದರಾಬಾದ್
“ಮೊದಲ ಪಂದ್ಯಕ್ಕೆ ಹೋಲಿಸಿದರೆ ನಮ್ಮ ತಂಡದ ಬೌಲರ್ಗಳು ಈ ಪಂದ್ಯದಲ್ಲಿ ಉತ್ತಮ ನಿರ್ವಹಣೆ ತೋರಿದ್ದಾರೆ. ಕಡಿಮೆ ಮೊತ್ತವನ್ನು ಉಳಿಸಿಕೊಳ್ಳುವ ಪ್ರಯತ್ನ ಹಾಗೂ ಎದುರಾಳಿ ತಂಡದ ಮೇಲೆ ಹಾಕಿರುವ ಒತ್ತಡ ಇದನ್ನು ಗಮನಿಸುವಾಗ ಬೌಲಿಂಗ್ ಸುಧಾರಣೆಯಾದಂತೆ ಕಾಣುತ್ತಿದೆ. ಆದರೆ ಬ್ಯಾಟಿಂಗ್ ಮಾತ್ರ ಮೊದಲ ಪಂದ್ಯದಕ್ಕಿಂತಲೂ ತೀರಾ ಕಳಪೆ ಮಟ್ಟದಿಂದ ಕೂಡಿತ್ತು. ಮುಂದಿನ ಪಂದ್ಯದಲ್ಲಿ ಬ್ಯಾಟಿಂಗ್ ಸುಧಾರಣೆ ಕಾಣದೇ ಹೋದರೆ ಗೆಲುವು ಸಾಧಿಸುವುದು ಕಷ್ಟಸಾಧ್ಯ’ ಎಂದು ಆಟಗಾರರರಿಗೆ ಎಚ್ಚರಿಕೆ ನೀಡಿದ್ದಾರೆ.