ಚೆನ್ನೈ: ಒಂದೆಡೆ ಹಿರಿಯ ಅನುಭವಿಗಳಿಂದಲೇ ಕೂಡಿದ ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ಇನ್ನೊಂದೆಡೆ ಯುವಕರನ್ನೇ ನೆಚ್ಚಿಕೊಂಡಿರುವ ರಾಜಸ್ಥಾನ್ ರಾಯಲ್ಸ್(Rajasthan Royals) ಬುಧವಾರದ ಐಪಿಎಲ್(IPL 2023) ಪಂದ್ಯದಲ್ಲಿ ಸೆಣಸಾಟ ನಡೆಸಲಿವೆ. ಉಭಯ ತಂಡಗಳು ಬ್ಯಾಟಿಂಗ್ ವಿಭಾಗದಲ್ಲಿ ಬಲಿಷ್ಠವಾಗಿದೆ. ಹೀಗಾಗಿ ಈ ಪಂದ್ಯದಲ್ಲಿ ದೊಡ್ಡ ಮೊತ್ತದ ನಿರೀಕ್ಷೆ ಇರಿಸಬಹುದು.
ಸತತ ಎರಡು ಗೆಲುವು ದಾಖಲಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ಈ ಪಂದ್ಯದಲ್ಲಿಯೂ ಮೇಲುಗೈ ಸಾಧಿಸುವ ಆತ್ಮವಿಶ್ವಾಸದಲ್ಲಿದೆ. ಜತೆಗೆ ಇದು ಚೆನ್ನೈಗೆ ತವರಿನ ಪಂದ್ಯವೂ ಆಗಿದೆ. ಆದರೆ ರಾಜಸ್ಥಾನ್ ಸವಾಲು ಅಷ್ಟೂ ಸುಲಭವಲ್ಲ ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ರಾಜಸ್ಥಾನ್ ಸಮರ್ಥವಾಗಿದೆ. 150ರ ಸಾಮಾನ್ಯ ಮೊತ್ತವನ್ನು ಹಿಡಿದು ನಿಲ್ಲಿಸುವಂತ ಸಾಮರ್ಥ್ಯ ಸಂಜು ಸ್ಯಾಮ್ಸನ್ ಪಾಳಯದಲ್ಲಿದೆ.
ಚೆನ್ನೈ ಕಳೆದ ಮುಂಬೈ ವಿರುದ್ಧದ ಪಂದ್ಯದಲ್ಲಿ ಅಜಿಂಕ್ಯ ರಹಾನೆ ಅವರನ್ನು ಕಣಕ್ಕಿಳಿಸಿ ಯಶಸ್ಸು ಕಂಡಿತ್ತು. ಈ ಬಾರಿಯೂ ಅವರು ಆಡುವ ಸಾಧ್ಯತೆ ಹೆಚ್ಚಿದೆ. ಆದರೆ ತಂಡದ ನಂಬಿಕಾರ್ಹ ಆಟಗಾರ ಡೆವೋನ್ ಕಾನ್ವೆ ಕಳೆದ ಕೆಲ ಪಂದ್ಯಗಳಿಂದ ಬ್ಯಾಟಿಂಗ್ ಫಾರ್ಮ್ ಕಳೆದುಕೊಂಡಿರುವುದು ತಂಡಕ್ಕೆ ಚಿಂತೆಗೀಡು ಮಾಡಿದೆ.
ಲಂಕಾದ ಸ್ಪಿನ್ನರ್ ಮಹೀಶ್ ತೀಕ್ಷಣ ಚೆನ್ನೈ ಬಳಗ ಸೇರಿದ್ದಾರೆ. ಹೀಗಾಗಿ ಅವರು ಈ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಒಂದೊಮ್ಮೆ ಇವರು ಆಡುವ ಅವಕಾಶ ಪಡೆದರೆ ಮಿಚೆಲ್ ಸ್ಯಾಂಟ್ನರ್ ಈ ಪಂದ್ಯದಿಂದ ಹೊರಗುಳಿಯ ಬೇಕಾದಿತು. ಚೆಪಾಕ್ ಮೈದಾನ ಸ್ಪಿನ್ ಟ್ರ್ಯಾಕ್ ಆದ ಕಾರಣ ಧೋನಿ ವೇಗಿಗಳ ಬದಲು ಹೆಚ್ಚಾಗಿ ಸ್ಪಿನ್ ಬೌಲಿಂಗ್ಗೆ ಮಹತ್ವ ಕೊಡುವ ಸಾಧ್ಯತೆ ಅಧಿಕ. ಕಳೆದ ಲಕ್ನೋ ವಿರುದ್ಧದ ಪಂದ್ಯದಲ್ಲಿ ಸೋಲುವ ಸ್ಥಿತಿಯಲ್ಲಿದ್ದ ಪಂದ್ಯವನ್ನು ಧೋನಿ ಸ್ಪಿನ್ ಅಸ್ತ್ರದ ಮೂಲಕ ಉಳಿಸಿಕೊಂಡಿದ್ದರು.
ಇದನ್ನೂ ಓದಿ IPL 2023: ಚೆನ್ನೈ ತಂಡವನ್ನು ಬ್ಯಾನ್ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ ಶಾಸಕ ವೆಂಕಟೇಶ್ವರನ್
ರಾಜಸ್ಥಾನ್ ಸಮರ್ಥ ತಂಡ
ರಾಜಸ್ಥಾನ್ ರಾಯಲ್ಸ್ ಅತ್ಯಂತ ಸಮರ್ಥವಾಗಿದೆ. ಬ್ಯಾಟಿಂಗ್, ಬೌಲಿಂಗ್ ಎರಡೂ ವಿಭಾಗದಲ್ಲಿಯೂ ಬಲಿಷ್ಠವಾಗಿದೆ. ಆರಂಭಿಕರಾದ ಯಶಸ್ವಿ ಜೈಸ್ವಾಲ್, ಜಾಸ್ ಬಟ್ಲರ್, ಸಂಜು ಸ್ಯಾಮ್ಸನ್ ಮತ್ತು ಶಿಮ್ರನ್ ಹೆಟ್‌ಮೈರ್ ಪ್ರಚಂಡ ಬ್ಯಾಟಿಂಗ್ ಫಾರ್ಮ್ನಲ್ಲಿದ್ದಾರೆ. ಬೌಲಿಂಗ್ನಲ್ಲಿ ಅನುಭವಿ ಟ್ರೆಂಟ್ ಬೌಲ್ಟ್, ಜೇಸನ್ ಹೋಲ್ಡರ್, ಯಜುವೇಂದ್ರ ಚಹಲ್, ಆರ್.ಅಶ್ವಿನ್ ಕೂಡ ಉತ್ತಮ ಲಯದಲ್ಲಿದ್ದಾರೆ. ಆದರೆ ಧೋನಿಯ ಮಾಸ್ಟರ್ ಗೇಮ್ ಮುಂದೆ ಇವರ ಆಟ ನಡೆದದೀತೇ ಎಂಬುದು ಈ ಪಂದ್ಯದ ಕುತೂಹಲ.
ಸಂಭಾವ್ಯ ತಂಡಗಳು
ಚೆನ್ನೈ ಸೂಪರ್ ಕಿಂಗ್ಸ್: ಋತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೆ, ಅಜಿಂಕ್ಯ ರಹಾನೆ, ಮೊಹಮ್ಮದ್ ಅಲಿ, ರವೀಂದ್ರ ಜಡೇಜಾ, ಶಿವಂ ದುಬೆ, ಮಿಚೆಲ್ ಸ್ಯಾಂಟ್ನರ್/ ಮಹೀಶ್ ತೀಕ್ಷಣ, ಸಿಸಂಡ ಮಗಾಲ, ಎಂ.ಎಸ್ ಧೋನಿ(ನಾಯಕ), ಎಸ್ ಹಂಗರ್ಗೇಕರ್, ತುಷಾರ್ ದೇಶಪಾಂಡೆ.
ರಾಜಸ್ಥಾನ್ ರಾಯಲ್ಸ್: ಯಶಸ್ವಿ ಜೈಸ್ವಾಲ್, ಜಾಸ್ ಬಟ್ಲರ್, ಸಂಜು ಸ್ಯಾಮ್ಸನ್, ರಿಯಾನ್ ಪರಾಗ್, ಶಿಮ್ರಾನ್ ಹೆಟ್ಮೆಯರ್, ರವಿಚಂದ್ರನ್ ಅಶ್ವಿನ್, ಜೇಸನ್ ಹೋಲ್ಡರ್, ಡಿ.ಸಿ ಜುರೆಲ್, ಟ್ರೆಂಟ್ ಬೌಲ್ಟ್, ಯಜುವೇಂದ್ರ ಚಾಹಲ್, ಸಂದೀಪ್ ಶರ್ಮಾ.