ಮುಂಬೈ: ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಗುಜರಾತ್ ಟೈಟನ್ಸ್ ಮತ್ತು ಮುಂಬೈ ಇಂಡಿಯನ್ಸ್ ಶುಕ್ರವಾರದ ಐಪಿಎಲ್(IPL 2023) ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಅಹಮದಾಬಾದ್ನಲ್ಲಿ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಮುಂಬೈ ತಂಡ 55 ರನ್ಗಳ ಸೋಲು ಕಂಡಿತ್ತು. ಈ ಸೋಲಿಗೆ ಇದೀಗ ತವರಿನಲ್ಲಿ ಸೇಡು ತೀರಿಸಲು ಮುಂಬೈ ಕಾದು ಕುಳಿತಿದೆ.
ವಿಶ್ವ ಕ್ರಿಕೆಟ್ನ ಬಲಾಡ್ಯ ಆಟಗಾರರನ್ನು ಹೊಂದಿದ್ದರೂ ಆರಂಭಿಕ ಹಂತದಲ್ಲಿ ತೀರಾ ಕಳಪೆ ಪ್ರದರ್ಶನ ತೋರುವ ಮೂಲಕ ಇನ್ನೇನು ಕೂಟದಿಂದ ಹೊರಬೀಳುತ್ತದೆ ಎನ್ನುವಷ್ಟರಲ್ಲಿ ಫಿನಿಕ್ಸ್ನಂತೆ ಎದ್ದು ನಿಂತ ಮುಂಬೈ ಆ ಬಳಿಕದ ಮಹತ್ವದ ಪಂದ್ಯವನ್ನೆಲ್ಲಾ ಗೆದ್ದು ಸದ್ಯ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಅವರ ಈ ಆಟವನ್ನು ಗಮನಿಸುವಾಗ ತಂಡ ಈ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದರೂ ಅಚ್ಚರಿ ಇಲ್ಲ. ಏಕೆಂದರೆ ಮುಂಬೈ ತಂಡದ ಇತಿಹಾಸವನ್ನು ಗಮನಿಸುವಾಗ ಆರಂಭಿಕ ಹಲವು ಪಂದ್ಯಗಳನ್ನು ಸೋತು ಆ ಬಳಿಕ ಎಲ್ಲ ಪಂದ್ಯಗಳನ್ನು ಗೆದ್ದು ಕಪ್ ಗೆದ್ದ ನಿದರ್ಶನ ಹಲವು ಇವೆ. ಹೀಗಾಗಿ ಮುಂಬೈ ಮೇಲೆ ಈ ಬಾರಿಯೂ ಇಂತಹದ್ದೇ ನಂಬಿಕೆಯೊಂದನ್ನು ಇಟ್ಟರೂ ತಪ್ಪಾಗಲಾರದು.
ಸೂರ್ಯಕುಮಾರ್ ಯಾದವ್ ಮತ್ತು ಯುವ ಆಟಗಾರ ವಧೇರಾ ಅವರು ಪ್ರಚಂಡ ಬ್ಯಾಟಿಂಗ್ ಫಾರ್ಮ್ನಲ್ಲಿದ್ದಾರೆ. ಆದರೆ ನಾಯಕ ರೋಹಿತ್ ಅವರ ಬ್ಯಾಟಿಂಗ್ ಮಾತ್ರ ಪ್ರತಿ ಪಂದ್ಯದಲ್ಲಿಯೂ ತಂಡಕ್ಕೆ ಹಿನ್ನಡೆಯಾಗುತ್ತಲೇ ಬರುತ್ತಿದೆ. ಉಳಿದಂತೆ ಬೌಲಿಂಗ್ ಕೂಡ ಅಷ್ಟು ಘಾತಕವಾಗಿಲ್ಲ. ಈ ಸಮಸ್ಯೆ ಬಗೆಹರಿಯಲೇ ಬೇಕಿದೆ.
ಗುಜರಾತ್ ಸವಾಲು ಕೂಡ ಅಷ್ಟು ಸುಲಭದಲ್ಲ. ಈ ತಂಡ ಕೇವಲ ಒಂದು ಅಥವಾ 2 ಆಟಗಾರರನ್ನು ನೆಚ್ಚಿಕೊಂಡಿಲ್ಲ. ಆಡಲಿಳಿದ ಎಲ್ಲ ಬ್ಯಾಟರ್ಗಳು ಒಬ್ಬರಿಗಿಂತ ಒಬ್ಬರು ಶ್ರೇಷ್ಠರು. ಸಿಕ್ಕ ಅವಕಾಶವನ್ನು ಸರಿಯಾಗಿಯೇ ಬಳಸಿಕೊಳ್ಳುತ್ತಾರೆ. ಅದರಲ್ಲೂ ಹಿರಿಯ ಆಟಗಾರ ವೃದ್ಧಿಮಾನ್ ಸಾಹಾ ಅವರಂತು ಫುಲ್ ಬ್ಯಾಟಿಂಗ್ ಜೋಶ್ನಲ್ಲಿದ್ದಾರೆ. ಬೌಲಿಂಗ್ ಕೂಡ ತುಂಬಾನೆ ಘಾತಕವಾಗಿದೆ. ರಶೀದ್ ಖಾನ್, ಮೊಹಮ್ಮದ್ ಶಮಿ, ನಾಯಕ ಪಾಂಡ್ಯ, ಮೋಹಿತ್ ಶರ್ಮ ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ಸಮರ್ಥರಿದ್ದಾರೆ.
ಸಂಭಾವ್ಯ ತಂಡಗಳು
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ನೆಹಾಲ್ ವಧೇರಾ, ಕ್ಯಾಮರೂನ್ ಗ್ರೀನ್, ಟಿಮ್ ಡೇವಿಡ್, ಕ್ರಿಸ್ ಜೋರ್ಡಾನ್, ಪಿಯೂಷ್ ಚಾವ್ಲಾ, ಜೇಸನ್ ಬೆಹ್ರೆಂಡಾರ್ಫ್, ಕುಮಾರ್ ಕಾರ್ತಿಕೇಯ, ಆಕಾಶ್ ಮಧ್ವಲ್
ಗುಜರಾತ್ ಟೈಟನ್ಸ್: ವೃದ್ಧಿಮಾನ್ ಸಹಾ, ಶುಭಮನ್ ಗಿಲ್, ಹಾರ್ದಿಕ್ ಪಾಂಡ್ಯ (ನಾಯಕ), ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ನೂರ್ ಅಹ್ಮದ್, ಮೊಹಮ್ಮದ್ ಶಮಿ, ಮೋಹಿತ್ ಶರ್ಮಾ.