ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಈ ಬಾರಿಯ ಐಪಿಎಲ್(IPL 2023) ಬಳಿಕ ವಿದಾಯ ಹೇಳುವುದು ಖಚಿತ ಎಂದು ಫ್ರಾಂಚೈಸಿ ತಿಳಿಸಿದೆ. ಮೇ 14 ರಂದು ಚೆಪಾಕ್ನಲ್ಲಿ ನಡೆಯಲಿರುವ ಪಂದ್ಯದ ಮೂಲಕ ಧೋನಿ ಐಪಿಎಲ್ಗೆ ಗುಡ್ಬೈ (ms dhoni farewell)ಹೇಳಲಿದ್ದಾರೆ ಎಂದು ಇನ್ಸೈಡ್ ಸ್ಪೋರ್ಟ್ಸ್ ವರದಿ ಮಾಡಿದೆ.
ಮೆ.14 ರಂದು ಕೆಕೆಆರ್ ವಿರುದ್ಧದ ಪಂದ್ಯವು ಸಿಎಸ್ಕೆ ಪರ ಧೋನಿಯ ಕೊನೆಯ ಪಂದ್ಯವಾಗಿರಲಿದೆ ಎಂದು ಫ್ರಾಂಚೈಸಿ ತಿಳಿಸಿರುವುದಾಗಿ ಇನ್ಸೈಡ್ ಸ್ಪೋರ್ಟ್ಸ್ ತಿಳಿಸಿದೆ. ಈಗಾಗಲೇ ಧೋನಿ ಅವರ ವಿದಾಯಕ್ಕೆ ಚೆನ್ನೈ ತಂಡ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿದ್ದು ಅದರಂತೆ ಮೇ.14ಕ್ಕೆ ಧೋನಿ ವಿದಾಯ ಪಂದ್ಯ ಆಡಲಿದ್ದಾರೆ ಎಂದು ತಂಡದ ಮೂಲವೊಂದು ತಿಳಿಸಿರುವುದಾಗಿ ವರದಿಯಾಗಿದೆ.
ಮಾರ್ಚ್ 31 ರಿಂದ ಆರಂಭವಾಗಲಿರುವ 16ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತನ್ನ ಅಭಿಯಾನವನ್ನು ಆರಂಭಿಸಲಿದೆ. ಸಿಎಸ್ಕೆ ತಂಡದ ಕೊನೆಯ ಲೀಗ್ ಪಂದ್ಯ ನಡೆಯಲಿರುವುದು ಮೇ 20 ರಂದು. ಆದರೆ ಅದಕ್ಕೂ ಮುನ್ನ ಮೇ 14 ರಂದು ಚೆನ್ನೈನ ಚೆಪಾಕ್ ಮೈದಾನದಲ್ಲಿ ಸಿಎಸ್ಕೆ ಹಾಗೂ ಕೆಕೆಆರ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯವೇ ಧೋನಿಯ ಕೊನೆಯ ಪಂದ್ಯ ಆಗಿರಲಿದೆ ಎಂದು ಚೆನ್ನೈ ಫ್ರಾಂಚೈಸಿ ಮೂಲಗಳು ತಿಳಿಸಿವೆ.
ಇನ್ನೊಂದೆಡೆ ಸಿಎಸ್ಕೆ ತಂಡವು ಕೊನೆಯ ಎರಡು ಪಂದ್ಯಗಳಿಗೂ ಮುಂಚಿತವಾಗಿ ಪ್ಲೇಆಫ್ ಪ್ರವೇಶಿಸಿದರೆ, ಮೇ 14 ರಂದು ಧೋನಿ ವಿದಾಯ ಪಂದ್ಯವಾಡುವುದಿಲ್ಲ. ಬದಲಾಗಿ ಸಿಎಸ್ಕೆ ತಂಡದ ಪ್ಲೇಆಫ್ ಪಂದ್ಯವು ಚೆನ್ನೈನಲ್ಲೇ ನಡೆಯಲಿದೆ. ಈ ಪಂದ್ಯದಲ್ಲಿ ಅವರು ಆಡಿದ ಬಳಿಕ ತಮ್ಮ ವಿದಾಯವನ್ನು ಪ್ರಕಟಿಸಲಿದ್ದಾರೆ ಎಂದು ತಿಳಿದು ಬಂದಿದೆ. ಒಟ್ಟಿನಲ್ಲಿ ಐಪಿಎಲ್ ಸೀಸನ್ 16 ಮೂಲಕ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಬದುಕಿಗೆ ವಿದಾಯ ಹೇಳುವುದು ಬಹುತೇಕ ಖಚಿತವಾಗಿದೆ. ಅದರೆ ಇದನ್ನು ಸಿಎಸ್ಕೆ ಫ್ರಾಂಚೈಸಿ ಅಧಿಕೃತವಾಗಿ ಘೋಷಿಸುವುದೊಂದೆ ಬಾಕಿ ಇದೆ.
ಇದನ್ನೂ ಓದಿ MS Dhoni: ಟೀಮ್ ಇಂಡಿಯಾದ ಆಯ್ಕೆ ಸಮಿತಿಗೆ ಧೋನಿ ಮುಖ್ಯಸ್ಥರಾಗಲಿ; ಪಾಕ್ ಕ್ರಿಕೆಟಿಗ ಸಲಹೆ
ಈ ಹಿಂದೆಯೇ ಚೆಪಾಕ್ ಮೈದಾನದಲ್ಲಿ ಅಭಿಮಾನಿಗಳ ಮುಂದೆ ಕಣಕ್ಕಿಳಿಯುವ ಮೂಲಕ ಧೋನಿ ಐಪಿಎಲ್ಗೆ ಗುಡ್ ಬೈ ಹೇಳಲು ಇಚ್ಛಿಸಿರುವುದಾಗಿ ತಿಳಿಸಿದ್ದರು. ಆದರೆ ಕೊರೊನಾ ಕಾರಣದಿಂದಾಗಿ ಕಳೆದ ಮೂರು ಸೀಸನ್ನಲ್ಲಿ ತವರು ಮೈದಾನದಲ್ಲಿ ಪಂದ್ಯಗಳು ನಡೆದಿರಲಿಲ್ಲ.