ನವದೆಹಲಿ: ಶನಿವಾರ ರಾತ್ರಿ ನಡೆದ ಸಣ್ಣ ಮೊತ್ತದ ಮೇಲಾಟದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪಂಜಾಬ್ ಕಿಂಗ್ಸ್ ಮಗುಚಿ ಹಾಕಿದೆ. 31 ರನ್ಗಳ ಅಂತರದಿಂದ ಗೆದ್ದ ಪಂಜಾಬ್ ಪ್ಲೇ ಆಫ್ ರೇಸ್ನಲ್ಲಿ ತಾನು ಕೂಡ ಪ್ರತಿಸ್ಪರ್ಧಿ ಎಂಬ ಸಂದೇಶವೊಂದನ್ನು ನೀಡಿದೆ. ಪಂಜಾಬ್ ಪರ ಬ್ಯಾಟಿಂಗ್ನಲ್ಲಿ ಪ್ರಭ್ಶಿಮ್ರಾನ್ ಸಿಂಗ್(103) ಅವರು ಶತಕ ಬಾರಿಸಿ ಮಿಂಚಿದರೆ, ಬೌಲಿಂಗ್ನಲ್ಲಿ ಹರ್ಪ್ರೀತ್ ಬ್ರಾರ್ 4 ವಿಕೆಟ್ ಕಿತ್ತು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 167 ರನ್ ಗಳಿಸಿತು. ಜವಾಬಿತ್ತ ಡೆಲ್ಲಿ ಕ್ಯಾಪಿಟಲ್ಸ್ ನಾಟಕೀಯ ಕುಸಿತ ಕಂಡು ತನ್ನ ಪಾಲಿನ ಆಟದಲ್ಲಿ 8 ವಿಕೆಟ್ ನಷ್ಟಕ್ಕೆ 136 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಸಣ್ಣ ಮೊತ್ತವನ್ನು ಬೆನ್ನಟ್ಟಿದ ಡೆಲ್ಲಿಗೆ ಡೇವಿಡ್ ವಾರ್ನರ್(54) ಮತ್ತು ಫಿಲಿಪ್ ಸಾಲ್ಟ್(21) ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್ಗೆ 69 ರನ್ ಜತೆಯಾಟ ನಡೆಸಿದರು. ಆದರೆ ಆ ಬಳಿಕ ಡೆಲ್ಲಿ ನಾಟಕೀಯ ಕುಸಿತ ಕಂಡಿತು. ಮಿಚೆಲ್ ಮಾರ್ಷ್(3), ರಿಲೀ ರೊಸೊ(5), ಅಕ್ಷರ್ ಪಟೇಲ್(1), ಮನೀಷ್ ಪಾಂಡೆ(0) ಸರತಿ ಸಾಲಿನಲ್ಲಿ ಕ್ರೀಸ್ಗೆ ಇಳಿದಂತೆ ವಾಪಾಸ್ ಹಿಂದಿರುಗಿ ಬಂದರು. ಈ ವೇಳೆ ಪಂಜಾಬ್ ಗೆಲ್ಲುವ ಸಾಧ್ಯತೆಯೂ ದಟ್ಟವಾಯಿತು. ಅಂತಿಮವಾಗಿ ಪ್ರವೀಣ್ ದುಬೆ ಮತ್ತು ಅಮಾನ್ ಹಕೀಮ್ ಖಾನ್ ಶಕ್ತಿ ಮೀರಿ ಪ್ರಯತ್ನಿಸಿದರೂ ಅವರಿಂದ ಪಂದ್ಯವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ.
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಪಂಜಾಬ್ ತನ್ನ ಖ್ಯಾತಿಗೆ ತಕ್ಕಂತೆ ಆಟವಾಡುವಲ್ಲಿ ವಿಫಲವಾಯಿತು. ಬ್ಯಾಟಿಂಗ್ ಮರೆತವರಂತೆ ಕ್ರೀಸ್ಗಿಳಿದ ನಾಯಕ ಶಿಖರ್ ಧವನ್(7), ಜಿತೇಶ್ ಶರ್ಮ(5) ಮತ್ತು ಲಿಯಾಮ್ ಲಿವಿಂಗ್ಸ್ಟೋನ್(4) ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಪರೇಡ್ ನಡೆಸಿದರು.
ನಂಬುಗೆಯ ಬ್ಯಾಟರ್ಗಳೆಲ್ಲ ಕೈ ಕೊಟ್ಟಾಗ ಟೊಂಕ ಕಟ್ಟಿ ನಿಂತ ಆರಂಭಿಕ ಆಟಗಾರ ಪ್ರಭ್ಸಿಮ್ರಾನ್ ಸಿಂಗ್ ಅವರು ಏಕಾಂಗಿಯಾಗಿ ಹೋರಾಟ ನಡೆಸಿದರು. ಡೆಲ್ಲಿ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದ ಅವರು ಶತಕ ಬಾರಿಸಿ ಸಂಭ್ರಮಿಸಿದರು. ಜತೆಗೆ ತಂಡದ ಮೊತ್ತವನ್ನು ಹಿಗ್ಗಿಸಿದರು. ಆದರೆ ಇವರಿಗೆ ಯಾವ ಆಟಗಾರನು ಉತ್ತಮ ಸಾಥ್ ನೀಡಲೇ ಇಲ್ಲ. ಆಲ್ರೌಂಡರ್ ಸ್ಯಾಮ್ ಕರನ್ ಅವರು ಇನ್ನೇನು ತಂಡಕ್ಕೆ ಆಸರೆಯಾಗುತ್ತಾರೆ ಎನ್ನುವಷ್ಟರಲ್ಲಿ ಪ್ರವೀಣ್ ದುಬೆ ಅವರು ಈ ವಿಕೆಟ್ ಕಿತ್ತರು. ಕರನ್ 20 ರನ್ ಗಳಿಸಿದರು. ಬಳಿಕ ಬಂದ ಹರ್ಪ್ರೀತ್ ಬ್ರಾರ್ 5 ಎಸೆತ ಎದುರಿಸಿ ಕೇವಲ 2 ರನ್ ಗಳಿಸಿದರು.
ಇದನ್ನೂ ಓದಿ IPL 2023: ಟಾಸ್ ಗೆದ್ದ ಡೆಲ್ಲಿ; ಪಂಜಾಬ್ಗೆ ಬ್ಯಾಟಿಂಗ್ ಆಹ್ವಾನ
ಚೊಚ್ಚಲ ಶತಕ ಬಾರಿಸಿದ ಪ್ರಭ್ಸಿಮ್ರಾನ್
ಏಕಾಂಗಿಯಾಗಿ ಹೋರಾಟ ನಡೆಸಿದ ಪ್ರಭ್ಸಿಮ್ರಾನ್ ಸಿಂಗ್ ಅವರು ಜವಾಬ್ದಾರಿಯುತ ಬ್ಯಾಟಿಂಗ್ ನಡೆಸುವ ಮೂಲಕ ಐಪಿಎಲ್ನಲ್ಲಿ ಚೊಚ್ಚಲ ಶತಕ ಬಾರಿಸಿ ಮಿಂಚಿದರು. ಈ ಮೂಲಕ ಐಪಿಎಲ್ ಕ್ರಿಕೆಟ್ನಲ್ಲಿ ಅತಿ ಕಿರಿಯ ವಯಸ್ಸಿನಲ್ಲಿ ಶತಕ ಬಾರಿಸಿದ 6ನೇ ಬ್ಯಾಟರ್ ಎನಿಸಿಕೊಂಡರು. ಮನೀಷ್ ಪಾಂಡೆ ಅವರು 19 ವರ್ಷದಲ್ಲಿ ಆರ್ಸಿಬಿ ಪರ ಶತಕ ಬಾರಿಸಿ ಅಗ್ರಸ್ಥಾನದಲ್ಲಿದ್ದಾರೆ. ಡೆಲ್ಲಿ ಬೌಲರ್ಗಳಿಗೆ ಸಿಕ್ಸರ್ ಮತ್ತು ಬೌಂಡರಿ ರುಚಿ ತೋರಿಸಿದ ಅವರು 65 ಎಸೆತಗಳಿಂದ 103 ರನ್ ಬಾರಿಸಿ ಔಟಾದರು. ಅವರು ಒಟ್ಟು 6 ಸಿಕ್ಸರ್ ಮತ್ತು 10 ಬೌಂಡರಿ ಬಾರಿಸಿದರು. ಒಂದೊಮ್ಮೆ ಇವರು ಆಡದೇ ಹೋಗುತ್ತಿದ್ದರೆ ತಂಡ 50 ರನ್ ದಾಟುವುದು ಕೂಡ ಕಷ್ಟಸಾಧ್ಯ ಎನ್ನುವಂತಿತ್ತು. ತಂಡ ದಾಖಲಿಸಿದ ಬಹುಪಾಲು ಮೊತ್ತ ಇವರದ್ದೇ ಆಗಿತ್ತು.
ಇದನ್ನೂ ಓದಿ IPL 2023: ಹೈದರಾಬಾದ್ ಕದನ ಗೆದ್ದ ಲಕ್ನೋ; ಪ್ಲೇ ಆಫ್ ಆಸೆ ಜೀವಂತ
ದಾಖಲೆ ಬರೆದ ಇಶಾಂತ್ ಶರ್ಮ
ಹಿರೀಯ ವೇಗಿ ಇಶಾಂತ್ ಶರ್ಮ ಅವರು ಈ ಪಂದ್ಯದಲ್ಲಿ ವಿಶೇಷ ದಾಖಲೆಯೊಂದನ್ನು ಬರೆದರು. ಪಂಜಾಬ್ ತಂಡದ ನಾಯಕ ಶಿಖರ್ ಧವನ್ ಅವರ ವಿಕೆಟ್ ಕಿತ್ತು ಐಪಿಎಲ್ ವೃತ್ತಿಜೀವನದಲ್ಲಿ ನೂರು ವಿಕೆಟ್ ಕಿತ್ತ ಸಾಧನೆ ಮಾಡಿದರು.