ಚೆನ್ನೈ: ರಾಜಸ್ಥಾನ್ ರಾಯಲ್ಸ್ ವಿರುದ್ಧ ಬುಧವಾರ ತವರಿನಂಗಳದಲ್ಲಿ ನಡೆದ ಐಪಿಎಲ್ನ 17ನೇ(IPL 2023) ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೂರು ರನ್ ಅಂತರದಿಂದ ಸೋಲು ಕಂಡಿತು. ಈ ಸೋಲಿಗೆ ನಾಯಕ ಧೋನಿ ಮಹತ್ವದ ಕಾರಣ ತಿಳಿಸಿದ್ದಾರೆ. ಜತೆಗೆ ಎಚ್ಚರಿಕೆಯ ಸಂದೇಶವೊಂದನ್ನು ನೀಡಿದ್ದಾರೆ.
ಚೆನ್ನೈಯ ಚೆಪಾಕ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ರೋಚಕ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ರಾಜಸ್ಥಾನ್ ನಿಗದಿತ 20 ಓವರ್ಗಲ್ಲಿ 7 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ತನ್ನ ಪಾಲಿನ ಓವರ್ನಲ್ಲಿ 6 ವಿಕೆಟ್ ನಷ್ಟಕ್ಕೆ 172 ರನ್ ಬಾರಿಸಿ ಕೇವಲ ಮೂರು ರನ್ ಅಂತರದಿಂದ ಸೋಲು ಕಂಡಿತು.
ಪಂದ್ಯದ ಬಳಿಕ ಮಾತನಾಡಿದ ಧೋನಿ, ನಮ್ಮ ತಂಡದ ಬ್ಯಾಟಿಂಗ್ ಇನಿಂಗ್ಸ್ ವೇಳೆ ಮಧ್ಯಮ ಕ್ರಮಾಂಕದ ಆಟಗಾರರು ಸ್ಟ್ರೈಕ್ ರೊಟೇಶನ್ ಮಾಡುವಲ್ಲಿ ವಿಫಲರಾದರು. ಸ್ಟ್ರೈಕ್ ರೊಟೇಶನ್ ಮಾಡಲು ಯಾವುದೇ ಕಷ್ಟ ಇರಲಿಲ್ಲ. ಅಂತಿಮವಾಗಿ ಸೋಲಿನ ಹೊಣೆಯನ್ನು ಬ್ಯಾಟ್ಸ್‌ಮನ್‌ಗಳು ಹೊರಬೇಕು ಎಂದು ಧೋನಿ ಹೇಳಿದರು.
“ಮಧ್ಯಮ ಕ್ರಮಾಂಕದಲ್ಲಿ ರನ್ ಬಾರದ ಕಾರಣ, ನನಗೆ ಮತ್ತು ರವೀಂದ್ರ ಜಡೇಜಾಗೆ ಕೊನೆಯಲ್ಲಿ ಒತ್ತಡದಲ್ಲಿ ಆಡುವ ಪರಿಸ್ಥಿತಿ ಎದುರಾಯಿತು. ಒಂದೊಮ್ಮೆ ಮಧ್ಯಮ ಕ್ರಮಾಂಕದ ಬ್ಯಾಟರ್ಗಳು 10 ರನ್ ಗಳಿಸುತ್ತಿದ್ದರೂ ಪಂದ್ಯ ಗೆಲ್ಲುವ ಎಲ್ಲ ಸಾಧ್ಯತೆ ಇತ್ತು” ಎಂದು ಧೋನಿ ಹೇಳಿದರು. ಇದರೆ ಜತೆಗೆ ಎಚ್ಚರಿಕೆಯೊಂದನ್ನು ಧೋನಿ ನೀಡಿದ್ದಾರೆ. ಬ್ಯಾಟಿಂಗ್ ಮಾಡುವಾಗ ಬೌಲರ್ ಏನು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬುದನ್ನು ನೋಡಿ. ಬೌಲರ್ ತಪ್ಪು ಮಾಡುವವರೆಗೆ ಕಾಯಿರಿ, ಆಗ ದೊಡ್ಡ ಹೊಡೆತಗಳಿಗೆ ಮುಂದಾಗಿ, ಇಷ್ಟು ತಾಳ್ಮೆ ಇಲ್ಲದಿದ್ದರೆ ಆಡಲು ಕಷ್ಟಸಾಧ್ಯ. ಎಲ್ಲ ಎಸೆತಕ್ಕೂ ದೊಡ್ಡ ಹೊಡೆತ ಬಾರಿಸಲು ಮುಂದಾಗುವುದು ಮೂರ್ಖತನ ಎಂದು ಹೇಳಿದರು.
ಇದನ್ನೂ ಓದಿ IPL 2023: ಧೋನಿ ಮೊಣಕಾಲಿನ ಗಾಯದಿಂದ ಬಳಲುತ್ತಿದ್ದಾರೆ; ಕೋಚ್ ಸ್ಟೀಫನ್ ಫ್ಲೆಮಿಂಗ್ ಮಾಹಿತಿ
3 ರನ್ ಸೋಲು ಕಂಡ ಚೆನ್ನೈ
ದೊಡ್ಡ ಮೊತ್ತವನ್ನು ಬೆನ್ನಟ್ಟಿದ ಚೆನ್ನೈ ಒಂದು ಹಂತದ ವರೆಗೆ ಉತ್ತಮ ಸ್ಥಿತಿಯಲ್ಲಿತ್ತು. ಆ ಬಳಿಕ ನಾಟಕೀಯ ಕುಸಿತ ಕಂಡಿತು. ಈ ವೇಳೆ ನಾಯಕ ಧೋನಿ ಮತ್ತು ಜಡೇಜಾ ಕಡೇಯ ಮೂರು ಓವರ್ಗಳಲ್ಲಿ ಹೋರಾಟ ನಡೆಸಿ ತಂಡಕ್ಕೆ ಗೆಲುವು ತಂದು ಕೊಡುವ ಎಲ್ಲ ಪ್ರಯತ್ನಗಳನ್ನು ಮಾಡಿದರು. ಶಕ್ತಿ ಮೀರಿ ಬ್ಯಾಟಿಂಗ್ ನಡೆಸಿದ ಧೋನಿ ಮತ್ತು ಜಡೇಜಾ ರಾಜಸ್ಥಾನ್ ಬೌಲರ್ಗಳಿಗೆ ಬೆಂಡೆತ್ತಿದರು. ಅಂತಿಮ 12 ಎಸೆತಗಳಲ್ಲಿ 40 ರನ್ ಬಾರಿಸುವ ಸಾವಲನ್ನು ಸಿಕ್ಸರ್ ಮತ್ತು ಬೌಂಡರಿಗಳ ಮೂಲಕ ಚೆನ್ನೈ ಮೀರಿ ನಿಲ್ಲುವ ಎಲ್ಲ ಸಾಧ್ಯತೆ ಇತ್ತು.
ಸಂದೀಪ್ ಶರ್ಮ ಎಸೆದ ಕೊನೆಯ ಓವರ್ನಲ್ಲಿ ಧೋನಿ ಸತತ ಸಿಕ್ಸರ್ ಬಾರಿಸಿದಾಗ ಚೆನ್ನೈ ಪಾಳಯದಲ್ಲಿ ಗೆಲುವಿನ ವಿಶ್ವಾಸ ಮೂಡಿತು. ಅಂತಿಮ ಎಸೆತದಲ್ಲಿ ಗೆಲುವಿಗೆ 5 ರನ್ ಅವಶ್ಯಕತೆ ಇತ್ತು. ಈ ವೇಳೆ ಧೋನಿ ಸ್ಟ್ರೈಕ್ನಲ್ಲಿದ್ದರು. ಧೋನಿ ತಮ್ಮ ಎಂದಿನ ಶೈಲಿಯಂತೆ ಈ ಪಂದ್ಯವನ್ನು ಸಿಕ್ಸರ್ ಮೂಲಕ ಫಿನಿಶ್ ಮಾಡುತ್ತಾರೆ ಎಂದು ಎಲ್ಲರು ತುದಿಗಾಲಲ್ಲಿ ನಿಂತಿದ್ದರು. ಆದರೆ ಸಂದೀಪ್ ಶರ್ಮ ಸ್ಲೋ ಯಾರ್ಕರ್ ಎಸೆದು ರಾಜಸ್ಥಾನಕ್ಕೆ ರೋಚಕ ಗೆಲುವು ತಂದು ಕೊಟ್ಟರು. ಧೋನಿ ಸಿಕ್ಸರ್ ಬಾರಿಸುವಲ್ಲಿ ವಿಫಲರಾದರು. ರಾಜಸ್ಥಾನ್ ವೀರೋಚಿತ 3 ರನ್ ಗೆಲುವು ಸಾಧಿಸಿತು.