ಅಹಮದಾಬಾದ್: ಈಗಾಗಲೇ ಆಡಿದ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿ ಅಜೇಯ ಓಟ ಕಾಯ್ದುಕೊಂಡಿರುವ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್(Gujarat Titans) ಇದೀಗ ಮತ್ತೊಂದು ಪಂದ್ಯವನ್ನಾಡಲು ಸಜ್ಜಾಗಿದೆ. ಇಂದು(ಭಾನುವಾರ ಏಪ್ರಿಲ್ 9) ನಡೆಯುವ ಐಪಿಎಲ್ನ(IPL 2023) ಡಬಲ್ ಹೆಡರ್ನ ಮೊದಲ ಪಂದ್ಯದಲ್ಲಿ ಕೆಕೆಆರ್(Kolkata Knight Riders) ತಂಡದ ಸವಾಲು ಎದುರಿಸಲಿದೆ. ಈ ಪಂದ್ಯದಲ್ಲಿಯೂ ಮೇಲಗೈ ಸಾಧಿಸಿ ಹ್ಯಾಟ್ರಿಕ್ ಗೆಲುವು ದಾಖಲಿಸುವುದು ಪಾಂಡ್ಯ ಪಡೆಯ ಯೋಜನೆಯಾಗಿದೆ. ಅತ್ತ ಆರ್ಸಿಬಿ ವಿರುದ್ಧ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಕೆಕೆಆರ್ ಎರಡನೇ ಗೆಲುವಿನ ನಿರೀಕ್ಷೆಯಲ್ಲಿದೆ. ಹೀಗಾಗಿ ಈ ಪಂದ್ಯ ರೋಚಕವಾಗಿ ಸಾಗುವ ಸಾಧ್ಯತೆ ಇದೆ.
ಮಿಂಚಬೇಕಿದೆ ನಾಯಕ ಹಾರ್ದಿಕ್ ಪಾಂಡ್ಯ
ತಂಡದ ಆಟಗಾರರೆಲ್ಲ ಉತ್ತಮ ಬ್ಯಾಟಿಂಗ್ ಫಾರ್ಮ್ನಲ್ಲಿದ್ದರೂ ನಾಯಕ ಹಾರ್ದಿಕ್ ಪಾಂಡ್ಯ ಮಾತ್ರ ಇನ್ನೂ ಬ್ಯಾಟಿಂಗ್ ಲಯ ಕಂಡುಕೊಂಡಿಲ್ಲ. ಆಡಿದ ಎರಡೂ ಪಂದ್ಯಗಳಲ್ಲಿ ಇವರ ಗಳಿಕೆ ಬರೀ 8 ರನ್. ಆದ್ದರಿಂದ ಈ ಪಂದ್ಯದಲ್ಲಿ ಅವರು ನಿರೀಕ್ಷಿತ ಮಟ್ಟದ ಬ್ಯಾಟಿಂಗ್ ನಡೆಸಿ ತಂಡದ ಆತ್ಮವಿಶ್ವಾಸವನ್ನು ಇನ್ನೂ ಹೆಚ್ಚಿಸಬೇಕಿದೆ. ಶುಭಮನ್ ಗಿಲ್ ಮತ್ತು ವೃದ್ಧಿಮಾನ್ ಸಾಹಾ ಆರಂಭಿಕ ಮುನ್ನಡೆ ತಂದುಕೊಡುವಲ್ಲಿ ಸಮರ್ಥರಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಸಾಯಿ ಸುದರ್ಶನ್ ಕೂಡ ಉತ್ತಮ ಲಯದಲ್ಲಿ ಕಂಡು ಬಂದಿದ್ದಾರೆ. ಡೇವಿಡ್ ಮಿಲ್ಲರ್ ಫಿನಿಶರ್ ಸ್ಥಾನವನ್ನು ಅಚ್ಚು ಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಸದ್ಯ ಗುಜರಾತ್ ತಂಡ ಸಮತೋಲನವಾಗಿ ಗೋಚರಿಸಿದೆ. ಬೌಲಿಂಗ್ನಲ್ಲಿ ಅನುಭವಿ ಮೊಹಮ್ಮದ್ ಶಮಿ, ಅಲ್ಜಾರಿ ಜೋಸೆಫ್ ರಶೀದ್ ಖಾನ್ ಎದುರಾಳಿಗಳನ್ನು ಕಟ್ಟಿ ಹಾಕುವಲ್ಲಿ ಸಮರ್ಥರಿದ್ದಾರೆ.
ಇದನ್ನೂ ಓದಿ IPL 2023: ಶನಿವಾರದ ಡಬಲ್ ಹೆಡರ್ ಪಂದ್ಯದ ಬಳಿಕ ಅಂಕಪಟ್ಟಿ ಹೇಗಿದೆ?
ಆತ್ಮವಿಶ್ವಾಸದಲ್ಲಿ ಕೆಕೆಆರ್
ಪಂಜಾಬ್ ಕಿಂಗ್ಸ್ ವಿರುದ್ಧ ಆಡಿದ ಮೊದಲ ಪಂದ್ಯದಲ್ಲಿ ಮಳೆಯ ಕಾಟದಿಂದ ಸೋಲು ಕಂಡಿದ್ದ ಕೆಕೆಆರ್, ದ್ವಿತೀಯ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಭರ್ಜರಿ ಜಯ ಸಾಧಿಸಿ ಗೆಲುವಿನ ಟ್ರ್ಯಾಕ್ಗೆ ಮರಳಿದೆ. ಇದೇ ಆತ್ಮವಿಶ್ವಾಸದಲ್ಲಿರು ನಿತೀಶ್ ರಾಣಾ ಪಡೆ ಹಾರ್ದಿಕ್ ಪಡೆಗೆ ಮೊದಲ ಸೋಲಿನೇಟು ನೀಡುವು ವಿಶ್ವಾಸದಲ್ಲಿದೆ. ಕಳೆದ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ತಂಡ ಸಂಕಷ್ಟಕ್ಕೆ ಸಿಲುಕಿದ್ದ ವೇಳೆ ಸಿಡಲಬ್ಬರದ ಬ್ಯಾಟಿಂಗ್ ಮೂಲಕ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದ ಶಾರ್ದೂಲ್ ಠಾಕೂರ್ ಬ್ಯಾಟಿಂಗ್ ಮೇಲೆ ಈ ಪಂದ್ಯದಲ್ಲಿಯೂ ತಂಡ ಹೆಚ್ಚಿನ ಭರವಸೆ ಇರಿಸಿದೆ. ರಿಂಕು ಸಿಂಗ್ ಕೂಡ ಉತ್ತಮ ಬ್ಯಾಟಿಂಗ್ ಫಾರ್ಮ್ನಲ್ಲಿದ್ದಾರೆ. ಆದರೆ ಅಗ್ರ ಕ್ರಮಾಂಕದ ಬ್ಯಾಟರ್ಗಳಾದ ವೆಂಕಟೇಶ್ ಅಯ್ಯರ್, ನಾಯಕ ನಿತೀಶ್ ರಾಣಾ ಈ ವರೆಗೆ ದೊಡ್ಡ ಇನಿಂಗ್ಸ್ ಆಡಿಲ್ಲ. ಕೆಕೆಆರ್ ಬೌಲಿಂಗ್ ಅತ್ಯಂತ ಘಾತಕವಾಗಿದೆ. ವರುಣ್ ಚಕ್ರವರ್ತಿ, ಸುನೀಲ್ ನಾರಾಯಣ್, ಸುಯಶ್ ಶರ್ಮ ಭರ್ಜರಿ ಲಯದಲ್ಲಿದ್ದಾರೆ.